ಬೆಳಗಾವಿ: ‘ಈ ಹಿಂದೆ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸದ ಕಾರಣ, ರೈತರು ತಾವು ಬೆಳೆದ ಬೆಳೆಗೆ ಬೆಂಕಿ ಹಚ್ಚಬೇಕಾದ ಪರಿಸ್ಥಿತಿ ಇತ್ತು. ಆದರೆ, ಅಪೆಕ್ಸ್ ಬ್ಯಾಂಕ್ ಮತ್ತು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳು ಸಕ್ಕರೆ ಕಾರ್ಖಾನೆಗಳ ಸ್ಥಾಪನೆಗೆ ಸಾಲ ಸೌಲಭ್ಯ ಒದಗಿಸಿದ ನಂತರ, ಅನೇಕ ಸಹಕಾರ ಮತ್ತು ಖಾಸಗಿ ಕಾರ್ಖಾನೆ ಆರಂಭವಾದವು. ಹಾಗಾಗಿ ಇಂದು ಕಬ್ಬು ಬೆಳೆಗಾರರು ನೆಮ್ಮದಿಯಿಂದ ಇದ್ದಾರೆ’ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಇಲ್ಲಿನ ಜೆಎನ್‌ಎಂಸಿಯ ಬಿ.ಎಸ್.ಜೀರಗೆ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಸಹಕಾರ ಸಂಘಗಳಲ್ಲಿ ಕೆಲವರು ಮಾಡಿದ ತಪ್ಪುಗಳು ಇಡೀ ಕ್ಷೇತ್ರಕ್ಕೆ ಕಳಂಕ ತರುತ್ತಿರುವುದು ಸರಿಯಲ್ಲ. ವಂಚಕರು ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರು ಬಳಸಿಕೊಂಡು ಜನರನ್ನು ವಂಚಿಸಿದ ಘಟನೆಗಳೂ ನಮ್ಮ ಗಮನಕ್ಕೆ ಬಂದಿವೆ’ ಎಂದು ಹೇಳಿದರು.
‘ಕೇಂದ್ರದವರು ಪಿಕೆಪಿಎಸ್‌ಗಳನ್ನು ಗಣಕೀಕರಣಗೊಳಿಸುತ್ತಿದ್ದಾರೆ. ಇದಕ್ಕಾಗಿ ಹಣ ಬಿಡುಗಡೆ ಮಾಡುತ್ತಿದ್ದಾರೆ’ ಎಂದರು.
‘ನಿರ್ದೇಶಕ ಮಂಡಳಿ ವಿಶ್ವಾಸಾರ್ಹತೆ ಆಧರಿಸಿ, ಜನರು ಸಹಕಾರ ಸಂಸ್ಥೆಗಳಲ್ಲಿ ಠೇವಣಿ ಇರಿಸುತ್ತಾರೆ. ಉತ್ತಮರಲ್ಲದವರು ಸದಸ್ಯರಾಗಿ ಚುನಾಯಿತರಾದರೆ, ಸಂಸ್ಥೆಗಳನ್ನು ಹಾಳು ಮಾಡಬಹುದು. ಈ ಬಗ್ಗೆ ಎಚ್ಚರಿಕೆ ವಹಿಸುತ್ತೇವೆ. ಹೆಚ್ಚಿನ ರೈತರನ್ನು ಪಿಕೆಪಿಎಸ್ ಸದಸ್ಯರನ್ನಾಗಿ ಮಾಡುತ್ತೇವೆ’ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ‘ಸಹಕಾರ ರಂಗದ ತವರು ಜಿಲ್ಲೆ ಬೆಳಗಾವಿ. ಅದನ್ನು ಇನ್ನಷ್ಟು ಗಟ್ಟಿಗೊಳಿಸಬೇಕು. ವಿವಿಧ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿದ ಸಹಕಾರ ಸಂಸ್ಥೆಗಳ ಬೆನ್ನಿಗೆ ಯೂನಿಯನ್‌ಗಳು ನಿಲ್ಲಬೇಕು. ಸಹಕಾರ ರಂಗದಲ್ಲಿ ಗುಜರಾತ್, ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿ ಕರ್ನಾಟಕ ಇದೆ. ಅದು ಮೊದಲ ಸ್ಥಾನಕ್ಕೆ ಬರಬೇಕು’ ಎಂದರು.
‘ಪಿಕೆಪಿಎಸ್‌ಗಳಿಗೆ ಸದಸ್ಯತ್ವ ಪ್ರಕ್ರಿಯೆ ಸರಳೀಕರಣವಾಗಬೇಕು. ಈಗ ಸದಸ್ಯರಿರುವ ಜನರಿಗಿಂತ, ಮೂರು ಪಟ್ಟು ಜನ ಹೊರಗಿದ್ದಾರೆ. ಕೃಷಿಭೂಮಿ ಹೊಂದಿದ ಪ್ರತಿಯೊಬ್ಬರೂ ಕಡ್ಡಾಯವಾಗಿ ಸದಸ್ಯರಾಗರಬೇಕು. ಸದಸ್ಯತ್ವ ನೋಂದಣಿಗಾಗಿ ಆನ್‌ಲೈನ್ ಪ್ರಕ್ರಿಯೆ ಅನುಸರಿಸಬೇಕು’ ಎಂದು ಹೇಳಿದರು.
ಶಾಸಕ ಆಸಿಫ್ ಸೇಠ್ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ದುರ್ಯೋಧನ ಐಹೊಳೆ, ಬುಡಾ ಅಧ್ಯಕ್ಷ ಲಕ್ಷಣರಾವ್ ಚಿಂಗಳೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಸಾಹೇಬ ಕುಲಗುಡೆ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷ ಜಿ.ನಂಜನಗೌಡ, ರಾಜ್ಯ ಸಹಕಾರ ಮಹಾಮಂಡಳದ ಉಪಾಧ್ಯಕ್ಷ ಜಗದೀಶ ಕವಟಗಿಮಠ ಇತರರಿದ್ದರು.
‘ಸಹಕಾರಿ ಕ್ಷೇತ್ರ ಬೆಳೆದರಷ್ಟೆ ದೇಶ ಮತ್ತು ರಾಜ್ಯವೂ ಬೆಳೆಯುತ್ತದೆ. ರೈತರು ಬೆಳೆಯುತ್ತಾರೆ. ಆದರೆ, ಈ ರಂಗದಿಂದ ರಾಜಕೀಯ ದೂರ ಸರಿಯಬೇಕು. ರಾಜಕೀಯದಲ್ಲಿ ಸಹಕಾರ ಇರಬೇಕು. ಆದರೆ, ಸಹಕಾರ ಸಂಘಗಳಲ್ಲಿ ರಾಜಕೀಯ ಇರಬಾರದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪ್ರತಿಪಾದಿಸಿದರು.
‘ರಾಜಕೀಯ ಪ್ರವೇಶಿಸಿದರೆ, ಸಹಕಾರ ಸಂಘಗಳ ಅವನತಿ ಆರಂಭವಾದಂತೆ. ರಾಜಕೀಯದ ಕಾರಣಕ್ಕೆ ಇಂದು ಹಲವು ಸಹಕಾರ ಸಂಘಗಳು ಬಾಗಿಲು ಮುಚ್ಚಿವೆ. ಬೆಳಗಾವಿ ಜಿಲ್ಲೆಯಲ್ಲಿ ಕೆಲವು ಸಕ್ಕರೆ ಕಾರ್ಖಾನೆ ಮುಚ್ಚಿವೆ. ಆದರೆ, ಹಲವು ಕಾರ್ಖಾನೆಗಳು ಸಹಕಾರ ತತ್ವ ಆಧರಿಸಿಯೇ ಮುನ್ನಡೆಯುತ್ತಿವೆ. ಪಾರದರ್ಶಕವಾಗಿ ನಡೆದಾಗ ಮಾತ್ರ ಯಾವುದೇ ಸಹಕಾರ ಸಂಘ ಪ್ರಗತಿ ಹೊಂದಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.
ಸಹಕಾರ ಸಂಘಗಳು ಯಾರೊಂದಿಗೂ ಸಂಘರ್ಷಕ್ಕೆ ಇಳಿಯುವುದಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತವೆ. ಸಹಕಾರ ಚಳವಳಿ ಬಲಪಡಿಸುವ ಅಗತ್ಯವಿದೆಕೆ.ಎನ್.ರಾಜಣ್ಣ, ಸಹಕಾರ ಸಚಿವ
ಡಿಸಿಸಿ ಬ್ಯಾಂಕ್‌ಗಳಿಂದ ಒದಗಿಸುತ್ತಿರುವ ಸಾಲಕ್ಕೆ ಪಡೆಯುತ್ತಿರುವ ಬಡ್ಡಿಯ ಪ್ರಮಾಣ ಅವೈಜ್ಞಾನಿಕವಾಗಿದೆ. ಇದನ್ನು ಹೆಚ್ಚಿಸುವುದಕ್ಕಾಗಿ ಸರ್ಕಾರ ಮರುಪರಿಶೀಲಿಸಬೇಕುಲಕ್ಷ್ಮಣ ಸವದಿ, ಶಾಸಕ
ಬೆಳಗಾವಿಯಲ್ಲಿ ಸಹಕಾರ ವಿಶ್ವವಿದ್ಯಾಲಯ ಮತ್ತು ಕಾಲೇಜು ಸ್ಥಾಪನೆಯಾಗಬೇಕು. ಸಹಕಾರ ಚಳವಳಿ ಸದಾ ಉಳಿಯಬೇಕು. ಸಹಕಾರ ಸಂಸ್ಥೆಗಳ ಹೆಸರು ಹಾಳು ಮಾಡುವುದನ್ನು ನಿಲ್ಲಿಸಬೇಕುಪ್ರಭಾಕರ ಕೋರೆ, ಸಹಕಾರಿ ಧುರೀಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.