ಬೆಳಗಾವಿ: ‘ಬ್ರಿಟಿಷ್ ಕೌನ್ಸಿಲ್‌ನವರು ರಾಜ್ಯ ಉನ್ನತ ಶಿಕ್ಷಣ ಪರಿಷತ್ ಸಹಯೋಗದಲ್ಲಿ ಇಂಗ್ಲೆಂಡ್‌ನ ಯೂನಿವರ್ಸಿಟಿ ಆಫ್ ಈಸ್ಟ್ ಲಂಡನ್‌ಗೆ ನ.9ರಿಂದ 23ರವರೆಗೆ ಹಮ್ಮಿಕೊಂಡಿರುವ ಅಧ್ಯಯನ ಪ್ರವಾಸಕ್ಕೆ ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ (ಆರ್‌ಸಿಯು) ಐದು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ’ ಎಂದು ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಹೇಳಿದರು.
ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಧ್ಯಯನ ಪ್ರವಾಸಕ್ಕೆ ವಿದ್ಯಾರ್ಥಿಗಳ ಆಯ್ಕೆಗಾಗಿ ಸರ್ಕಾರದ ನಿರ್ದೇಶನದಂತೆ ಪರೀಕ್ಷೆ ಸಂಘಟಿಸಿದ್ದೆವು. ಇದರಲ್ಲಿ ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಕಾಲೇಜಿನ ಮೀರಾ ನದಾಫ್, ಅನಾಮಿಕಾ ಶಿಂಧೆ, ಖಾನಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುವರಾಜ ಪಾಟೀಲ, ಗೋಕಾಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಜಗದೀಶ ಅರಭಾವಿ ಮತ್ತು ದಾನೇಶ್ವರಿ ಮಾದರ ಸಾಧನೆ ಮೆರೆದು ಪ್ರವಾಸಕ್ಕೆ ಹೊರಡಲು ಸಿದ್ಧವಾಗಿದ್ದಾರೆ. ಇವರೆಲ್ಲರೂ ಬಿ.ಎ., ಬಿ.ಎಸ್ಸಿ, ಬಿಬಿಎ 4ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದಾರೆ. ಕಾರ್ಯಕ್ರಮದ ನೋಡಲ್ ಅಧಿಕಾರಿಯಾಗಿ ಪ್ರಾಧ್ಯಾಪಕ ಅಶೋಕ ಡಿಸೋಜಾ ಅವರನ್ನು ನೇಮಿಸಲಾಗಿದೆ’ ಎಂದರು.
‘ಇಂಗ್ಲೆಂಡ್‌ನ ವಿಶ್ವವಿದ್ಯಾಲಯದ ಶೈಕ್ಷಣಿಕ ವ್ಯವಸ್ಥೆ ಮತ್ತು ಸಂಶೋಧನೆಗೆ ಶೇ 92ರಷ್ಟು ಮನ್ನಣೆ ಇದೆ. ನಮ್ಮ ವಿದ್ಯಾರ್ಥಿಗಳು ಅಲ್ಲಿಗೆ ಹೋಗುವುದರಿಂದ ಅಂತರರಾಷ್ಟ್ರೀಯ ಶೈಕ್ಷಣಿಕ ವ್ಯವಸ್ಥೆ ಪರಿಚಯವಾಗಲಿದೆ. ಅಲ್ಲಿನ ಪಠ್ಯಕ್ರಮ, ಕಲಿಕಾ ಚಟುವಟಿಕೆ, ಸಂಶೋಧನೆ ಕ್ಷೇತ್ರದಲ್ಲಿನ ಅವಕಾಶಗಳು, ಪರೀಕ್ಷೆ, ಮೌಲ್ಯಮಾಪನ ಪದ್ಧತಿ ಹೀಗೆ... ವಿವಿಧ ವಿಷಯಗಳನ್ನು ಅರಿಯಲು ಅನುಕೂಲವಾಗಲಿದೆ’ ಎಂದು ತಿಳಿಸಿದರು.
‘ಆರ್‌ಸಿಯುನಿಂದ ಇದೇ ಪ್ರಥಮ ಬಾರಿ ವಿದ್ಯಾರ್ಥಿಗಳು ಅಧ್ಯಯನ ಪ್ರವಾಸಕ್ಕಾಗಿ ವಿದೇಶಕ್ಕೆ ಹೋಗುತ್ತಿದ್ದಾರೆ. ರಾಜ್ಯದಲ್ಲಿ ಆರು ವಿ.ವಿಗಳ 30 ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಆಯ್ಕೆ ಮಾಡಲಾಗಿದೆ. ಈ ಪೈಕಿ ಆರ್‌ಸಿಯುನವರು ಐವರಿದ್ದಾರೆ. ಪ್ರವಾಸದ ವೀಸಾ, ಇತರೆ ಖರ್ಚುಗಳನ್ನು ಬ್ರಿಟಿಷ್ ಕೌನ್ಸಿಲ್ ಭರಿಸಲಿದೆ. ₹5 ಲಕ್ಷ ಪ್ರಯಾಣ ವೆಚ್ಚವನ್ನು ಆರ್‌ಸಿಯುನಿಂದ ಭರಿಸಲಿದ್ದೇವೆ’ ಎಂದು ವಿವರಿಸಿದರು.
‘ಒಂದೇ ಕಾಲೇಜಿನ ಇಬ್ಬಿಬ್ಬರು ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಆಯ್ಕೆ ಮಾಡಿದ್ದೇಕೆ’ ಎಂಬ ಪತ್ರಕರ್ತರ ಪ್ರಶ್ನೆಗೆ, ‘ಆರ್‌ಸಿಯು ವ್ಯಾಪ್ತಿಯ 44 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೂ ಮಾಹಿತಿ ಕೊಟ್ಟಿದ್ದೆವು. ವೀಸಾ ಇಲ್ಲದಿರುವುದು ಮತ್ತಿತರ ಕಾರಣಕ್ಕೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು ಆಸಕ್ತಿ ತೋರಲಿಲ್ಲ. ಹಾಗಾಗಿ ಸರ್ಕಾರಿ ನಿಯಮಾನುಸಾರವೇ ಇವರನ್ನು ಆಯ್ಕೆಗೊಳಿಸಿದ್ದೇವೆ. ಪ್ರವಾಸಕ್ಕೆ ಹೋಗಿಬಂದ ವಿದ್ಯಾರ್ಥಿಗಳು ತಮ್ಮ ಅನುಭವ ಮತ್ತು ಕಲಿತ ಕೌಶಲಗಳ ಕುರಿತು ವರದಿ ಸಿದ್ಧಪಡಿಸಿ, ವಿ.ವಿಗೆ ಸಲ್ಲಿಸಲಿದ್ದಾರೆ’ ಎಂದು ಉತ್ತರಿಸಿದರು.
‘ಗ್ರಾಮೀಣ ಭಾಗದಿಂದ ಬಂದಿರುವ ನಾವು ಕಷ್ಟದಲ್ಲೇ ಬೆಳೆದವರು. ಮೊದಲ ಬಾರಿ ವಿದೇಶಕ್ಕೆ ಅಧ್ಯಯನ ಪ್ರವಾಸಕ್ಕೆ ಹೋಗುತ್ತಿರುವುದಕ್ಕೆ ಖುಷಿಯಾಗಿದೆ’ ಎಂದು ವಿದ್ಯಾರ್ಥಿಗಳು ಸಂತಸ ಹಂಚಿಕೊಂಡರು.
ಕುಲಸಚಿವ ಸಂತೋಷ ಕಾಮಗೌಡ, ಮೌಲ್ಯಮಾಪನ ಕುಲಸಚಿವ ಪ್ರೊ.ರವೀಂದ್ರನಾಥ ಕದಂ, ಹಣಕಾಸು ಅಧಿಕಾರಿ ಎಂ.ಎ.ಸಪ್ನಾ, ಕುಲಸಚಿವರ ಕಚೇರಿಯ ವಿಶೇಷಾಧಿಕಾರಿ ಬಿ.ಎಸ್.ನಾಗಯ್ಯ ಇತರರಿದ್ದರು.
‘ಅವಧಿಗೂ ಮುನ್ನ ತಮ್ಮನ್ನು ಕರ್ತವ್ಯದಿಂದ ತೆರವು ಮಾಡಲಾಗಿದೆ’ ಎಂದು ಆರೋಪಿಸಿ, ಪ್ರಾಧ್ಯಾಪಕರೊಬ್ಬರು ಆರ್‌ಸಿಯು ಕುಲಪತಿ ಹಾಗೂ ಇತರೆ ಇಬ್ಬರ ವಿರುದ್ಧ ಕಾಕತಿ ಠಾಣೆಯಲ್ಲಿ ದೂರು ದಾಖಲಿಸಿದ ಕುರಿತು ಪ್ರತಿಕ್ರಿಯಿಸಿದ ತ್ಯಾಗರಾಜ, ‘ನಾವು ಯಾವುದೇ ನಿಯಮ ಉಲ್ಲಂಘಿಸಿಲ್ಲ. ನಿಯಮಾನುಸಾರವೇ ನಡೆದುಕೊಂಡಿದ್ದೇವೆ. ಈ ದೂರಿನ ಕುರಿತಾಗಿ ವಿ.ವಿಯ ಕಾನೂನು ಕೋಶ ಅಧ್ಯಯನ ಮಾಡುತ್ತಿದೆ. ಅದು ವರದಿ ಸಲ್ಲಿಸಿದ ನಂತರ ಪ್ರತಿಕ್ರಿಯಿಸುವೆ’ ಎಂದರು.
‘ಕೆಲವು ವಿಷಯಗಳ ಪುಸ್ತಕಗಳ ಮುದ್ರಣ ವಿಳಂಬವಾಗಿತ್ತು. ಹಾಗಾಗಿ ವಿದ್ಯಾರ್ಥಿಗಳು ಆನ್‌ಲೈನ್ ಸೇರಿ ವಿವಿಧ ಮಾದರಿಗಳಲ್ಲಿ ಲಭ್ಯವಾಗುವ ಪಠ್ಯಕ್ರಮ ಅಭ್ಯಸಿಸುತ್ತಿರಬಹುದು. ಈಗ ಪಠ್ಯಕ್ರಮದ ಮುದ್ರಣಕ್ಕೆ ಕ್ರಮ ಕೈಗೊಂಡಿದ್ದೇವೆ. ಇದಕ್ಕಾಗಿ ಟೆಂಡರ್ ಪ್ರಕ್ರಿಯೆಯೂ ಆಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಆರ್‌ಸಿಯುನ ಪತ್ರಿಕೋದ್ಯಮ ವಿಭಾಗಕ್ಕೆ ಇನ್ಮುಂದೆ ಪಾರದರ್ಶಕವಾಗಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುವುದು. ಸರ್ಕಾರಿ ಆದೇಶ ಗಾಳಿಗೆ ತೂರುವ ಅತಿಥಿ ಉಪನ್ಯಾಸಕರ ವಿರುದ್ಧವೂ ಕ್ರಮ ವಹಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.