ಬೆಳಗಾವಿ: ‘ಹಾಸ್ಟೆಲ್‌ಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿ ಪ್ರಮಾಣಿತ ಕಾರ್ಯಾಚರಣೆ ವಿಧಾನ(ಎಸ್‌ಒಪಿ) ಅನುಸರಿಸುತ್ತಿಲ್ಲ’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಬೇಸರಿಸಿದರು.
ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯಾದ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲಾಡಳಿತಗಳು ಮತ್ತು ಸಂಸ್ಥೆಗಳಿಗೆ ಐದು ತಿಂಗಳ ಹಿಂದೆ ಪತ್ರ ಬರೆದು, ಎಸ್‌ಒಪಿ ಪಾಲನೆ ಕುರಿತು ಮಾಹಿತಿ ಕೇಳಿದ್ದೆವು. ಆದರೆ, ಇನ್ನೂ ಕೊಟ್ಟಿಲ್ಲ. ಈಗ ಕೋಲ್ಕತ್ತಾದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ ಘಟನೆ ನಡೆದ ನಂತರ, ಮತ್ತೊಮ್ಮೆ ಪತ್ರ ಬರೆದಿದ್ದೇವೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಜತೆಯೂ ಸಂವಹನ ನಡೆಸಿ, ಹಾಸ್ಟೆಲ್‌ಗಳು ಮತ್ತು ಸಂಸ್ಥೆಗಳಲ್ಲಿ ಎಸ್‌ಒಪಿ ಅನುಸರಿಸುತ್ತಿರುವ ಕುರಿತು ಮಾಹಿತಿ ನೀಡುವಂತೆ ಸೂಚಿಸಿದ್ದೇವೆ’ ಎಂದರು.
‘ಕೋಲ್ಕತ್ತಾದ ಘಟನೆಯ ನಂತರ, ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿ ಕೇಳಿರುವ ಮಾಹಿತಿಯನ್ನು ಎಲ್ಲರೂ ಕಳುಹಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇವೆ. ಎಸ್ಒಪಿ ಅನುಷ್ಠಾನಗೊಳಿಸುವುದು ಆಯಾ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳ ಜವಾಬ್ದಾರಿ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ನಾನು ವಸತಿ ನಿಲಯಗಳು ಹಾಗೂ ಇತರೆ ಸಂಸ್ಥೆಗಳಿಗೆ ಭೇಟಿ ನೀಡಿದಾಗ, ಎಸ್‌ಒಪಿ ಅನುಸರಿಸದಿರುವುದು ಕಂಡುಬಂದಿದೆ. ಕೆಲವೆಡೆ ಮಹಿಳೆಯರಿಗೆ ಯಾವುದೇ ಭದ್ರತೆ ಮತ್ತು ಸುರಕ್ಷತಾ ಕ್ರಮ ಇರಲಿಲ್ಲ. ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಕಾನೂನುಗಳು ಮತ್ತು ತುರ್ತು ಸಂಪರ್ಕ ಸಂಖ್ಯೆಗಳ ಬಗ್ಗೆ ತಿಳಿದಿರಲಿಲ್ಲ. ಉತ್ತಮ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ಬಗ್ಗೆಯೂ ಅರಿವು ಇರಲಿಲ್ಲ’ ಎಂದರು.
‘ಎಸ್‌ಒಪಿ ಪಾಲನೆಯಾಗದ ಪರಿಣಾಮವೇ ಇತ್ತೀಚೆಗೆ ಬೆಂಗಳೂರಿನಲ್ಲಿ ಪೇಯಿಂಗ್ ಗೆಸ್ಟ್ ವಸತಿಗೃಹದಲ್ಲಿ ಬಾಲಕಿ ಕೊಲೆಯಾಗಿದೆ. ಕೆಲವು ಜಿಲ್ಲಾಡಳಿತ ಸಭೆ ನಡೆಸಿದ್ದು, ತಾವು ಕೈಗೊಂಡಿರುವ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ’ ಎಂದು ಹೇಳಿದರು.
‘ಸವದತ್ತಿ ತಾಲ್ಲೂಕು ಆಸ್ಪತ್ರೆಯಲ್ಲಿ ‘ಡಿ’ ದರ್ಜೆ ಮಹಿಳಾ ಕಾರ್ಮಿಕರಿಗೆ ಕನಿಷ್ಠ ವೇತನ ನೀಡದಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಏಜೆನ್ಸಿ ಗುತ್ತಿಗೆಯನ್ನು ರದ್ದುಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.