ಬೆಳಗಾವಿ: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಪಟ್ಟಿದ್ದು ಎನ್ನಲಾದ ಸಿ.ಡಿ.ಯಲ್ಲಿರುವ ಯುವತಿಯನ್ನು ಬೆಂಗಳೂರಿನಲ್ಲಿ ಯಾರೋ ಅಪಹರಿಸಿ, ಕಿರುಕುಳ ನೀಡುತ್ತಿದ್ದಾರೆ ಎಂದು ಆಕೆಯ ತಂದೆ ಇಲ್ಲಿನ ಎಪಿಎಂಸಿ ಪೊಲೀಸ್ ಠಾಣೆಗೆ ದೂರು ಮಂಗಳವಾರ ನೀಡಿದ್ದಾರೆ. ಇದರೊಂದಿಗೆ ಪ್ರಕರಣ ದೊಡ್ಡ ತಿರುವು ಪಡೆದುಕೊಂಡಿದೆ.
ಪೊಲೀಸರು, ಐಪಿಸಿ ಸೆಕ್ಷನ್ 363, 368, 343, 346, 354, 354ಎ ಹಾಗೂ 506ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 54 ವರ್ಷದ ವ್ಯಕ್ತಿಯು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ದೂರಿನಲ್ಲೇನಿದೆ?: ‘ಪುತ್ರಿಯು ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಪಿ.ಜಿ.ಯಲ್ಲಿ ಇರುತ್ತಿದ್ದಳು. ರಜೆ ಇದ್ದಾಗ ಮನೆಗೆ ಬಂದು ಹೋಗುತ್ತಿದ್ದಳು. ಇತ್ತೀಚೆಗೆ ಟಿ.ವಿ. ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಅಶ್ಲೀಲ ವಿಡಿಯೊ ಹರಿಬಿಟ್ಟಿದ್ದು, ಅದರಲ್ಲಿ ನಮ್ಮ ಮಗಳಂತೆ ಕಾಣುವ ಯುವತಿಯು ವ್ಯಕ್ತಿಯೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿದ್ದುದ್ದನ್ನು ನೋಡಿ ಗಾಬರಿಯಾಯಿತು. ಈ ವಿಷಯವಾಗಿ ಪುತ್ರಿಯನ್ನು ಸಂಪರ್ಕಿಸಿದಾಗ, ‘ವಿಡಿಯೊದಲ್ಲಿರುವುದು ನಾನಲ್ಲ. ನನ್ನಂತೆ ಕಾಣುವಂತೆ ವಿಡಿಯೊ ಎಡಿಟ್ ಮಾಡಿ, ನನ್ನ ಧ್ವನಿಯಂತೆ ನಕಲಿ ಧ್ವನಿ ಸೇರಿಸಿ ಹರಿಬಿಟ್ಟಿದ್ದಾರೆ. ಇದರಲ್ಲಿ ನನ್ನ ಪಾತ್ರವೇನೂ ಇಲ್ಲ’ ಎಂದು ತಿಳಿಸಿದ್ದಳು. ಕೂಡಲೇ ಮನೆಗೆ ಬಾ ಎಂದಾಗ ಸುರಕ್ಷಿತವಾಗಿದ್ದೇನೆ’ ಎಂದು ತಿಳಿಸಿದ್ದಳು.
‘ಸಿ.ಡಿ.ಯು ನಕಲಿ ಎನ್ನುವುದು ಸಾಬೀತಾದ ಮೇಲೆ ಬರುತ್ತೇನೆ ಎಂದಿದ್ದಳು. 2–3 ದಿನ ನಮ್ಮ ಸಂಪರ್ಕದಲ್ಲಿದ್ದಳು. ಮತ್ತೊಮ್ಮೆ ಕರೆ ಮಾಡಿ ಮನೆಗೆ ಬರುವಂತೆ ಕರೆದಾಗ, ಭಯದಲ್ಲಿ ಮಾತನಾಡುತ್ತಿದ್ದಳು. ನಾನು ಸದ್ಯಕ್ಕೆ ಏನನ್ನೂ ಹೇಳುವ ಸ್ಥಿತಿಯಲ್ಲಿಲ್ಲ. ಎಲ್ಲಿದ್ದೇನೆ ಎನ್ನುವುದೇ ನನಗೆ ಗೊತ್ತಿಲ್ಲ. ಮನೆಗೆ ಬಂದ ಮೇಲೆ ಎಲ್ಲವನ್ನೂ ತಿಳಿಸುತ್ತೇನೆ ಎಂದು ಕರೆ ಕಡಿತಗೊಳಿಸಿದ್ದಳು. ಅವಳಾಗಿಯೇ ಮನೆಗೆ ಬರುತ್ತಾಳೆಂಬ ನಂಬಿಕೆಯಲ್ಲಿ ನಾವಿದ್ದೆವು’.
3–4 ದಿನಗಳ ಹಿಂದೆ ನನ್ನ ಮಗಳಂತೆ ಕಾಣುವ ಯುವತಿ ಮಾತನಾಡಿದ ವಿಡಿಯೊ ಟಿ.ವಿ.ಗಳಲ್ಲಿ ಬಂದಿತ್ತು. ಆತ್ಮಹತ್ಯೆಗೆ ಯತ್ನಿಸಿದ್ದೇನೆ ಹಾಗೂ ಕುಟುಂಬದವರು ಆತ್ಮಹತ್ಯೆಗೆ ಯತ್ನಿಸಿದ್ದೇವೆ ಎಂದು ಹೇಳಿ ರಕ್ಷಣೆ ಕೋರಿದ್ದನ್ನು ಗಮನಿಸಿದ್ದೇವೆ. ಈ ಆಂಶಗಳನ್ನು ನೋಡಿದಾಗ ಮಗಳನ್ನು ಯಾರೋ ಅಪಹರಿಸಿ, ಒತ್ತೆಯಾಳಾಗಿ ಇರಿಸಿಕೊಂಡು ಒತ್ತಾಯಪೂರ್ವಕವಾಗಿ ಅವಳ ವಿಡಿಯೊ ಮಾಡಿ ಬಿಡುತ್ತಿದ್ದಾರೆ ಎನಿಸುತ್ತದೆ. ಮಗಳ ಮೊಬೈಲ್ ಫೋನ್ ಸ್ವಿಚ್ಡ್‌ಆಫ್ ಆಗಿದ್ದು, ಅವಳನ್ನು ಸಂಪರ್ಕಿಸಲು 7–8 ದಿನಗಳಿಂದಲೂ ಸಾಧ್ಯವಾಗಿಲ್ಲ. ಅವಳು ಎಲ್ಲಿದ್ದಾಳೆ, ಯಾರೊಂದಿಗಿದ್ದಾಳೆ ಎಂಬಿತ್ಯಾದಿ ಮಾಹಿತಿ ಸಿಗದೆ ಭಯಭೀತರಾಗಿದ್ದೇವೆ. ಮಗಳು ಕೂಡ ಅಪಾಯದಲ್ಲಿ ಸಿಲುಕಿರುವುದು ಕಂಡುಬರುತ್ತಿದೆ.
‘ಬೆಂಗಳೂರಿನ ಪೊಲೀಸರು ನನ್ನ ಹೆಂಡತಿಯ ತವರು ಮನೆಗೆ ನೋಟಿಸ್ ಅಂಟಿಸಿದ್ದಾರೆ ಎನ್ನುವುದು ತಿಳಿದುಬಂದಿದೆ. ಇಷ್ಟಾದ ಮೇಲೂ ಮಗಳು ಎಲ್ಲಿದ್ದಾಳೆ ಎನ್ನುವುದು ತಿಳಿದುಬಂದಿಲ್ಲ. ನಾವು ಹೊರಗಡೆ ಹೋಗಿ ಆಕೆಯನ್ನು ಹುಡುಕಲು ಭಯವಾಗುತ್ತಿದೆ. ಬೆಂಗಳೂರಿಗೆ ಹೋಗಿ ದೂರು ದಾಖಲಿಸುವುದಕ್ಕೆ ಭಯ ಆಗುತ್ತಿರುವುದರಿಂದ ಇಲ್ಲೇ ಕೊಟ್ಟಿದ್ದೇನೆ. ಮಗಳನ್ನು ಮಾರ್ಚ್ 2ಕ್ಕೂ ಮುನ್ನವೇ ಅಪಹರಿಸಿ ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಆಕೆಯ ಜೀವಕ್ಕೆ ಅಪಾಯವಿದೆ. ನಮಗೆ ರಕ್ಷಣೆ ನೀಡಬೇಕು ಹಾಗೂ ಮಗಳನ್ನು ಹುಡುಕಿಕೊಡಬೇಕು’ ಎಂದು ದೂರಿನಲ್ಲಿ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.