ಖಾನಾಪುರ: ಛತ್ತೀಸಗಡ ರಾಜ್ಯದ ಪಲಾರಿ ಜಿಲ್ಲೆಯ ದಾಮ್ಮಿ ಗ್ರಾಮದಿಂದ ತಪ್ಪಿಸಿಕೊಂಡು ಖಾನಾಪುರಕ್ಕೆ ಬಂದಿದ್ದ 10 ವರ್ಷದ ಬಾಲಕನನ್ನು, ಮರಳಿ ಹೆತ್ತವರಿಗೆ ಒಪ್ಪಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೆತ್ತವರಿಂದ ದೂರವಾಗಿ ದಾರಿಯಲ್ಲಿ ಸಿಕ್ಕ-ಸಿಕ್ಕ ರೈಲನ್ನೇರಿ ಖಾನಾಪುರಕ್ಕೆ ಬಂದಿಳಿದಿದ್ದ. ಆಧುನಿಕ ತಂತ್ರಜ್ಞಾನದ ನೆರವಿನಿಂದ ಬಾಲಕನ ಹೆತ್ತವರನ್ನು ಸಂಪರ್ಕಿಸಿ ಅವರಿಗೆ ಸುರಕ್ಷಿತವಾಗಿ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.
ಘಟನೆಯ ವಿವರ: ಶನಿವಾರ ರಾತ್ರಿ ಪೊಲೀಸ್ ಸಹಾಯವಾಣಿ 112 ಸಂಖ್ಯೆಗೆ ಕರೆ ಮಾಡಿದ ನಾಗರಿಕರೊಬ್ಬರು ಅಪರಿಚಿತ ಬಾಲಕನೊಬ್ಬ ಏಕಾಂಗಿಯಾಗಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೊರಟಿರುವ ಮಾಹಿತಿಯನ್ನು ಖಾನಾಪುರ ಪೊಲೀಸರಿಗೆ ನೀಡಿದ್ದರು. ಬಾಲಕನ ಕರೆತಂದು ಮಾಹಿತಿ ಕೇಳಿದರು. ಬಾಲಕನಿಗೆ ಅರ್ಥವಾಗಿರಲಿಲ್ಲ ಮತ್ತು ಬಾಲಕನ ಮಾತುಗಳು ಪೊಲೀಸರಿಗೂ ತಿಳಿದಿರಲಿಲ್ಲ. ಆದರೆ ಹಲವು ಸಮಯದ ತನಿಖೆಯ ಬಳಿಕ ಆತನ ಹೆಸರು ವಿಕ್ರಮ ಮತ್ತು ಆತನ ಊರು ದಾಮ್ಮಿ ಎಂದಷ್ಟೇ ಮಾಹಿತಿ ಸಿಕ್ಕಿತ್ತು. ಇಷ್ಟೇ ಮಾಹಿತಿಯಿಂದ ಕಾರ್ಯಪ್ರವೃತ್ತರಾದ ಪೊಲೀಸರು ಆತನಿಗೆ ಗೂಗಲ್ ಮ್ಯಾಪ್ ಮೂಲಕ ದಾಮ್ಮಿ ಎಂಬ ಹೆಸರಿನ ವಿವಿಧ ಊರುಗಳನ್ನು ತೋರಿಸಿದಾಗ ಛತ್ತೀಸಗಡ ರಾಜ್ಯದಲ್ಲಿರುವ ಊರೇ ನನ್ನೂರು ಎಂದು ಗುರುತು ಹಿಡಿದಿದ್ದ.
ಮ್ಯಾಪ್‌ನಲ್ಲಿ ಆತನ ಊರಿನ ಬೀದಿಗಳನ್ನು ಪರಿಚರಿಸಿದಾಗ ಆತನ ತಂದೆಯ ಪರಿಚಯದ ಪಂಚರ್ ಅಂಗಡಿ ಒಂದನ್ನು ಗುರುತಿಸಿದ್ದ. ಆ ಅಂಗಡಿಯ ನಾಮಫಲಕದಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ ಪೊಲೀಸರು ಬಾಲಕನ ಜೊತೆ ಅಂಗಡಿಯವನನ್ನು ಆತನ ಭಾಷೆಯಲ್ಲಿ ಮಾತನಾಡಿಸಿ, ಹೆಚ್ಚಿನ ಮಾಹಿತಿ ಪಡೆದು ಅಂಗಡಿಯವನಿಂದ ಬಾಲಕನ ತಂದೆಯ ಸಂಪರ್ಕ ಸಾಧಿಸಿದ್ದರು.
ತನ್ನ ಮಗನ ವಿಷಯವನ್ನು ಪೊಲೀಸರಿಂದ ಅರಿತ ಬಾಲಕನ ತಂದೆ ಕನ್ಹಯ್ಯಾ ಚವಾಣ ಸೋಮವಾರ ಛತ್ತೀಸಗಡದಿಂದ ಖಾನಾಪುರ ಠಾಣೆಗೆ ಬಂದು ಮಗನನ್ನು ಪೊಲೀಸರಿಂದ ಪಡೆದು ತಮ್ಮೂರಿಗೆ ಕರೆದುಕೊಂಡು ಹೋದರು.
ತಂದೆ-ಮಗನ ಮಿಲನಕ್ಕೆ ಖಾನಾಪುರ ಠಾಣೆಯ ಪಿ.ಐ ಮಂಜುನಾಥ ನಾಯ್ಕ, ಎಸ್.ಐ ಗಿರೀಶ ಎಂ, ಸಿಬ್ಬಂದಿ ಜಗದೀಶ ಹುಬ್ಬಳ್ಳಿ, ಜಯರಾಮ ಹಮ್ಮಣ್ಣವರ, ಗುರುರಾಜ ತಮದಡ್ಡಿ, ಕುತುಬುದ್ದೀನ ಸನದಿ ಸಾಕ್ಷಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.