ADVERTISEMENT

ಜೈನ ಮುನಿ ಹತ್ಯೆ ಹಿಂದೆ ಮುಸ್ಲಿಂ ಸಂಘಟನೆ ಕೈವಾಡದ ಶಂಕೆ: ವಿದ್ಯಾನಂದ ಸರಸ್ವತಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2023, 1:38 IST
Last Updated 19 ಜುಲೈ 2023, 1:38 IST
ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿ ನಂದಿಪರ್ವತ ಆಶ್ರಮಕ್ಕೆ ಮಂಗಳವಾರ ಭೇಟಿ ನೀಡಿದ ಅಖಿಲ ಭಾರತೀಯ ಸಂತ ಸಮಿತಿ ರಾಜ್ಯ ಘಟಕದ ಅಧ್ಯಕ್ಷರಾದ ವಿದ್ಯಾನಂದ ಸರಸ್ವತಿ ಸ್ವಾಮೀಜಿ
ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿ ನಂದಿಪರ್ವತ ಆಶ್ರಮಕ್ಕೆ ಮಂಗಳವಾರ ಭೇಟಿ ನೀಡಿದ ಅಖಿಲ ಭಾರತೀಯ ಸಂತ ಸಮಿತಿ ರಾಜ್ಯ ಘಟಕದ ಅಧ್ಯಕ್ಷರಾದ ವಿದ್ಯಾನಂದ ಸರಸ್ವತಿ ಸ್ವಾಮೀಜಿ    

ಚಿಕ್ಕೋಡಿ (ಬೆಳಗಾವಿ): ‘ತಾಲ್ಲೂಕಿನ ಹಿರೇಕೋಡಿಯ ನಂದಿಪರ್ವತ ಆಶ್ರಮದ ಮುನಿ ಕಾಮಕುಮಾರ ನಂದಿ ಮಹಾರಾಜ ಅವರ ಕೊಲೆಯಲ್ಲಿ ಒಬ್ಬನ ಕೈವಾಡ ಮಾತ್ರವಿಲ್ಲ. ಇದರ ಹಿಂದೆ ಮುಸ್ಲಿಂ ಸಂಘಟನೆಯ ಕೈವಾಡ ಇರುವ ಶಂಕೆ ಇದೆ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು’ ಎಂದು ಅಖಿಲ ಭಾರತೀಯ ಸಂತ ಸಮಿತಿ ರಾಜ್ಯ ಘಟಕದ ಅಧ್ಯಕ್ಷರಾದ ವಿದ್ಯಾನಂದ ಸರಸ್ವತಿ ಸ್ವಾಮೀಜಿ ಆಗ್ರಹಿಸಿದರು.

ಹಿರೇಕೋಡಿ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿ ಆಶ್ರಮದ ನಿವಾಸಿಗಳಿಗೆ ಸಾಂತ್ವನ ಹೇಳಿದ ಬಳಿಕ ಅವರು, ಮಾಧ್ಯಮದವರೊಂದಿಗೆ ಮಾತನಾಡಿದರು.

‘ಜೈನ ಮುನಿ ಹತ್ಯೆ ಪ್ರಕರಣ ಇಡೀ ದೇಶಕ್ಕೆ ದುಃಖ ತಂದಿದೆ. ಹಿಂದೂ ಸನಾತನ ಧರ್ಮಕ್ಕೆ ಇದೊಂದು ದೊಡ್ಡ ಆಘಾತ. ಇದರ ಹಿಂದೆ ಇರುವವರು ಯಾರು ಹಾಗೂ ಯಾವ ಸಂಘಟನೆ ಇದೆ ಎಂಬುದನ್ನು ಬಯಲಿಗೆಳೆಯಬೇಕಿದೆ. ಇದಕ್ಕಾಗಿ ಸಿಬಿಐ ತನಿಖೆಗೆ ಒಪ್ಪಿಸಬೇಕು. ಈಗಾಗಲೇ ರಾಜ್ಯದ ಮುಖ್ಯಮಂತ್ರಿ, ಗೃಹಮಂತ್ರಿ ಅವರಿಗೆ ಮನವಿ ಕೂಡ ಸಲ್ಲಿಸಿದ್ದೇವೆ. ಶೀಘ್ರದಲ್ಲೇ ರಾಜ್ಯಪಾಲರನ್ನು ಭೇಟಿ ಮಾಡಿ ಮನವರಿಕೆ ಮಾಡುತ್ತೇವೆ’ ಎಂದರು.

ADVERTISEMENT

‘ಹಿಂದೆ ಮಹಾರಾಷ್ಟ್ರದಲ್ಲೂ ಒಬ್ಬ ಸನ್ಯಾಸಿಯನ್ನು ಹೊಡೆದು ಕೊಲ್ಲಲಾಗಿದೆ. ಅಲ್ಲಿ ಅಂದು ಇದ್ದದ್ದು ‘ಇದೇ ಪಕ್ಷದ’ ಸರ್ಕಾರ. ಇಂದು ಇಲ್ಲಿಯೂ ಅವರದೇ ಪಕ್ಷದ ಸರ್ಕಾರವಿದೆ. ಇವರ ಸರ್ಕಾರ ಇದ್ದಾಗ ಮಾತ್ರ ಏಕೆ ಇಂಥ ದುರ್ಘಟನೆಗಳು ನಡೆಯುತ್ತವೆ?’ ಎಂದು ಅವರು ಪರೋಕ್ಷವಾಗಿ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು.

‘ಜೈನ ಮುನಿ ಹತ್ಯೆ ಬಳಿಕ ನಿರಂತರವಾಗಿ ಏಳು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ‘ಈ ಪಕ್ಷ’ ಅಧಿಕಾರಕ್ಕೆ ಬಂದ ಮೇಲೆಯೇ ಅಪರಾಧಿಗಳ ಕೃತ್ಯ ಹೆಚ್ಚಾಗಿವೆ. ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಸುವ ಭರದಲ್ಲಿ ಬಹುಸಂಖ್ಯಾತರ ಅಸ್ತಿತ್ವಕ್ಕೆ ಅಪಮಾನ ಮಾಡಬಾರದು’ ಎಂದೂ ಕಿಡಿ ಕಾರಿದರು.

‘ರಾಜ್ಯದಲ್ಲಿ ಮಠಗಳಿಗೆ ರಕ್ಷಣೆ ನೀಡಬೇಕಾದ ಜವಾಬ್ದಾರಿ ಸರ್ಕಾರದ್ದು. ಗುರುಗಳಿಗೇ ರಕ್ಷಣೆ ಇಲ್ಲವೆಂದರೆ ಸಂತರು ಹೇಗೆ ಮುಂದೆ ಬರಬೇಕು? ಸಂಜೆ 6 ಗಂಟೆಯ ಬಳಿಕ ಯಾವ ಸಂತರೂ ಹೊರಬೀಳದಂಥ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಬರೀ ಹಣದ ವಿಚಾರಕ್ಕೆ ಇಷ್ಟೊಂದು ಭೀಕರ ಹತ್ಯೆ ಆಗಲು ಸಾಧ್ಯವಿಲ್ಲ. ಆದ್ದರಿಂದ ಆಗಸ್ಟ್‌ 31ರೊಳಗೆ ಸಿಬಿಐ ತನಿಖೆಗೆ ಒಪ್ಪಿಸಬೇಕು. ಇಲ್ಲವಾದಲ್ಲಿ ದೊಡ್ಡ ಪ್ರಮಾಣದ ಹೋರಾಟ ಮಾಡಲು ನಾವು ಸಿದ್ಧ’ ಎಂದರು.

‘ಸನಾತನ ಸಂಸ್ಕೃತಿಯಲ್ಲಿ ಯಾರು ಮುಂದೆ ಇದ್ದಾರೋ ಅಂಥವರನ್ನು ಹತ್ಯೆ ಮಾಡಲು ರಾಷ್ಟ್ರವಿರೋಧಿ, ಭಯೋತ್ಪಾದಕ ಸಂಘಟನೆ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿಯೇ ಈ ಸಂಘಟನೆ ಹೆಚ್ಚು ಕೆಲಸ ಮಾಡುತ್ತಿದೆ’ ಎಂದು ಅವರು ಆರೋಪಿಸಿದರು.‌

ಸಮಿತಿಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಾಯಿ ಈಶ್ವರ ಗುರೂಜಿ, ಸಂಘಟನಾ ಕಾರ್ಯದರ್ಶಿ ಪರಮಾತ್ಮ ಮಹಾರಾಜ, ಇತರ ಸಂತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.