ADVERTISEMENT

ರಾಯಬಾಗ: ಪರಿಹಾರ ಸಿಕ್ಕಿಲ್ಲವೆಂದು ಕೆರೆ ಕಾಮಗಾರಿಗೆ ತಡೆ

ರೈತರ ಮನವೊಲಿಸಲು ಯಶಸ್ವಿಯಾದ ಮಹಾವೀರ ಮೋಹಿತೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 12:54 IST
Last Updated 11 ಜುಲೈ 2024, 12:54 IST
ರಾಯಬಾಗ ತಾಲ್ಲೂಕಿನ ಬಾವನ ಸೌಂದತ್ತಿ ಗ್ರಾಮದಲ್ಲಿ ಗುರುವಾರ ಕೆರೆ ತುಂಬುವ ಕಾಮಗಾರಿಗೆ ಅಡ್ಡಿಪಡಿಸಿದ ರೈತರ ಮನವಲಿಸುತ್ತಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ ಹಾಗೂ ಅಧಿಕಾರಿಗಳು
ರಾಯಬಾಗ ತಾಲ್ಲೂಕಿನ ಬಾವನ ಸೌಂದತ್ತಿ ಗ್ರಾಮದಲ್ಲಿ ಗುರುವಾರ ಕೆರೆ ತುಂಬುವ ಕಾಮಗಾರಿಗೆ ಅಡ್ಡಿಪಡಿಸಿದ ರೈತರ ಮನವಲಿಸುತ್ತಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ ಹಾಗೂ ಅಧಿಕಾರಿಗಳು    

ರಾಯಬಾಗ: ತಾಲ್ಲೂಕಿನ ಬಾವನ ಸೌಂದತ್ತಿ ಗ್ರಾಮದಲ್ಲಿ ತಮ್ಮ ಜಮೀನಿಗೆ ಪರಿಹಾರ ಸಿಕ್ಕಿಲ್ಲವೆಂದು ಕೆರೆಗೆ ನೀರು ತುಂಬುವ ಕಾಮಗಾರಿಗೆ ಗುರುವಾರ ತಡೆವೊಡ್ಡಿದ ರೈತರ ಮನವೊಲಿಸುವಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ ಯಶಸ್ವಿಯಾದರು.

ಇತ್ತೀಚೆಗೆ ಕೆಲ ರೈತರ ಖಾತೆಗೆ ಸರ್ಕಾರದಿಂದ ತಲಾ ₹63 ಲಕ್ಷ  ಜಮೆಯಾಗಿತ್ತು, ಇನ್ನುಳಿದ ರೈತರಿಗೆ ಸಿಗಬೇಕಾದ ಪರಿಹಾರದ ಹಣ ಸಿಕ್ಕಿಲ್ಲ. ಪರಿಹಾರ ಸಿಗೋವರೆಗೂ ಕೆರೆ ತುಂಬಿಸಲು ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದರು.

ಬಳಿಕ ತಹಶೀಲ್ದಾರ್ ಸುರೇಶ ಮುಂಜೆ ಮಾತನಾಡಿ, ಸರ್ಕಾರದ ಯೋಜನೆಗಳಿಗೆ ಯಾರೂ ಅಡ್ಡಿ ಪಡಿಸುವಂತಿಲ್ಲ. ಅಡ್ಡಿಪಡಿಸಿದ್ದೇ ಆದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದರು.

ADVERTISEMENT

ಈ ಸಂದರ್ಭದಲ್ಲಿ ರೈತರೊಂದಿಗೆ ಮಾತನಾಡಿದ ಮಹಾವೀರ ಮೋಹಿತೆ, ‘ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸಗಳು ಪ್ರಗತಿಯಲ್ಲಿದ್ದು, ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವುದಾಗಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಈ ಭಾಗದಲ್ಲಿ ಮಳೆ ಕಡಿಮೆಯಾಗುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಹೀಗಾಗಿ ₹100 ಕೋಟಿ ಮೊತ್ತದಲ್ಲಿ 37 ಕೆರೆ ತುಂಬುವ ಯೋಜನೆ ಜಾರಿಗೊಂಡರೆ, ಈ ಭಾಗದ ರೈತರ ಬಾಳು ಬಂಗಾರವಾಗಲಿದೆ. ಹೀಗಾಗಿ ತಮ್ಮ ಜಮೀನಿನ ಸೂಕ್ತವಾದ ದಾಖಲೆಗಳನ್ನು ನನ್ನ ಸ್ವಂತ ಹಣದಿಂದಲೇ ಕಲ್ಪಿಸಿಕೊಟ್ಟು ಪೈಪ್ ಲೈನ್ ವ್ಯವಸ್ಥೆ ಮಾಡಿಕೊಡುವೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಯಬಾಗ ಪಿಎಸ್ಐ ಶಿವರಾಜ್ ಧರಿಗೊಂಡ, ನೀರಾವರಿ ಇಲಾಖೆಯ ಎಇಇ ಕೆ.ಸಿ.ಗಿರಿಮಲ್ಲ, ಕಂದಾಯ ನಿರೀಕ್ಷಕ ಸೋಮಶೇಖರ ಜೋರೆ, ನಾಗರಾಜ ಪತ್ತಾರ, ಅಣ್ಣಪ್ಪ ಭೂಯಿ, ಮಹೇಶ ಕೊರವಿ, ಪೋಪಟ್ ಕಾಂಬಳೆ, ರಾಕೇಶ ಕಾಂಬಳೆ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.