ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ 6 ಮಂದಿಯನ್ನು ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ಈ ಪೈಕಿ ಜಿಲ್ಲೆಯ ಒಬ್ಬರು ಮಾತ್ರ ಅವಕಾಶ ಪಡೆದಿದ್ದಾರೆ. ಉಳಿದ ಐವರು ಹೊರ ಜಿಲ್ಲೆಯವರು. ಈ ಮೂಲಕ ಜಿಲ್ಲೆಗೆ ಅನ್ಯಾಯ ಮಾಡಲಾಗಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಬೆಳಗಾವಿಯನ್ನು ಕೇಂದ್ರ ಸ್ಥಾನವನ್ನಾಗಿ ಹೊಂದಿರುವ ಈ ವಿಶ್ವವಿದ್ಯಾಲಯವು, ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡಿದೆ.
ಹುಬ್ಬಳ್ಳಿಯ ಹನುಮಂತಪ್ಪ ಎಸ್. ಶಿಗ್ಗಾಂವ, ಬೆಂಗಳೂರಿನ ಡಾ.ಶೇಷಮೂರ್ತಿ (ಸಾಮಾನ್ಯ ಮೀಸಲಾತಿ), ಹುಬ್ಬಳ್ಳಿಯ ಶೋಭಾ ಹೂಗಾರ (ಮಹಿಳಾ ಮೀಸಲು), ಬೆಳಗಾವಿಯ ಡಾ.ಆನಂದ ಹೊಸೂರ (ಹಿಂದುಳಿದ ವರ್ಗ), ಹುಬ್ಬಳ್ಳಿಯ ಅಶೋಕ ಕೆ. ಕಬ್ಬೇರ (ಪರಿಶಿಷ್ಟ ಪಂಗಡ) ಹಾಗೂ ಬಾಗಲಕೋಟೆಯ ರಮೇಶ ಸನದಿ (ಅಲ್ಪಸಂಖ್ಯಾತ) ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡವರು. ವಿಜಯಪುರ ಜಿಲ್ಲೆಗೆ ಪ್ರಾತಿನಿಧ್ಯವೇ ಸಿಕ್ಕಿಲ್ಲ.
ಈ ಮುಂಚೆ, ಜಿಲ್ಲೆಯ ಸಾಹಿತಿ ಸರಜೂ ಕಾಟ್ಕರ್ ಮತ್ತು ರಾಜು ಚಿಕ್ಕನಗೌಡರ ಸಿಂಡಿಕೇಟ್ ಸದಸ್ಯರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.