ಇಮಾಮ್‌ಹುಸೇನ್ ಗೂಡುನವರ/ ಪ್ರದೀಪ ಮೇಲಿನಮನಿ
ಬೆಳಗಾವಿ/ಚನ್ನಮ್ಮನ ಕಿತ್ತೂರು: ಜಿಲ್ಲೆಯ ಚನ್ನಮ್ಮನ ಕಿತ್ತೂರು ಮತ್ತು ರಾಯಬಾಗದಲ್ಲಿ ಪೂರ್ಣಪ್ರಮಾಣದ ಕ್ಷೇತ್ರ ಶಿಕ್ಷಣಾಧಿಕಾರಿಯೇ(ಬಿಇಒ) ಇಲ್ಲ. ಇದರಿಂದಾಗಿ ಆಡಳಿತಾತ್ಮಕ ಕೆಲಸಗಳಿಗೆ ತೊಡಕಾಗಿದೆ.
ಕಿತ್ತೂರಿನಲ್ಲಿ ಸರ್ಕಾರಿ, ಅನುದಾನಿತ, ಅನುದಾನರಹಿತ ಸೇರಿದಂತೆ 131 ಪ್ರಾಥಮಿಕ, ಪ್ರೌಢಶಾಲೆಗಳು, ರಾಯಬಾಗದಲ್ಲಿ 549 ಪ್ರಾಥಮಿಕ, ಪ್ರೌಢಶಾಲೆಗಳಿವೆ. ವಿವಿಧ ಕೆಲಸಗಳು ಮತ್ತು ಬೇಡಿಕೆಗಳನ್ನು ಹೊತ್ತು ನಿತ್ಯ ನೂರಾರು ಜನರು ಬಿಇಒ ಕಚೇರಿಗೆ ಬರುತ್ತಾರೆ. ಮುಖ್ಯಶಿಕ್ಷಕರು, ಶಿಕ್ಷಕರು ಎಡತಾಕುತ್ತಿದ್ದಾರೆ. ಆದರೆ, ಪೂರ್ಣಪ್ರಮಾಣದ ಬಿಇಒ ಇಲ್ಲದ್ದರಿಂದ ವಿವಿಧ ಕೆಲಸಗಳಿಗೆ ಹಿನ್ನಡೆಯಾಗುತ್ತಿದೆ.
ಒಂದೂವರೆ ತಿಂಗಳಿಂದ ಇಲ್ಲ: ಕಿತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಆರ್.ಟಿ.ಬಳಿಗಾರ, ಜುಲೈ 6ರಂದು ವರ್ಗಾವಣೆಯಾಗಿದ್ದಾರೆ. ಸ್ಥಳೀಯ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಯೋಜಕಿ ಗಾಯತ್ರಿ ಅಜ್ಜನ್ನವರ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಒಂದೂವರೆ ತಿಂಗಳಾದರೂ ಮತ್ತೊಬ್ಬರ ನೇಮಕವಾಗಿಲ್ಲ. ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಮತ್ತು ಶಿಕ್ಷಕರಿಗೆ ತರಬೇತಿ ಕೊಡುವ ಜವಾಬ್ದಾರಿ ಹೊತ್ತಿರುವ ಅಜ್ಜನ್ನವರ ಅವರಿಗೆ ಈಗ ಎರಡೂ ಹುದ್ದೆ ನಿಭಾಯಿಸುವುದು ಸವಾಲಾಗಿ ಪರಿಣಮಿಸಿದೆ.
ರಾಯಬಾಗ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಪ್ರಭಾವತಿ ಪಾಟೀಲ, ಆಗಸ್ಟ್ 2ರಂದು ವರ್ಗಾವಣೆಯಾಗಿದ್ದಾರೆ. ನಿಪ್ಪಾಣಿ ತಾಲ್ಲೂಕಿನ ದೈಹಿಕ ಶಿಕ್ಷಣ ಪರಿವೀಕ್ಷಕರಾಗಿದ್ದ ಶಾಂತಾರಾಮ ಜೋಗಳೆ ಆಗಸ್ಟ್ 7ರಂದು ಪ್ರಭಾರ ಬಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಲ್ಲಿಯೂ ಮತ್ತೊಬ್ಬರ ನೇಮಕವಾಗಿಲ್ಲ.
ವೇತನ ಬಂದಿಲ್ಲ: ‘ಆಗಸ್ಟ್ 4ನೇ ವಾರ ಬಂದರೂ ಕಿತ್ತೂರು ತಾಲ್ಲೂಕಿನ ಶಿಕ್ಷಕರಿಗೆ ಜುಲೈ ತಿಂಗಳ ವೇತನ ಪಾವತಿಯಾಗಿಲ್ಲ. ಈ ಬಗ್ಗೆ ವಿಚಾರಿಸಿದರೆ ಅಧಿಕಾರಿಗಳು ನಿಖರವಾದ ಮಾಹಿತಿಯನ್ನೂ ಕೊಡುತ್ತಿಲ್ಲ. ಸಕಾಲಕ್ಕೆ ವೇತನ ಸಿಗದೆ ಪರದಾಡುವಂತಾಗಿದೆ’ ಎಂದು ಶಿಕ್ಷಕರು ಸಮಸ್ಯೆ ಹೇಳಿಕೊಂಡರು.
‘ಕಿತ್ತೂರು ಬಿಇಒ ಕಚೇರಿ ಈಗ ಹಿಡಿತ ಕಳೆದುಕೊಂಡಿದೆ. ಆಡಳಿತಾತ್ಮಕವಾಗಿಯೂ ನಿಸ್ತೇಜಗೊಂಡಿದೆ. ವಲಯಮಟ್ಟದ ಕ್ರೀಡಾಕೂಟ ಮುಕ್ತಾಯವಾಗಿವೆ. ತಾಲ್ಲೂಕುಮಟ್ಟಕ್ಕೆ ತಯಾರಿ ಮಾಡಿಕೊಳ್ಳಬೇಕಿದೆ. ಆದರೆ, ಕಚೇರಿಯಲ್ಲಿ ಏನೇ ಕೇಳಿದರೂ ‘ಸಾಹೇಬ್ರು ಇಲ್ಲ’ ಎಂಬ ಸಿದ್ಧ ಉತ್ತರ ಸಿಗುತ್ತಿದೆ. ಪೂರ್ಣಪ್ರಮಾಣದ ಅಧಿಕಾರಿ ನೇಮಕವೇ ಇದಕ್ಕೆ ಪರಿಹಾರ’ ಎಂಬ ಅಭಿಪ್ರಾಯ ಶಿಕ್ಷಕರ ವಲಯದಿಂದ ಕೇಳಿಬರುತ್ತಿದೆ.
‘ಆಡಳಿತಾತ್ಮಕ ಹಾಗೂ ವಿಶೇಷ ಪ್ರಕರಣಗಳಲ್ಲಿ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ವಯಂಅಧಿಕಾರ ಕೈಗೊಳ್ಳುವುದು ಕಷ್ಟ. ಯಾವುದೇ ಮಹತ್ವದ ವಿಷಯವಿದ್ದರೂ, ಡಿಡಿಪಿಐಗೆ ವರದಿ ಸಲ್ಲಿಸಿ ಅನುಮತಿ ಪಡೆಯಬೇಕು. ಈ ಪ್ರಕ್ರಿಯೆ ವಿಳಂಬವಾಗುತ್ತದೆ’ ಎಂದು ಶಿಕ್ಷಕರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.