ಬೆಳಗಾವಿ: ಪ್ರಸಕ್ತ ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ, ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 23,437 ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಇನ್ನೂ ಮೊದಲ ಜೊತೆ ಸಮವಸ್ತ್ರವೇ ಸಿಕ್ಕಿಲ್ಲ.
ಪ್ರತಿ ವರ್ಷ ಶಾಲೆ ಆರಂಭಗೊಳ್ಳುತ್ತಲೇ ಸಮವಸ್ತ್ರ ವಿದ್ಯಾರ್ಥಿಗಳ ಕೈಸೇರುತ್ತಿತ್ತು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಕಳೆದ ಶೈಕ್ಷಣಿಕ ವರ್ಷ ಸರ್ಕಾರ ವಿತರಿಸಿರಲಿಲ್ಲ. ಈ ಬಾರಿ ತರಗತಿ ಆರಂಭಗೊಂಡು ಐದು ತಿಂಗಳಾದರೂ ಎಲ್ಲ ವಿದ್ಯಾರ್ಥಿಗಳಿಗೂ ಸಮವಸ್ತ್ರ ದೊರೆತಿಲ್ಲ. ಹಾಗಾಗಿ ಮಕ್ಕಳು ಹಳೆಯ ಸಮವಸ್ತ್ರದಲ್ಲೇ ಶಾಲೆಗೆ ಬರುತ್ತಿದ್ದಾರೆ. ಕೆಲವರು ಸಾಮಾನ್ಯ ದಿರಿಸಿನಲ್ಲೇ ಶಾಲಾ ಅಂಗಳ ಪ್ರವೇಶಿಸುತ್ತಿದ್ದಾರೆ.
ಎಷ್ಟು ಮಕ್ಕಳಿಗೆ ವಿತರಣೆ?:
ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 1ರಿಂದ 10ನೇ ತರಗತಿ ಓದುತ್ತಿರುವ 2,10,192 ವಿದ್ಯಾರ್ಥಿಗಳಿಗೆ ಮೊದಲ ಜೊತೆ ಸಮವಸ್ತ್ರದ ಬೇಡಿಕೆ ಸಲ್ಲಿಸಲಾಗಿತ್ತು. ಈ ಪೈಕಿ 1,96,871 ವಿದ್ಯಾರ್ಥಿಗಳಿಗೆ ಪೂರೈಕೆಯಾಗಿದ್ದು, ಈಗಾಗಲೇ ವಿತರಿಸಲಾಗಿದೆ. 13,321 ವಿದ್ಯಾರ್ಥಿಗಳಿಗೆ ವಿತರಣೆ ಆಗಬೇಕಿದೆ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 2,55,757 ವಿದ್ಯಾರ್ಥಿಗಳಿಗೆ ಸಮವಸ್ತ್ರದ ಬೇಡಿಕೆ ಸಲ್ಲಿಸಲಾಗಿದ್ದು, ಈವರೆಗೆ 2,45,641 ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ. 10,116 ವಿದ್ಯಾರ್ಥಿಗಳಿಗೆ ಇನ್ನೂ ನೀಡಿಲ್ಲ.
2ನೇ ಜೊತೆ ಸಮವಸ್ತ್ರವೂ ಇಲ್ಲ:
ಸರ್ಕಾರಿ ಶಾಲೆಗಳಲ್ಲಿ 1ರಿಂದ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ ಸರ್ವ ಶಿಕ್ಷಣ ಅಭಿಯಾನ ಯೋಜನೆಯಲ್ಲಿ 2ನೇ ಜೊತೆ ಸಮವಸ್ತ್ರ ವಿತರಿಸಲಾಗುತ್ತಿತ್ತು. ಆದರೆ, ಅನುದಾನ ಕೊರತೆಯಿಂದಾಗಿ ಈ ಬಾರಿ ಯಾವುದೇ ವಿದ್ಯಾರ್ಥಿಗೂ ಸಮವಸ್ತ್ರ ಲಭಿಸಿಲ್ಲ.
‘ಪ್ರತಿ ವರ್ಷದಂತೆ ಸರ್ಕಾರ 4.42 ಲಕ್ಷ ವಿದ್ಯಾರ್ಥಿಗಳಿಗೆ ಸಮವಸ್ತ್ರ ಪೂರೈಸಿದೆ. ಆದರೆ, ಕೋವಿಡ್ ಸಂಕಷ್ಟ ಸಮಯದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆದಿದ್ದಾರೆ. ಹಲವರು ಖಾಸಗಿ ಶಾಲೆ ತೊರೆದಿದ್ದರಿಂದ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಗಣನೀಯವಾಗಿ ಹೆಚ್ಚಿದೆ. ಆದರೆ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸಮವಸ್ತ್ರ ಬಾರದಿರುವುದು ಸಮಸ್ಯೆಗೆ ಕಾರಣವಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
‘ಪ್ರಸ್ತುತ ದಿನಗಳಲ್ಲಿ ಬದುಕು ಸಾಗಿಸುವುದೇ ಕಷ್ಟವಾಗಿದೆ. ಹೀಗಿರುವಾಗ ಮಾರುಕಟ್ಟೆಯಲ್ಲಿ ಮಕ್ಕಳಿಗೆ ಸಮವಸ್ತ್ರ ಖರೀದಿಸುವುದಾದರೂ ಹೇಗೆ? ಸರ್ಕಾರ ಕೂಡಲೇ ಸಮಸ್ಯೆ ಬಗೆಹರಿಸಿ, ಬಾಕಿ ಉಳಿದ ವಿದ್ಯಾರ್ಥಿಗಳಿಗೂ ಸಮವಸ್ತ್ರ ವಿತರಿಸಲು ಕ್ರಮ ಕೈಗೊಳ್ಳಬೇಕು’ ಎಂದು ವಿದ್ಯಾರ್ಥಿಗಳ ಪಾಲಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.