ADVERTISEMENT

ಸುಳಕೂಡ ಬ್ಯಾರೇಜ್‌ ನೀರಿಗೆ ‘ಮಹಾ’ ಕಣ್ಣು: ಗಡಿ ರೈತರ ಆತಂಕ

ಪೈಪ್‌ಲೈನ್‌ ಮೂಲಕ ಇಚಲಕರಂಜಿಗೆ ನೀರು ಪೂರೈಸಲು ಸಿದ್ಧವಾದ ಮಹಾರಾಷ್ಟ್ರ ಸರ್ಕಾರ

ಸುಧಾಕರ ಎಸ್.ತಳವಾರ, ಬೆಂಗಳೂರು
Published 12 ಸೆಪ್ಟೆಂಬರ್ 2023, 5:27 IST
Last Updated 12 ಸೆಪ್ಟೆಂಬರ್ 2023, 5:27 IST
ಕರ್ನಾಟಕದ ಗಡಿಗ್ರಾಮ ಕೊಗನೊಳ್ಳಿ ಮತ್ತು ಮಹಾರಾಷ್ಟ್ರದ ಸುಳಕೂಡ ಗ್ರಾಮಗಳ ಮಧ್ಯೆ ಇರುವ ಸುಳಕೂಡ ಬ್ಯಾರೇಜ್
ಕರ್ನಾಟಕದ ಗಡಿಗ್ರಾಮ ಕೊಗನೊಳ್ಳಿ ಮತ್ತು ಮಹಾರಾಷ್ಟ್ರದ ಸುಳಕೂಡ ಗ್ರಾಮಗಳ ಮಧ್ಯೆ ಇರುವ ಸುಳಕೂಡ ಬ್ಯಾರೇಜ್   

ಚಿಕ್ಕೋಡಿ: ದೂಧಗಂಗಾ ನದಿಗೆ ನಿರ್ಮಿಸಿದ ಸುಳಕೂಡ ಬ್ಯಾರೇಜಿನಿಂದ ಇಚಲಕರಂಜಿ ಹಾಗೂ ಸುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯನ್ನು ಮಹಾರಾಷ್ಟ್ರ ಸರ್ಕಾರ ಕೈಗೆತ್ತಿಕೊಂಡಿದೆ. ಇದರಿಂದ ರಾಜ್ಯದ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲ್ಲೂಕಿನ 20 ಹಳ್ಳಿಗಳಿಗೆ ನೀರು ಸಿಗುವುದಿಲ್ಲ ಎಂಬ ಆತಂಕ ಎದುರಾಗಿದೆ.

ಕುಡಿಯುವ ನೀರಿಗಾಗಿ ಇಚಲಕರಂಜಿ ಜನ ಹೋರಾಟ ತೀವ್ರಗೊಳಿಸಿದ್ದಾರೆ. ಆದರೆ, ಅಲ್ಲಿನ ಕಾಳಮ್ಮವಾಡಿ ಜಲಾಶಯದಿಂದ ಇಚಲಕರಂಜಿ ಜನರಿಗೆ ನೀರು ಪೂರೈಸುವುದಕ್ಕೆ ಮಹಾರಾಷ್ಟ್ರ ಗಡಿ ಭಾಗದ 30ಕ್ಕೂ ಹೆಚ್ಚು ಹಳ್ಳಿಗಳ ರೈತರ ವಿರೋಧವಿದೆ. ಕಾರಣ ಈ ಹಳ್ಳಿಗಳಲ್ಲಿ ಶೇ 70ಕ್ಕೂ ಹೆಚ್ಚು ಕನ್ನಡಿಗರೇ ಇದ್ದಾರೆ.

‘ಒಂದೆಡೆ ಹೋರಾಟಗಾರರನ್ನೂ ಸಮಾಧಾನ ಮಾಡಬೇಕು, ಕರ್ನಾಟಕಕ್ಕೆ ಹೋಗುವ ನೀರನ್ನೂ ಕಬಳಿಸಬೇಕು ಎಂಬ ಉದ್ದೇಶದಿಂದ ಮಹಾರಾಷ್ಟ್ರ ಸರ್ಕಾರವು ಸುಳಕೂಡ ಬ್ಯಾರೇಜಿಗೆ ಕೈ ಹಾಕಿದೆ’ ಎನ್ನುವುದು ರೈತರ ಆರೋಪ.

ADVERTISEMENT

ಕರ್ನಾಟಕದ ಗಡಿಯ ಕೊಗನೋಳಿ ಮತ್ತು ಮಹಾರಾಷ್ಟ್ರದ ಸುಳಕೂಡ ಗ್ರಾಮಗಳ ಮಧ್ಯೆ ದೂಧಗಂಗಾ ನದಿಗೆ ಬ್ಯಾರೇಜ್ ನಿರ್ಮಿಸಲಾಗಿದೆ. ಈ ಬ್ಯಾರೇಜಿನಿಂದ ನಿಪ್ಪಾಣಿ  ಹಾಗೂ ಚಿಕ್ಕೋಡಿ ತಾಲ್ಲೂಕಿನ 20 ಗ್ರಾಮಗಳಿಗೆ ನೀರು ಹರಿದು ಬರುತ್ತದೆ.

ಕಾಳಮ್ಮವಾಡಿ ಪಾಲು: ಕಾಳಮ್ಮವಾಡಿ ಜಲಾಶಯವನ್ನು ಕರ್ನಾಟಕ– ಮಹಾರಾಷ್ಟ್ರ ಸರ್ಕಾರಗಳು ಜಂಟಿಯಾಗಿ ಕೊಲ್ಹಾಪುರದಲ್ಲಿ ನಿರ್ಮಿಸಿವೆ. ಪ್ರತಿ ವರ್ಷ 4 ಟಿಎಂಸಿ ಅಡಿ ನೀರನ್ನು ಕರ್ನಾಟಕ್ಕೆ ಹರಿಸಬೇಕು ಎಂಬುದು ನಿಯಮ. ಇದರಲ್ಲಿ 2 ಟಿಎಂಸಿ ಅಡಿ ನೀರು ವೇದಗಂಗಾ ನದಿಯಿಂದ, 1 ಟಿಎಂಸಿ ಅಡಿ ಕಾಲುವೆಗಳ ಮೂಲಕ, ಮತ್ತೊಂದು ಟಿಂಎಸಿ ಅಡಿ ನೀರು ದೂಧಗಂಗಾ ನದಿಯಿಂದ ಬರುತ್ತದೆ. ಈ ದೂಧಗಂಗಾ ನೀರು ಸುಳಕೂಡ ಬ್ಯಾರೇಜಿನಲ್ಲಿ ಸಂಗ್ರಹವಾಗುವ ಮುನ್ನವೇ ಪೈಪ್‌ಲೈನ್‌ ಮೂಲಕ ಇಚಲಕರಂಜಿ ಹಾಗೂ ಇತರ ಹಳ್ಳಿಗಳಿಗೆ ಪೂರೈಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ.

‘ದೂಧಗಂಗಾ ನದಿಯಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಸಾವಿರಾರು ಹೆಕ್ಟೇರ್‌ ಜಮೀನಿಗೆ ನೀರು ಹರಿಸಲಾಗುತ್ತದೆ. ಮಹಾರಾಷ್ಟ್ರ ಸರ್ಕಾರ ನೀರು ಎತ್ತುವಳಿ ಮಾಡಿದರೆ ಬ್ಯಾರೇಜಿನಲ್ಲಿ ಸಂಗ್ರಹ ಕಡಿಮೆಯಾಗುತ್ತದೆ. ನೀರು ಕರ್ನಾಟಕಕ್ಕೆ ಹರಿಯುವುದಿಲ್ಲ. ಬೇಸಿಗೆಯಲ್ಲಿ ತತ್ವಾರ ಉಂಟಾಗಲಿದೆ’ ಎಂಬುದು ರೈತರ ಆತಂಕ.

‘ಇಚಲಕರಂಜಿ ನಗರದ ಪಕ್ಕದಲ್ಲೇ ಪಂಚಗಂಗಾ ನದಿ ಹರಿಯುತ್ತಿದೆ. ಆದರೆ, ಔದ್ಯೋಗಿಕ ವಸಾಹತುಗಳ ದ್ರವತ್ಯಾಜ್ಯ ಆ ನದಿ ನೀರನ್ನು ಮಲಿನಗೊಳಿಸಿದೆ. ಇದೇ ನೆಪದಲ್ಲಿ ಪಂಚಗಂಗಾ ಬಿಟ್ಟು ದೂಧಗಂಗಾ ನದಿಯಿಂದ ನೀರು ಕಬಳಿಸುವುದು ಮಹಾರಾಷ್ಟ್ರ ಸರ್ಕಾರ ಉದ್ದೇಶ’ ಎಂದು ರೈತ ಮುಖಂಡ ರಮೇಶ ಪಾಟೀಲ, ಸಂಜು ಬಡಿಗೇರ, ಅಜರುದ್ದಿನ್‌ ಶೇಖಜಿ, ಸಂಜು ಗಾವಡೆ, ಸುಭಾಷ ಡೋಣೆ, ಶಿವಾನಂದ ಮುಸಳೆ, ಅಪ್ಪಾಸಾಹೇಬ್‌ ದೇಸಾಯಿ, ಸುರೇಶ ಗಿರಗಾಂವೆ ಮುಂತಾದವರು ಆಕ್ರೋಶ ಹೊರಹಾಕಿದ್ದಾರೆ.

ಸುಳಕೂಡ ಬ್ಯಾರೇಜಿನಿಂದ ನೀರು ಎತ್ತುವ ಯೋಜನೆ ಮಹಾರಾಷ್ಟ್ರ ಸರ್ಕಾರ ಕೈಬಿಡಬೇಕು. ಕರ್ನಾಟಕ ಸರ್ಕಾರ ಈಗಲೇ ಇದಕ್ಕೆ ತಡೆಯೊಡ್ಡಲು ಮುಂದಾಗಬೇಕು
-ರಾಜು ಖಿಚಡೆ ಕಾರದಗಾ ಗ್ರಾ.ಪಂ. ಸದಸ್ಯ
ಇಚಲಕರಂಜಿಗೆ ವಾರಣಾ ಕಾಲುವೆ ಮೂಲಕ ನೀರು ಪೂರೈಸುವುದು ನಿಯಮ. ಸುಳಕೂಡ ಬ್ಯಾರೇಜ್‌ ಮೂಲಕ ನೀರು ಎತ್ತಬೇಕೆಂದರೆ ಕಾಳಮ್ಮವಾಡಿಯಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸಬೇಕಾಗುತ್ತದೆ
–ಚಂದ್ರಕಾಂತ ಪಾಟೀಲ ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್‌ ಚಿಕ್ಕೋಡಿ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.