ಬೆಳಗಾವಿ: ಬೆಳಗಾವಿ, ಹುಬ್ಬಳ್ಳಿ- ಧಾರವಾಡ ನಗರಗಳ ಅಭಿವೃದ್ಧಿಗಾಗಿ ಧಾರವಾಡ- ಬೆಳಗಾವಿ ನೇರ ರೈಲು ಮಾರ್ಗಕ್ಕೆ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡಲಾಗುವುದುಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಇಲ್ಲಿನ ಸಾಂವಗಾಂವ ರಸ್ತೆಯ ಸುರೇಶ ಅಂಗಡಿ ಶಿಕ್ಷಣ ಪ್ರತಿಷ್ಠಾನದ ಆವರಣದಲ್ಲಿ ದಿ.ಸುರೇಶ ಅಂಗಡಿ ಪುತ್ಥಳಿಯನ್ನು ಭಾನುವಾರ ಅನಾವರಣಗೊಳಿಸಿ ಅವರು ಮಾತನಾಡಿದರು.
ನೇರ ರೈಲು ಮಾರ್ಗಕ್ಕೆ ಬಜೆಟ್‌ನಲ್ಲಿ ಘೋಷಿಸಿರುವ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಿ, ಕಾಮಗಾರಿ ಆರಂಭಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರು- ಬೆಳಗಾವಿ ರೈಲಿಗೆ ಸುರೇಶ ಅಂಗಡಿ ಎಕ್ಸ್‌ಪ್ರೆಸ್ ಎಂದು ನಾಮಕರಣ ಮಾಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು ತಿಳಿಸಿದರು.
ಇಡೀ ಉತ್ತರ ಕರ್ನಾಟಕದ ಧ್ವನಿಯಾಗಿದ್ದರು, ವಿಶ್ವವಿದ್ಯಾಲಯಕ್ಕೆ ರಾಣಿ ಚನ್ನಮ್ಮ ಹೆಸರು ಬರಲು ಅವರ ಕೊಡುಗೆ ದೊಡ್ಡದಾಗಿತ್ತು. ಹಿಂದುತ್ವದ ಬಗ್ಗೆಯೂ ಅಪಾರವಾದ ಅಭಿಮಾನ ಹೊಂದಿದ್ದರು ಎಂದರು.
ಕರ್ನಾಟಕ ರೈಲ್ವೆಯಲ್ಲಿ ದೊಡ್ಡ ಕ್ರಾಂತಿಯನ್ನೆ ಮಾಡಿದ್ದಾರೆ. ನನೆಗುದಿಗೆ ಬಿದ್ದ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ವಹಿಸಿದ್ದರು,ರೈಲ್ವೆ ಮಂಡಳಿಯಲ್ಲೂ ಪ್ರಭಾವ ಬೀರಿ ಬಹಳಷ್ಟು ಕೆಲಸ ಮಾಡಿದ್ದರು.ಅಧಿಕಾರ ಸಿಕ್ಕಾಗ ಅದನ್ನು ಜನರ ಅನುಕೂಲಕ್ಕೆ ಹೇಗೆ ಬಳಸಿಕೊಳ್ಳಬೇಕು ಎನ್ನುವುದಕ್ಕೆ ಅಂಗಡಿ ಉದಾಹರಣೆಯಾಗಿದ್ದಾರೆ ಎಂದು ಬೊಮ್ಮಾಯಿ ಸ್ಮರಿಸಿದರು.
ತಂದೆಯು ಬಸವಣ್ಣನವರ ತತ್ವವಾದ ಕಾಯಕ ಮತ್ತು ದಾಸೋಹ ಪಾಲಿಸಿದರು. ಎಷ್ಟೆ ಎತ್ತರಕ್ಕೆ ಹೋದರೂ ಸರಳ- ಸಜ್ಜನ ಸ್ವಭಾವದಿಂದ ಜನರ ಮನಗೆದ್ದಿದ್ದರು ಎಂದುಸುರೇಶ ಅಂಗಡಿ ಪುತ್ರಿ ಸ್ಫೂರ್ತಿ ಅಂಗಡಿ ಪಾಟೀಲ ಅವರು ತಂದೆಯನ್ನು ನೆನೆದರು.
ಅಂಗಡಿ ಅಪರೂಪದ ರಾಜಕಾರಣಿ. ಮುಖ ಕೆಡಿಸಿಕೊಂಡು ಮಾತನಾಡಿದ್ದನ್ನು ನೋಡಲಿಲ್ಲ. ಕೊನೆವರೆಗೂ ನನ್ನನ್ನು ಸಾಹೇಬ್ರೇ ಎಂದೇ ಗೌರವದಿಂದ ಕಂಡರು. ಅವರು ಮಾಡಿದ ಅಭಿವೃದ್ಧಿ ಕೆಲಸಗಳು ಮುಂದೆಯೂ ಹೆಜ್ಜೆಗುರುತುಗಳಾಗಿ ಉಳಿಯಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ನನ್ನ ಮತ್ತು ಅವರ ನಡುವೆ ಬಹಳ ಅನ್ಯೋನ್ಯ ಸಂಬಂಧ ಇತ್ತು. ಅವರನ್ನು ಕಳೆದುಕೊಂಡು ನಾವು ಅನಾಥರಾಗಿದ್ದೇವೆ. ರಾಜಕಾರಣಿ ಅಲ್ಲದಿದ್ದರೂ ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವರಾಗಿ ದೇಶದಾದ್ಯಂತ ಹಲವು ಕೊಡುಗೆಗಳನ್ನು ನೀಡಿದ್ದಾರೆ ಎಂದು ಅರಣ್ಯ ಸಚಿವ ಉಮೇಶ ಕತ್ತಿ ತಿಳಿಸಿದರು.
ನಾನು ಕಾಂಗ್ರೆಸ್‌ನಲ್ಲಿದ್ದಾಗ ಅವರು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದರು. ನಿನ್ನ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ಹೇಳಿದ್ದೆ. ನನ್ನನ್ನು ಪಕ್ಷಕ್ಕೆ ಸೇರಿಸಿಕೊಂಡರು. 12 ವರ್ಷಗಳಲ್ಲಿ ರಾಜ್ಯಸಭಾ ಹಾಗೂ ಲೋಕಸಭಾ ಸದಸ್ಯರಾಗಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದರು. ಅದರ ಶ್ರೇಯಸ್ಸು ಅಂಗಡಿಗೆ ಹೋಗುತ್ತದೆ ಎಂದುಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.