ಬೆಳಗಾವಿ: ತಾಲ್ಲೂಕಿನ ಮಾಸ್ತಮರಡಿ ಸರ್ಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಪ್ರವೀಣಕುಮಾರ ಅಂಗಡಿ ಅವರು ಈ ಸಾಲಿನ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನವಾಗಿದ್ದಾರೆ.
ಖಾನಾಪುರ ತಾಲ್ಲೂಕು ಪಾರಿಶ್ವಾಡದವರಾದ ಅವರು, 20 ವರ್ಷಗಳಿಂದ ಶಿಕ್ಷಕರಾಗಿದ್ದಾರೆ. ಶಾಲೆಯ ವಿದ್ಯಾರ್ಥಿಗಳು ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಚಿತ್ರಕಲಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಮಾರ್ಗದರ್ಶನ ನೀಡಿ ಬಹುಮಾನ ಪಡೆಯುವ ನಿಟ್ಟಿನಲ್ಲಿ ಸಜ್ಜುಗೊಳಿಸುತ್ತಿದ್ದಾರೆ. ವೈಯಕ್ತಿಕವಾಗಿಯೂ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಹಲವು ಚಿತ್ರಕಲಾ ಪ್ರದರ್ಶನದಲ್ಲಿ ಪಾಲ್ಗೊಂಡು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಯೋಗ ಶಿಬಿರ ಮತ್ತು ಸೇವಾದಳ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಅದನ್ನು ಶಾಲೆಯಲ್ಲಿ ಅನುಷ್ಠಾನಗೊಳಿಸುತ್ತಿದ್ದಾರೆ. ಮಕ್ಕಳನ್ನು ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸುತ್ತಿದ್ದಾರೆ.
ಅಕಾಡೆಮಿ ಮೊದಲಾದವುಗಳಿಂದ ಆಯೋಜಿಸುವ ಏಕವ್ಯಕ್ತಿ ಮತ್ತು ಅಂತರರಾಜ್ಯ ಸಾಮೂಹಿಕ ಚಿತ್ರಕಲಾ ಪ್ರದರ್ಶನ ನಡೆಸಿದ್ದಾರೆ. ವೃತ್ತಿ ಶಿಕ್ಷಣ, ಚಿತ್ರಕಲಾ ಶಿಕ್ಷಣದೊಂದಿಗೆ 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಹಿಂದಿ ವಿಷಯ ಬೋಧನೆಯಲ್ಲೂ ಅವರು ತೊಡಗಿದ್ದಾರೆ. ಇದೆಲ್ಲವನ್ನೂ ಪರಿಗಣಿಸಿ ಇಲಾಖೆಯು ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಕೊರತೆ ನೀಗಿಸಿದ್ದಾರೆ:‘ಕ್ರಿಯಾಶೀಲ ಶಿಕ್ಷಕರಾದ ಅವರು ಚಿತ್ರಕಲಾ ಶಿಕ್ಷಕರಾದರೂ ಹಿಂದಿ ವಿಷಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಬೋಧಿಸುತ್ತಿದ್ದಾರೆ. ಹಿಂದಿ ಭಾಷಾ ಶಿಕ್ಷಕರ ಹುದ್ದೆ ಖಾಲಿ ಇರುವುದರಿಂದ ಉಂಟಾಗಿರುವ ಕೊರತೆಯನ್ನು ಅವರು ಮೂರು ವರ್ಷಗಳಿಂದಲೂ ನೀಗಿಸಿದ್ದಾರೆ. ಇದರೊಂದಿಗೆ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರವಾಗಿದ್ದಾರೆ. ಪಠ್ಯೇತರ ಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ಆಯೋಜಿಸುತ್ತಾರೆ. ವಾರಕ್ಕೊಮ್ಮೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಮಕ್ಕಳಲ್ಲಿ ಲವಲವಿಕೆ ತುಂಬುತ್ತಿದ್ದಾರೆ’ ಎಂದು ತಿಳಿಸುತ್ತಾರೆ ಮುಖ್ಯ ಶಿಕ್ಷಕಿ ಗೀತಾ ಬ. ಅಂಗಡಿ.
‘ಪ್ರತಿ ವರ್ಷ ನಡೆಯುವ ಪ್ರತಿಭಾ ಕಾರಂಜಿಯಲ್ಲಿ ನಮ್ಮ ಶಾಲೆ ಪ್ರತಿನಿಧಿಸುವ ಬಹುತೇಕ ವಿದ್ಯಾರ್ಥಿಗಳು ಬಹುಮಾನ ಗೆಲ್ಲುತ್ತಿದ್ದಾರೆ. 2018–19ನೇ ಸಾಲಿನ ಕಲೋತ್ಸವದ ದೃಶ್ಯಕಲಾ ವಿಭಾಗದ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ತಂಡವು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಅಲ್ಲಿ 4ನೇ ಸ್ಥಾನವನ್ನು ಗಳಿಸಿದೆ. ಇದೆಲ್ಲದರ ಹಿಂದೆ ಪ್ರವೀಣಕುಮಾರ ಅವರ ಪರಿಶ್ರಮ ಬಹಳಷ್ಟಿದೆ. ಮಕ್ಕಳಿಗೆ ವಿಶೇಷ ಶೈಲಿಯ ಚಿತ್ರಕಲೆಗಳನ್ನು ಕಲಿಸುತ್ತಿದ್ದಾರೆ’ ಎನ್ನುತ್ತಾರೆ ಅವರು.
ವಿಶೇಷ ತರಬೇತಿ:‘ಶಾಲೆಯ ಕೈತೋಟ ನಿರ್ವಹಣೆಯಲ್ಲೂ ಅವರ ಶ್ರಮವಿದೆ. ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೂ ಶ್ರಮಿಸುತ್ತಿದ್ದಾರೆ. ಬೆಳಿಗ್ಗೆ ಶಾಲಾ ಅವಧಿಗೆ ಮುನ್ನ ಹಾಗೂ ಸಂಜೆ ಶಾಲಾ ಅವಧಿ ಮುಗಿದ ನಂತರ ವಿಶೇಷ ತರಗತಿಗಳನ್ನು ತೆಗೆದುಕೊಂಡು ವಿದ್ಯಾರ್ಥಿಗಳ ಕೈಬರಹ ಸುಧಾರಿಸಲು ತರಬೇತಿ ಕೊಡುತ್ತಾರೆ’ ಎಂದು ಮಾಹಿತಿ ನೀಡಿದರು.
ಶಾಲೆಗಳ ಗೋಡೆಗಳನ್ನು ವರ್ಲಿ ಕಲೆಯ ಚಿತ್ರಕಲೆ ಬಿಡಿಸಿ ಆಕರ್ಷಕಗೊಳಿಸಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳಿಗೂ ಅದನ್ನು ಪರಿಚಯಿಸಿದ್ದಾರೆ ಹಾಗೂ ತರಬೇತಿ ನೀಡಿದ್ದಾರೆ. ‘ಮಾಡುತ್ತಾ ಕಲಿ’ ತತ್ವದ ಆಧಾರದ ಮೇಲೆ ಬೋಧನೆ ಅವರ ವಿಶೇಷ. ತಮ್ಮ ಪ್ರತಿಭೆಯಿಂದಾಗಿ ಹಲವು ಸನ್ಮಾನ–ಪ್ರಶಸ್ತಿಗೆ ಭಾಜನವಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.