ADVERTISEMENT

ಬೆಳಗಾವಿ | ಮುಗಿದ ಅಧಿವೇಶನ: ಸಹಜ ಸ್ಥಿತಿಯತ್ತ ಜನಜೀವನ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2023, 7:22 IST
Last Updated 17 ಡಿಸೆಂಬರ್ 2023, 7:22 IST
ಬೆಳಗಾವಿಯ ಕಾಲೇಜು ರಸ್ತೆಯ ಸ್ವೀಟ್‌ಮಾರ್ಟ್‌ನಲ್ಲಿ ಶುಕ್ರವಾರ ಸಂಜೆ ಸಿಹಿ ತಿನಿಸುಗಳ ಮಾರಾಟ ಜೋರಾಗಿತ್ತು – ಪ್ರಜಾವಾಣಿ ಚಿತ್ರ:ಏಕನಾಥ ಅಗಸಿಮನಿ
ಬೆಳಗಾವಿಯ ಕಾಲೇಜು ರಸ್ತೆಯ ಸ್ವೀಟ್‌ಮಾರ್ಟ್‌ನಲ್ಲಿ ಶುಕ್ರವಾರ ಸಂಜೆ ಸಿಹಿ ತಿನಿಸುಗಳ ಮಾರಾಟ ಜೋರಾಗಿತ್ತು – ಪ್ರಜಾವಾಣಿ ಚಿತ್ರ:ಏಕನಾಥ ಅಗಸಿಮನಿ   

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ 10 ದಿನಗಳ ಕಾಲ ನಡೆದ ವಿಧಾನಮಂಡಲ ಚಳಿಗಾಲದ ಅಧಿವೇಶನ ಶುಕ್ರವಾರ ಮುಕ್ತಾಯಗೊಂಡಿದ್ದು, ನಗರದ ಜನಜೀವನ ಶನಿವಾರ ಸಹಜ ಸ್ಥಿತಿಗೆ ಮರಳಿದೆ.

ಸಚಿವರು, ಶಾಸಕರು ಮತ್ತು ಅವರ ಬೆಂಬಲಿಗರ ಓಡಾಟದಿಂದ ಗಿಜಿಗುಡುತ್ತಿದ್ದ ಬೆಳಗಾವಿ, ಈಗ ಶಾಂತವಾಗಿದೆ. ‘ಗಡಿನಾಡ ಶಕ್ತಿಕೇಂದ್ರ’ದ ಆವರಣ ಹಾಗೂ ಪ್ರತಿಭಟನಾ ಸ್ಥಳವೂ ಮೌನವಾಗಿದೆ.

ಸಿಕ್ಕಿದ್ದು ಭರವಸೆಯಷ್ಟೇ: ಪ್ರತಿಬಾರಿಯಂತೆ ಈ ಬಾರಿಯೂ ಸುವರ್ಣ ವಿಧಾಸೌಧ ಬಳಿಯ ಎರಡೂ ವೇದಿಕೆಗಳಲ್ಲಿ ಸರಣಿ ಪ್ರತಿಭಟನೆ ನಡೆದವು. ರೈತರು, ಕಾರ್ಮಿಕರು, ಗುತ್ತಿಗೆದಾರರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಸೇರಿದಂತೆ ವಿವಿಧ ಸಂಘಟನೆಯವರು ಧರಣಿ ನಡೆಸಿದರು. ಆಯಾ ಇಲಾಖೆ ಸಚಿವರು ಸ್ಥಳಕ್ಕಾಗಮಿಸಿ ಬೇಡಿಕೆ ಆಲಿಸಿದರು. ಆದರೆ, ಬಹುತೇಕರಿಗೆ ಸಿಕ್ಕಿದ್ದು ಭರವಸೆಯಷ್ಟೇ. ಹಾಗಾಗಿ, ‘ಬಂದ ದಾರಿಗೆ ಸುಂಕವಿಲ್ಲ’ ಎಂಬಂತೆ ಪ್ರತಿಭಟನಾಕಾರರು ಬೇಸರದಿಂದ ತಮ್ಮೂರಿನತ್ತ ಹೆಜ್ಜೆಹಾಕಿದರು.

ADVERTISEMENT

ವ್ಯಾಪಾರಸ್ಥರಿಗೂ ನಿರಾಸೆ: ಪ್ರತಿಬಾರಿ ಬೆಳಗಾವಿಯ ಅಧಿವೇಶನದಲ್ಲಿ ನಡೆಯುವ ಪ್ರತಿಭಟನೆಗಳಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಈ ಬಾರಿಯೂ ಕಳೆದ ವರ್ಷದಂತೆಯೇ ಪ್ರತಿಭಟನೆಗಳು ಕಂಡುಬಂದರೂ, ಪ್ರತಿಭಟನಾಕಾರರ ಸಂಖ್ಯೆ ಕಡಿಮೆಯಾಗಿತ್ತು. ಹಾಗಾಗಿ ಪ್ರತಿಭಟನಾ ಸ್ಥಳಗಳಲ್ಲಿ ಆಹಾರ ಮಳಿಗೆಗಳು, ಜ್ಯೂಸ್‌ ಸೆಂಟರ್‌ ತೆರೆದಿದ್ದ ವ್ಯಾಪಾಸ್ಥರಿಗೆ ನಿರಾಸೆಯಾಯಿತು. ಹೆಚ್ಚಿನ ವ್ಯಾಪಾರ–ವಹಿವಾಟು ನಡೆಯಬಹುದೆಂಬ ಅವರ ಲೆಕ್ಕಾಚಾರ ತಲೆಕೆಳಗಾಯಿತು.

ಮುಗಿಬಿದ್ದ ಗ್ರಾಹಕರು: ಅಧಿವೇಶನ ಹಿನ್ನೆಲೆಯಲ್ಲಿ ಕಳೆದ ಎರಡು ವಾರಗಳಿಂದ ನಗರದಲ್ಲೇ ಠಿಕಾಣಿ ಹೂಡಿದ್ದ ಸಚಿವರು, ಶಾಸಕರು, ವಿಧಾನಸಭೆ ಮತ್ತು ವಿಧಾನ ಪರಿಷತ್‌ ಸಚಿವಾಲಯದ ಅಧಿಕಾರಿಗಳು, ಪೊಲೀಸರು, ಮಾರ್ಷಲ್‌ಗಳು ಶುಕ್ರವಾರ ಸಂಜೆಯಿಂದಲೇ ತಮ್ಮೂರಿನತ್ತ ಹೊರಟರು. ಇಲ್ಲಿನ ಕ್ಯಾಂಪ್‌ ಪ್ರದೇಶ, ಕಾಲೇಜು ರಸ್ತೆ, ಕೇಂದ್ರೀಯ ಬಸ್‌ ನಿಲ್ದಾಣ ಬಳಿಯಿರುವ ಅಂಗಡಿಗಳಲ್ಲಿ ಮುಗಿಬಿದ್ದು ‘ಕುಂದಾ’, ‘ಕರದಂಟು’ ಖರೀದಿಸಿದರು. ಶನಿವಾರವೂ ಬಹುತೇಕ ಅಂಗಡಿಗಳಲ್ಲಿ ಸಿಹಿಖಾದ್ಯಗಳ ಮಾರಾಟ ಜೋರಾಗಿತ್ತು.

ಈಡೇರದ ನಿರೀಕ್ಷೆ
ಅಧಿವೇಶನ ಉತ್ತರ ಕರ್ನಾಟಕದ ಜನರ ಆಶೋತ್ತರಗಳಿಗೆ ಸ್ಪಂದಿಸಲಿದೆ ಎಂಬ ಜನರ ನಿರೀಕ್ಷೆ ಈ ಬಾರಿಯೂ ಹುಸಿಯಾಯಿತು. ಸದನದಲ್ಲಿ ‘ನಾಮಕಾವಾಸ್ತೆ’ ಚರ್ಚೆ ನಡೆದು ಭರವಸೆ ಸಿಕ್ಕವೆ ಹೊರತು ಯಾವುದೇ ಸಮಸ್ಯೆಗೆ ನಿರ್ದಿಷ್ಟ ಪರಿಹಾರ ಸಿಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.