ಬೆಳಗಾವಿ: ‘ವಿಜ್ಞಾನ ಬೋಧನೆಗೆ ದುಬಾರಿ ಬೋಧನಾ ಸಾಮಗ್ರಿಗಳ ಅವಶ್ಯಕತೆಯಿಲ್ಲ. ಸ್ಥಳೀಯವಾಗಿ ದೊರಕುವ ವಸ್ತುಗಳಿಂದಲೇ ಪರಿಕರ ತಯಾರಿಸಿ, ಪರಿಣಾಮಕಾರಿಯಾಗಿ ಬೋಧಿಸಬಹುದು’ ಎಂದು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಕಾರ್ಯದರ್ಶಿ ವಾಲ್ಟರ್ ಡಿಮೆಲ್ಲೊ ಅಭಿಪ್ರಾಯಪಟ್ಟರು.
ಇಲ್ಲಿನ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಸೇವಕ ಸಂಸ್ಥೆ, ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ವತಿಯಂದ ವಿಜ್ಞಾನ ಶಿಕ್ಷಕರು ಹಾಗೂ ಪ್ರಶಿಕ್ಷಣಾರ್ಥಿಗಳಿಗೆ ಮಂಗಳವಾರ ಆಯೋಜಿಸಿದ್ದ ‘ಕಡಿಮೆ ವೆಚ್ಚದ ಶಿಕ್ಷಣ ಸಾಮಗ್ರಿಗಳ ತಯಾರಿಕೆ ಮೂಲಕ ವಿಜ್ಞಾನ ಸಂವಹನ’ ವಿಷಯ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
‘ಸಾಂಪ್ರದಾಯಿಕ ಪದ್ಧತಿಯಲ್ಲಿ ವಿಜ್ಞಾನ ಬೋಧಿಸುವುದರಿಂದ ಶಿಕ್ಷಕರಿಗೆ ನಿರೀಕ್ಷಿತ ಮಟ್ಟದ ಯಶಸ್ಸು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿಸಲು ವಿಶ್ವದಾದ್ಯಂತ ಶಿಕ್ಷಕರು ಹೊಸ ಬೋಧನಾ ಸಾಧನಗಳನ್ನು ಆವಿಷ್ಕರಿಸುತ್ತಿದ್ದಾರೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಂಎನ್‌ಆರ್‌ಎಸ್ ಬಿಇಡಿ ಕಾಲೇಜಿನ ಪ್ರಾಚಾರ್ಯೆ ಡಾ.ನಿರ್ಮಲಾ ಬಟ್ಟಲ್, ‘ಶಿಕ್ಷಕ ಪರಿಣಾಮಕಾರಿಯಾಗಿ ಪಾಠ ಬೋಧಿಸಲು ಸತತ ಅಧ್ಯಯನಶೀಲವಾಗಿರಬೇಕು’ ಎಂದು ತಿಳಿಸಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶೈಕ್ಷಣಿಕ ಪರಿಷತ್ತಿನ ಸದಸ್ಯ ಡಾ. ಎಸ್.ಬಿ.ಸೋಮಣ್ಣವರ, ಶೈಕ್ಷಣಿಕ ವ್ಯವಸ್ಥೆಯಲ್ಲಿ ಸೃಜನಶೀಲ ಬೋಧನಾ ಕ್ರಮದ ಕುರಿತು ವಿವರಿಸಿದರು.
ಸೇವಕ ಸಂಸ್ಥೆಯ ಕಾರ್ಯದರ್ಶಿ ಆನಂದ ಲೋಬೊ ಮಾತನಾಡಿದರು. ಸದಸ್ಯೆ ಪ್ರತಿಮಾ ಜೋಶಿ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶೈಕ್ಷಣಿಕ ಪರಿಷತ್ತಿನ ಸದಸ್ಯ ಭರಮಾ ಗುಂಡುಕೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.