ಮೂಡಲಗಿ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಭವಿಷ್ಯವಿಲ್ಲ ಎಂದು ಮೂಗು ಮುರಿಯವವರಿಗೆ ತಾಲ್ಲೂಕಿನ ಹೊಸಟ್ಟಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ‘ಪಾಠ’ ಕಲಿಸುವಂತಿದೆ. ಒಂದು ಕಾಲದಲ್ಲಿ ಕುಗ್ರಾಮ ಎನಿಸಿದ್ದ ಹೊಸಟ್ಟಿ ಇಲ್ಲಿನ ಶಾಲೆಯ ಕಾರಣದಿಂದ ಈಗ ಸುಗ್ರಾಮವಾಗಿ ಬೆಳೆದಿದೆ.
ಇಲ್ಲಿ ಕಲಿತ ಪರುಶರಾಮ ನಾಯಿಕ ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿದ್ದಾರೆ. ಪಿ.ಬಿ.ಹಿರೇಮಠ ಕ್ಷೇತ್ರ ಶಿಕ್ಷಣಾಧಿಕಾರಿ, ಡಿ.ಡಿ.ಮೇಚನ್ನವರ ಹುಬ್ಬಳ್ಳಿಯಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದಾರೆ. ಮಾರುತಿ ದಾಸಣ್ಣವರ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆದಿದ್ದಾರೆ. ಈ ಊರಿನಲ್ಲಿ ಈಗ ಶಿಕ್ಷಕರು, ವೈದ್ಯರು, ಎಂಜಿನಿಯರ್, ವಕೀಲರು, ಪೊಲೀಸ್ ಅಧಿಕಾರಿಗಳು, ಸಂಶೋಧಕರು, ಸೈನಿಕರು, ಕೃಷಿಕರು, ಶ್ರೇಷ್ಠ ಕೀರ್ತನಕಾರರು, ರಾಷ್ಟ್ರ ಮಟ್ಟದ ಕ್ರೀಡಾಪಟುಗಳು ಇದ್ದಾರೆ. ಇವರೆಲ್ಲರೂ ಸರ್ಕಾರಿ ಶಾಲೆಯ ಕೊಡುಗೆಗಳೇ.
ಸೀತಾರಾಮ ಪತ್ತಾರ, ಎಸ್.ಎಂ. ನಾವಿ, ಸಿದ್ದಪ್ಪ ನಾಯಿಕ, ಬಿ.ಬಿ. ಹೊಸಮನಿ, ಸಿದ್ದಲಿಂಗ ನಾಯಿಕ ಮುಂತಾದ ಶಿಕ್ಷಕರು ಮಾದರಿಯಾಗಿದ್ದಾರೆ.
1947ರಲ್ಲಿ ಗ್ರಾಮದ ಹಣಮಂತ ದೇವರ ಚಾವಡಿಯಲ್ಲಿ 25 ಮಕ್ಕಳೊಂದಿಗೆ ಇಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಪ್ರಾರಂಭಗೊಂಡಿತು. 1966ರಲ್ಲಿ ದೇಸಾಯಿ ಕಟುಂಬದವರು ನೀಡಿದ 1 ಎಕರೆ ಭೂಮಿಯಲ್ಲಿ ಶಾಲೆಗೆ 2 ಕೊಠಡಿಗಳನ್ನು ನಿರ್ಮಿಸಿದರು. ಸದ್ಯ 1ರಿಂದ 7ನೇ ತರಗತಿ, 7 ಕೊಠಡಿ, 7 ಶಿಕ್ಷಕರಿದ್ದಾರೆ. 200 ವಿದ್ಯಾರ್ಥಿಗಳ ದಾಖಲಾತಿ ಇದೆ ಎಂದು ಮುಖ್ಯ ಶಿಕ್ಷಕ ಎಂ.ಎಸ್. ಸಿದ್ದಾಪುರ ತಿಳಿಸಿದರು.
ಸ್ಥಳೀಯರು, ಎಸ್‌ಡಿಎಂಸಿ ಸದಸ್ಯರು ಮತ್ತು ಕಲಿತು ಹೋದವರು ದೇಣಿಗೆ ನೀಡಿದ್ದರಿಂದ ಶಾಲೆ ಸುಸಜ್ಜಿತವಾಗಿ ಬೆಳೆದು ನಿಂತಿದೆ. ಮೇಜು, ಕುರ್ಚಿ, ಗ್ರಂಥಾಲಯ, ಹೈಟೆಕ್ ಶೌಚಾಲಯ, ಕಂಪ್ಯೂಟರ್‌ಗಳು, ಪ್ರಿಂಟರ್, ಶುದ್ಧ ನೀರಿನ ವ್ಯವಸ್ಥೆ, ಕ್ರೀಡಾ ಸಲಕರಣೆಗಳು ಇವೆ. ಶಾಸಕ ಬಾಲಚಂದ್ರ ಜಾರಕಿಹೊಳಿ ₹18 ಲಕ್ಷ ವೆಚ್ಚದ ಬೋಜನಾಲಯ ನಿರ್ಮಿಸಿದ್ದಾರೆ.
ಮೂಡಲಗಿಯ ಶೈಕ್ಷಣಿಕ ವಲಯದ ಶಿಕ್ಷಕರ ದಿನಾಚರಣೆಯನ್ನು ಹೊಸಟ್ಟಿ ಶಾಲೆಯಲ್ಲಿ ಸೆ. 5ರಂದು ಮಾಡಲು ನಿರ್ಧರಿಸಲಾಗಿದೆ. ಅದಕ್ಕಾಗಿ ಗ್ರಾಮವು ತಳಿರು ತೋರಣ, ಸ್ವಾಗತ ಕಮಾನುಗಳು, ಬ್ಯಾನರ್, ಪ್ಲೆಕ್ಸ್‌ಗಳಿಂದ ಅಲಂಕಾರಗೊಂಡಿದೆ.
ಹೊಸಟ್ಟಿಯ ಶೈಕ್ಷಣಿಕ ಪ್ರಗತಿಯ ಬಗ್ಗೆ ಹೆಮ್ಮೆ ಎನಿಸುತ್ತದೆ. ಈ ಶಾಲೆಗೆ ಪ್ರಸಕ್ತ ಕ್ರಿಯಾ ಯೋಜನೆಯಲ್ಲಿ 2 ಕೊಠಡಿಗಳಿಗೆ ಅನುದಾನ ಕೊಡಿಸಲಾಗುವುದು.ಬಾಲಚಂದ್ರ ಜರಕಿಹೊಳಿ, ಶಾಸಕ
ಸಮುದಾಯದ ಸಹಭಾಗಿತ್ವ ಇದ್ದರೆ ಸರ್ಕಾರಿ ಶಾಲೆ ಹೇಗೆ ಬೆಳೆಯುತ್ತದೆ ಎಂಬುದಕ್ಕೆ ಹೊಸಟ್ಟಿ ಶಾಲೆಯೇ ಉದಾಹರಣೆಯಾಗಿದೆ.ಅಜಿತ್ ಮನ್ನಿಕೇರಿ, ಕ್ಷೇತ್ರ ಶಿಕ್ಷಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.