ADVERTISEMENT

ಸುರೇಶ್‌ ಅಂಗಡಿ: ಸಜ್ಜನ ರಾಜಕಾರಣಿ, ಸೋಲರಿಯದ ಸರದಾರ

ಮುಖ್ಯಮಂತ್ರಿಯಾಗುವ ಬಯಕೆ ಹೊಂದಿದ್ದ ಅಂಗಡಿ

ಎಂ.ಮಹೇಶ
Published 23 ಸೆಪ್ಟೆಂಬರ್ 2020, 17:31 IST
Last Updated 23 ಸೆಪ್ಟೆಂಬರ್ 2020, 17:31 IST
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ   

ಬೆಳಗಾವಿ: ಹಳ್ಳಿಯ ಸಾಮಾನ್ಯ ಕೃಷಿಕ ಕುಟುಂಬದಿಂದ ಬಂದು ರಾಜಕಾರಣದಲ್ಲಿ ಅತಿ ಎತ್ತರಕ್ಕೆ ಏರಿದ ಹಾಗೂ ಅಚ್ಚಳಿಯದ ಸಾಧನೆ ಮಾಡಿರುವ ಸುರೇಶ ಚನ್ನಬಸಪ್ಪ ಅಂಗಡಿ ಅವರು, ಸಜ್ಜನ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರು. ಚುನಾವಣೆಯಲ್ಲಿ ಸೋಲರಿಯರದ ಸರದಾರರೂ ಹೌದು. ಅವರ ನಿಧನದಿಂದಾಗಿ ಬೆಳಗಾವಿಗೆ ಬರಸಿಡಿಲು ಬಡಿದಂತಾಗಿದೆ.

1990ರ ದಶಕದಲ್ಲಿ ಸಿಮೆಂಟ್‌ ಹಾಗೂ ರಿಯಲ್ ಎಸ್ಟೇಟ್‌ ಉದ್ಯಮದೊಂದಿಗೆ ರಾಜಕಾರಣದ ಒಲವನ್ನೂ ಅವರು ಬಿಟ್ಟಿರಲಿಲ್ಲ. ‘ವಾಸವದತ್ತ ಸಿಮೆಂಟ್‌’ ಬ್ರ್ಯಾಂಡ್ ಮೂಲಕ ಆ ಉದ್ಯಮದಲ್ಲಿ ಹೆಸರುವಾಸಿಯಾಗಿದ್ದರು. 1996ರಲ್ಲಿ ರಾಜಕೀಯ ಜೀವನ ಪ್ರವೇಶಿಸಿದ ಅವರು, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ತತ್ವ ಸಿದ್ಧಾಂತಗಳಿಗೆ ಬದ್ಧವಾಗಿಯೇ ಉಳಿದಿದ್ದರು. ಬಿಜೆಪಿ ಗ್ರಾಮೀಣ ಘಟಕದ ಉಪಾಧ್ಯಕ್ಷ ಹಾಗೂ ಅಧ್ಯಕ್ಷರಾಗಿ ಪಕ್ಷ ಸಂಘಟನೆಗೆ ಒತ್ತು ನೀಡಿದ್ದರು.

ರಾಜ್ಯ ರಾಜಕಾರಣದಲ್ಲಿ ಅಜಾತ ಶತ್ರು ಎಂದೇ ಗುರುತಿಸಿಕೊಂಡಿದ್ದರು. ಇತರ ಪಕ್ಷದ ಮುಖಂಡರೊಂದಿಗೂ ಉತ್ತಮ ಒಡನಾಟ ಹೊಂದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಜೊತೆಗೆ, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ, ಕಾಂಗ್ರೆಸ್ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್‌ ನಾಯಕ ಕುಮಾರಸ್ವಾಮಿ ಸೇರಿದಂತೆ ಎಲ್ಲರೊಂದಿಗೂ ಪಕ್ಷವನ್ನು ಮೀರಿ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದರು.

ADVERTISEMENT

ಬೆಳಗಾವಿ ಲೋಕಸಭಾ ಕ್ಷೇತ್ರದಿಂದ 1962ರಲ್ಲಿ ಬಿ.ಎನ್. ದಾತಾರ್‌, 1998ರಲ್ಲಿ ಬಾಬಾಗೌಡ ಪಾಟೀಲ ಅವರ ನಂತರ ಕೇಂದ್ರದಲ್ಲಿ ಸಚಿವರಾಗಿದ್ದ ಮೂರನೇ ರಾಜಕಾರಣಿ ಎನ್ನುವ ಹೆಗ್ಗಳಿಕೆ ಅವರದು. ನಾಲ್ಕು ಚುನಾವಣೆಗಳಲ್ಲೂ ಅವರು ವಿಜಯದ ಪತಾಕೆ ಹಾರಿಸಿದ್ದರು. ಕೇಂದ್ರದಲ್ಲಿ ಸಚಿವ ಸ್ಥಾನ ಒಲಿದುಬಂದಿತ್ತು. ಸಚಿವರಾದ ನಂತರವೂ ಜನಸಾಮಾನ್ಯರೊಂದಿಗೆ ಬೆರೆಯುತ್ತಿದ್ದರು.

ರಾಜ್ಯ ರಾಜಕಾರಣಕ್ಕೆ ಬರಬೇಕು; ಮುಖ್ಯಮಂತ್ರಿಯಾಗಬೇಕು ಎನ್ನುವ ಬಯಕೆ ಅವರಿಗೆ ಇತ್ತು. ವಿಧಾನಸಭೆ ಟಿಕೆಟ್‌ ಅನ್ನು ಕೂಡ ಕೇಳಿದ್ದರು. ಆದರೆ, ಹೈಕಮಾಂಡ್‌ ಟಿಕೆಟ್‌ ನಿರಾಕರಣೆ ಮಾಡಿದ್ದರಿಂದ ರಾಷ್ಟ್ರ ರಾಜಕಾರಣದಲ್ಲಿಯೇ ಅವರು ಉಳಿಯಬೇಕಾಯಿತು. ಈ ಬಗ್ಗೆ ತಮ್ಮ ಆತ್ಮೀಯರೊಂದಿಗೆ ಅವರು ಆಗಾಗ ಪ್ರಸ್ತಾಪಿಸುತ್ತಿದ್ದುದೂ ಉಂಟು.

‘ತಳಮಟ್ಟದಿಂದ ರಾಜಕಾರಣದಲ್ಲಿ ಎತ್ತರಕ್ಕೆ ಬೆಳೆದವರು. ವೈಯಕ್ತಿಕ ಜೀವನದಲ್ಲಿ ಶಿಸ್ತಿನಿಂದ ಇದ್ದರು. ಕೌಟುಂಬಿಕ ಜೀವನವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದರು. ಏನೇ ಅಧಿಕಾರ ಬಂದರೂ ತಮ್ಮ ವ್ಯಕ್ತಿತ್ವ ಹಾಗೂ ಜೀವನಶೈಲಿ ಬದಲಿಸಿಕೊಂಡಿರಲಿಲ್ಲ. ಎಂತಹ ಸಂದರ್ಭದಲ್ಲೂ ಸಮಚಿತ್ತರಾಗಿ ಇರುತ್ತಿದ್ದರು. ಯಾವುದೇ ಕೆಲಸವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವವರೆಗೂ ಬಿಡುತ್ತಿರಲಿಲ್ಲ. ಆ ರೀತಿಯ ಛಲ ಅವರಲ್ಲಿತ್ತು’ ಎಂದು ಅವರ ಒಡನಾಡಿಯಾಗಿದ್ದ ಬಿಜೆಪಿ ರಾಜ್ಯ ಘಟಕದ ವಕ್ತಾರ ಮಾರುತಿ ಝಿರಲಿ ನೆನೆದರು.

‘ಜಿಲ್ಲಾ ಘಟಕದ ಅಧ್ಯಕ್ಷರಾಗಿ ಪಕ್ಷವನ್ನು ಸಂಘಟಿಸಿದ್ದರು. ನಂಬಿದ ತತ್ವ–ಸಿದ್ಧಾಂತದ ಹಾದಿ ಬಿಡಲಿಲ್ಲ. ರಾಜಿ ಮಾಡಿಕೊಳ್ಳಲಿಲ್ಲ. ನೈತಿಕ ಮೌಲ್ಯಗಳನ್ನು ಬಿಡಲಿಲ್ಲ. ಯಶಸ್ವಿ ಹಾಗೂ ಸಜ್ಜನ ರಾಜಕಾರಣಿಯಾದರೂ ಎಂದಿಗೂ ಕುಟುಂಬವನ್ನು ನಿರ್ಲಕ್ಷ್ಯ ಮಾಡಲಿಲ್ಲ. ಅವರ ಈ ಗುಣ ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದೆ’ ಎಂದು ತಿಳಿಸಿದರು.

ಇನ್ನಷ್ಟು ಓದು:

ರೈಲ್ವೆ ಖಾತೆ ರಾಜ್ಯ ಸಚಿವರಾಗಿ ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ರೈಲ್ವೆ ಅಭಿವೃದ್ಧಿಗೆ ಆದ್ಯತೆ ನೀಡಿದ್ದರು. ಇಲ್ಲಿನ ಜನರ ಬಹುದಿನಗಳ ಬೇಡಿಕೆ ಈಡೇರಿಕೆಗೆ ಹೆಜ್ಜೆ ಇಟ್ಟಿದ್ದರು. ಕೋವಿಡ್–19 ಕಾಲದಲ್ಲೂ ಅವರು ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.

ಮೃದು ಭಾಷಿಯಾಗಿದ್ದ ಅವರು, ಜನರ ಕುಂದುಕೊರತೆಗಳಿಗೆ ತಕ್ಷಣ ಸ್ಪಂದಿಸುತ್ತಿದ್ದರು. ಅವರು ಬೆಳಗಾವಿಯಲ್ಲಿ ಇರುತ್ತಿದ್ದ ದಿನಗಳಲ್ಲಿ ತಮ್ಮ ಗೃಹ ಕಚೇರಿಯಲ್ಲಿ,ಕಾಡಾ ಕಟ್ಟಡದಲ್ಲಿರುವ ಸಂಸದರ ಕಚೇರಿಯಲ್ಲೂ ಬೆಳಿಗ್ಗೆ ಹಾಗೂ ಸಂಜೆ ಸಾರ್ವಜನಿಕರಿಂದ ಅಹವಾಲು ಆಲಿಸುತ್ತಿದ್ದರು. ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳದಲ್ಲೇ ಬಗೆಹರಿಸುವುದಕ್ಕೂ ಯತ್ನಿಸುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.