ADVERTISEMENT

ಸತತ ಪರಿಶ್ರಮವಿದ್ದರೇ ಯಶಸ್ಸು ಅಸಾಧ್ಯವಲ್ಲ

ಐಎಎಸ್‌ ಟಾಪರ್‌ ರಾಹುಲ್ ಸಂಕನೂರ ಅಭಿಮತ

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 13:17 IST
Last Updated 16 ಜೂನ್ 2019, 13:17 IST
ಬೆಳಗಾವಿಯಲ್ಲಿ ಯುನಿಕ್ ಅಕಾಡೆಮಿ ಹಾಗೂ ಜ್ಯೋತಿ ಅಕಾಡೆಮಿ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಐಎಎಸ್ ಟಾಪರ್ಸ್‌ಗಳ ಸನ್ಮಾನ ಕಾರ್ಯಕ್ರಮದಲ್ಲಿ ಸಾಧಕರಾದ ರಾಹುಲ್‌ ಸಂಕನೂರ ಹಾಗೂ ತೃಪ್ತಿ ದೊಡ್ಮಿಸ್‌ ಅವರನ್ನು ಸನ್ಮಾನಿಸಲಾಯಿತು
ಬೆಳಗಾವಿಯಲ್ಲಿ ಯುನಿಕ್ ಅಕಾಡೆಮಿ ಹಾಗೂ ಜ್ಯೋತಿ ಅಕಾಡೆಮಿ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಐಎಎಸ್ ಟಾಪರ್ಸ್‌ಗಳ ಸನ್ಮಾನ ಕಾರ್ಯಕ್ರಮದಲ್ಲಿ ಸಾಧಕರಾದ ರಾಹುಲ್‌ ಸಂಕನೂರ ಹಾಗೂ ತೃಪ್ತಿ ದೊಡ್ಮಿಸ್‌ ಅವರನ್ನು ಸನ್ಮಾನಿಸಲಾಯಿತು   

ಬೆಳಗಾವಿ: ‘ಸತತ ಪರಿಶ್ರಮ, ಶಿಸ್ತು, ತಾಳ್ಮೆ ಇದ್ದರೆ ಐಎಎಸ್ ಪರೀಕ್ಷೆ ಉತ್ತೀರ್ಣವಾಗುವುದು ಕಠಿಣವಲ್ಲ’ ಎಂದು 2018–19ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ 17ನೇ ರ್ಯಾಂಕ್ ಪಡೆದ ಹುಬ್ಬಳ್ಳಿಯ ರಾಹುಲ್ ಸಂಕನೂರ ಹೇಳಿದರು.

ನಗರದ ಕೆಎಲ್ಇ ಶತಮಾನೋತ್ಸವ ಸಭಾಂಗಣದಲ್ಲಿ ಯುನಿಕ್ ಅಕಾಡೆಮಿ ಹಾಗೂ ಜ್ಯೋತಿ ಅಕಾಡೆಮಿ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಐಎಎಸ್ ಟಾಪರ್ಸ್‌ಗಳ ಸನ್ಮಾನ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಾನು ದಿನಕ್ಕೆ 13ರಿಂದ 16 ಗಂಟೆಗಳ ಕಾಲ ಅಧ್ಯಯನ ಕೈಗೊಳ್ಳುತ್ತಿದ್ದೆ’ ಎಂದು ತಿಳಿಸಿದರು.

ಯೋಜನೆ ರೂಪಿಸಿ:

ADVERTISEMENT

‘ಪ್ರತಿದಿನ ನೀವು ಓದಬೇಕಾದ ಅವಧಿ ಹಾಗೂ ವಿಷಯಗಳ ಯೋಜನೆ ರೂಪಿಸಿ. ವಾರ ಅಥವಾ ಹತ್ತು ದಿನಗಳ ಯೋಜನೆ ಮೊದಲೇ ಹಾಕಿಕೊಂಡು ಓದುವುದು ಇನ್ನೂ ಉತ್ತಮ. ಒಂದು ವಿಷಯವನ್ನು ಕನಿಷ್ಠ ಒಂದು ಗಂಟೆಯ ಕಾಲವಾದರು ಓದಬೇಕು. ವಿಷಯದ ಸಮಗ್ರ ಅಧ್ಯಯನ ಮಾಡಬೇಕು. ಓದಿದ ವಿಷಯದ ಮುಖ್ಯಾಂಶಗಳ ಕುರಿತು ಪಟ್ಟಿ ಮಾಡಿಟ್ಟುಕೊಳ್ಳಬೇಕು. ಆಗಾಗ ಮನನ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕೊಂಕು ಮಾತು ನಿರ್ಲಕ್ಷಿಸಿ:

‘ನಾನು ಐಎಎಸ್‌ಗಾಗಿ ತಯಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಸಂಬಂಧಿಗಳು ಹಾಗೂ ತಂದೆಯ ಸ್ನೇಹಿತರು ‘ನಿಮ್ಮ ಮಗ 2 ವರ್ಷದಿಂದ ಐಎಎಸ್‌ಗಾಗಿ ಓದುತ್ತಿದ್ದಾನೆ. ಇನ್ನೂ ಕೂಡ ಯಾವ ಪರೀಕ್ಷೆಯನ್ನೂ ಪಾಸ್‌ ಮಾಡಲು ಆಗಿಲ್ಲ’ ಎಂದು ಕೊಂಕು ಮಾತಾಡುತ್ತಿದ್ದರು. ಇದಕ್ಕೆಲ್ಲ ನಾನು ತಲೆಕೆಡಿಸಿಕೊಳ್ಳಲಿಲ್ಲ.ನಾವು ಏನಾದರೂ ಮಾಡಲು ಹೊರಟಾಗ ಕೊಂಕು ಮಾತುಗಳನ್ನು ಎದುರಿಸುವುದು ಸಹಜ. ಇದಕ್ಕೆ ತಲೆಕಡಿಸಿಕೊಳ್ಳದೇ ಮುನ್ನುಗ್ಗಿ.ಯುವಕರು ಜೀವನದಲ್ಲಿ ಬರುವ ಸಣ್ಣಪುಟ್ಟ ಕಷ್ಟಗಳಿಗೆ ಎದೆಗುಂದಬಾರದು. ಕಷ್ಟಪಟ್ಟರೆ ಯಶಸ್ಸು ಕಟ್ಟಿಟ್ಟ ಬುತ್ತಿ’ ಎಂದು ಕಿವಿಮಾತು ಹೇಳಿದರು.

ಕೆಲಸ ಮಾಡುತ್ತಲೇ ಓದಿದೆ:
16ನೇ ರ್ಯಾಂಕ್ ಪಡೆದಿರುವ ಮಹಾರಾಷ್ಟ್ರದ ತೃಪ್ತಿ ದೊಡ್ಮಿಸ್‌ ಮಾತನಾಡಿ, ‘ನಾನು ಗ್ರಾಮೀಣ ಭಾಗದವಳಾದ್ದರಿಂದ ಅಲ್ಲಿನ ಸಮಸ್ಯೆಗಳು ನನ್ನನ್ನು ಚಿಂತನೆಗೆ ದೂಡುತ್ತಿದ್ದವು. ಇದೇ ನನ್ನ ಐಎಎಸ್‌ ಕನಸಿಗೆ ಸ್ಪೂರ್ತಿಯಾಯಿತು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಲೇ ಐಎಎಸ್ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿದ್ದೆ. 5ನೇ ಪ್ರಯತ್ನದಲ್ಲಿ‌ ಉತ್ತೀರ್ಣಳಾದೆ’ ಎಂದು ತಿಳಿಸಿದರು.

‘ಓದಿನಲ್ಲಿ ಶ್ರದ್ಧೆಯಿರಬೇಕು. ಒಮ್ಮೊಮ್ಮೆ ಪ್ರಯತ್ನಿಸುತ್ತಿರುವಾಗವಿಫಲವಾದರೂ ಎದೆಗುಂದದೆ ಮತ್ತೆ ಪ್ರಯತ್ನ ಪಟ್ಟು ಮುಂದುವರೆಯಿರಿ. ಸಾಧನೆ ಮಾಡಲು ಹೊರಟಾಗ ಕೆಲವು ಚಿಕ್ಕ ಚಿಕ್ಕ ಆಸೆಗಳನ್ನು ತ್ಯಜಿಸಬೇಕಾಗುತ್ತದೆ. ಸಾಮಾಜಿಕ ಜಾಲತಾಣಗಳಿಂದ ದೂರ ಇರುವುದು ಉತ್ತಮ. ಇದರಿಂದ ಕಾಲಹರಣವಾಗುವುದು ತಪ್ಪುತ್ತದೆ’ ಎಂದು ಸಲಹೆ ನೀಡಿದರು.

ಸನ್ಮಾನ–ಸಂವಾದ:

ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ರಾಹುಲ್‌ ಹಾಗೂ ತೃಪ್ತಿ ಅವರನ್ನು ಅಕಾಡೆಮಿಯಿಂದ ಸನ್ಮಾನಿಸಲಾಯಿತು. ನಂತರ ಸಭಾಂಗಣದಲ್ಲಿ ಸೇರಿದ್ದ ಸ್ಪರ್ಧಾತ್ಮಕ ತರಬೇತಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳ ಪ್ರಶ್ನೆಗೆ ಅವರು ಉತ್ತರಿಸಿದರು.

ಹುಬ್ಬಳ್ಳಿಯ ವಾಣಿಜ್ಯ ತೆರಿಗೆ ಇಲಾಖೆಯ ಉಪನಿರ್ದೇಶಕ ಆಕಾಶ ಭೈರಣ್ಣವರ, ಅಕಾಡೆಮಿಯ ವಿಭಾಗೀಯ ಮುಖ್ಯಸ್ಥ ರಾಜಕುಮಾರ ಪಾಟೀಲ, ರಾಜಬಾಹು ಪಾಟೀಲ, ಪ್ರವೀಣ ಚವಾಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.