ಚಿಕ್ಕೋಡಿ: ದೀಪಾವಳಿ ಬಂದರೆ ಸಾಕು; ತಾಲ್ಲೂಕಿನ ಕೋಥಳಿ ಗ್ರಾಮದಲ್ಲಿ ಸಡಗರ ಇಮ್ಮಡಿಯಾಗುತ್ತಿತ್ತು. ಮಣ್ಣಿನ ಹಣತೆಗಳನ್ನು ಮಾಡಲು ನಾಲ್ಕು ತಿಂಗಳು ಮೊದಲು ಸಿದ್ಧತೆ ನಡೆಯುತ್ತಿದ್ದವು. ಇಲ್ಲಿನ 30ಕ್ಕೂ ಹೆಚ್ಚು ಕುಂಬಾರ ಕುಟುಂಬಗಳು ಈ ಹಬ್ಬಕ್ಕಾಗಿ ಕಾಯುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಕುಂಬಾರರಿಗೂ ದೀಪಾವಳಿಗೆ ಸಂಬಂಧವೇ ಇಲ್ಲ ಎಂಬಷ್ಟು ಸಮಸ್ಯೆ ತಲೆದೋರಿದೆ.
ಜೇಡಿಮಣ್ಣಿನ ಹಣತೆಗೆ ಬೇಡಿಕೆ ಇಲ್ಲದೇ ಕುಂಬಾರರು ಕುಂಬಾರಿಕೆಯಿಂದ ವಿಮುಖರಾಗುತ್ತಿದ್ದಾರೆ. ದೀಪಾವಳಿ ಹಬ್ಬದಲ್ಲಿ ಮಣ್ಣಿನ ಹಣತೆಯಲ್ಲಿ ದೀಪ ಬೆಳಗಿಸುವುದು ಸಾಮಾನ್ಯವಾಗಿತ್ತು. ಆದರೆ ಇಂದು ಎಲೆಕ್ಟ್ರಿಕಲ್ ದೀಪ, ತಗಡಿನ ಪಣತಿ, ಪಿಂಗಾಣಿ ಮಣ್ಣಿನ ದೀಪಗಳ ಹಾವಳಿ ಹೆಚ್ಚಾಗಿದ್ದರಿಂದ ಜೇಡಿಮಣ್ಣಿನ ಹಣತೆಗಳು ನೇಪಥ್ಯಕ್ಕೆ ಸರಿದಿವೆ.
ಹಲವು ವರ್ಷಗಳಿಂದ ಕುಂಬಾರಿಕೆ ವೃತ್ತಿ ಮಾಡುತ್ತ ಬಂದಿರುವ ಇಲ್ಲಿನ ಜನ ಬೇಸಿಗೆಯಲ್ಲಿ ಮಣ್ಣಿನ ಮಡಿಕೆ, ಹರಿವೆ, ಶ್ರಾವಣ ಮಾಸದಲ್ಲಿ ಗುಳ್ಳವ್ವ, ಸೀಗವ್ವ, ಮಣ್ಣೆತ್ತು, ದೀಪಾವಳಿಯಲ್ಲಿ ಹಣತೆಗಳ ತಯಾರಿ, ಸಂಕ್ರಾಂತಿಯ ಸಂದರ್ಭದಲ್ಲಿ ಮಣ್ಣಿನ ಕುಡಿಕೆಗಳ ತಯಾರಿಯನ್ನು ಮಾಡುತ್ತ ವರ್ಷವಿಡೀ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದರು. ಆಧುನಿಕತೆ ಅಲೆಯಲ್ಲಿ ಸಂಪ್ರದಾಯದಿಂದ ಬಂದಿರುವ ಆರಾಧನೆ ತೆರೆ ಮರೆಗೆ ಸರಿಯುತ್ತಿದೆ.
ತಲೆ ತಲಾಂತರದಿಂದ ಕುಂಬಾರಿಕೆ ವೃತ್ತಿ ಮಾಡುವವರಿಗೆ ಸರ್ಕಾರದಿಂದ ಯಾವುದೇ ಪ್ರೋತ್ಸಾಹ ಇಲ್ಲದಂತಾಗಿದೆ. ಕುಂಬಾರರು ತಯಾರಿಸುವ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಾಡುವ ಮೂಲಕ ಕುಂಬಾರಿಕೆ ವೃತ್ತಿಗೆ ಜೀವಂತಿಗೆ ಕೊಡಬೇಕಿದೆ. ಇಲ್ಲದೇ ಹೋದಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಚ್ಚುವ ಮಣ್ಣಿನ ದೀಪಗಳೂ ಸೇರಿದಂತೆ ಮಣ್ಣಿನ ಮಡಿಕೆ ಕುಡಿಕೆಗಳನ್ನು ವಸ್ತುಸಂಗ್ರಹಾಲಯದಲ್ಲಿ ಮಾತ್ರ ನೋಡುವಂತಹ ದಿನಗಳು ಇನ್ನೂ ದೂರವಿಲ್ಲ ಎನ್ನವುದು ಇವರ ನೋವು.
ಹತ್ತು ವರ್ಷಗಳ ಹಿಂದೆ ವರ್ಷವಿಡೀ ಕುಂಬಾರಿಕೆ ಮಾಡುತ್ತಿದ್ದೇವು. ಈಗ ಹಣತೆ ಮಡಿಕೆ ಮಣ್ಣೆತ್ತು ತಯಾರಿಸುತ್ತಿದ್ದೇವೆ. ಸರ್ಕಾರ ನೆರವು ನೀಡಬೇಕುರಾಜು ಕುಂಬಾರ ಕೋಥಳಿ
ಪಿಂಗಾಣಿ ಪಣತಿ ಮೇಣದ ಬತ್ತಿ ಎಲೆಕ್ಟ್ರಿಕಲ್ ದೀಪಗಳು ಬಂದು ಕುಂಬಾರಿಕೆ ವೃತ್ತಿಯನ್ನು ನುಂಗಿ ಹಾಕಿದ್ದರಿಂದ ಕುಂಬಾರರು ತಮ್ಮ ವೃತ್ತಿಯಿಂದ ದೂರವಾಗುತ್ತಿದ್ದಾರೆಹನುಮಂತ ಚವ್ಹಾಣ ಗ್ರಾಹಕ ಚಿಕ್ಕೋಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.