ADVERTISEMENT

ಮಳೆಗಾಲ ನಿರ್ವಹಣೆಗೆ ಸಾಲದ ತಯಾರಿ: ಚರಂಡಿಗಳಲ್ಲಿ ತ್ಯಾಜ್ಯ, ಹೂಳು

ಕಾಲುವೆಯಂತಾಗುತ್ತಿರುವ ರಸ್ತೆಗಳು

ಎಂ.ಮಹೇಶ
Published 24 ಮೇ 2022, 19:30 IST
Last Updated 24 ಮೇ 2022, 19:30 IST
ಹುಕ್ಕೇರಿ ಪಟ್ಟಣದ ಶಿಕ್ಷಕರ ಕಾಲೊನಿಯಿಂದ ಬೈಪಾಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಗಣೇಶ ನಗರ ಬಳಿ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ, ಗುಂಡಿಯಲ್ಲಿ ವಾಹನ ಸಿಲುಕಿದೆ
ಹುಕ್ಕೇರಿ ಪಟ್ಟಣದ ಶಿಕ್ಷಕರ ಕಾಲೊನಿಯಿಂದ ಬೈಪಾಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಗಣೇಶ ನಗರ ಬಳಿ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ, ಗುಂಡಿಯಲ್ಲಿ ವಾಹನ ಸಿಲುಕಿದೆ   

ಬೆಳಗಾವಿ: ಮುಂಗಾರು ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇವೆ. ಆದರೆ, ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮಳೆಗಾಲ ನಿರ್ವಹಣೆಗೆ ಸ್ಥಳೀಯ ಸಂಸ್ಥೆಗಳು ಸಮರ್ಪಕ ಕೈಗೊಂಡಿಲ್ಲದಿರುವುದು ಕಂಡುಬಂದಿದೆ. ಇದು, ಅಪಾಯ ಹಾಗೂ ಅನಾಹುತದ ಮುನ್ಸೂಚನೆ ನೀಡುತ್ತಿದೆ. ಚರಂಡಿ, ಮಳೆ ನೀರು ಕಾಲುವೆ, ಗಟಾರ ಮೊದಲಾದವುಗಳನ್ನು ಸಮರ್ಪಕವಾಗಿ ನಿರ್ವಹಿಸದಿರುವುದು ಆತಂಕ ಸೃಷ್ಟಿಸಿದೆ.

ಮೇ ಮೊದಲ ವಾರದಿಂದ ಈವರೆಗೆ ಸುರಿದ ಸಾಧಾರಣ ಮಳೆ ನಗರದಲ್ಲಿ ಹಾಗೂ ಜಿಲ್ಲೆಯ ವಿವಿಧೆಡೆ ಹಲವು ಅವಾಂತರ ಸೃಷ್ಟಿಸಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗದ್ದರಿಂದ ರಸ್ತೆಗಳು ಕಾಲುವೆ ಸ್ವರೂಪ ಪಡೆಯುತ್ತಿವೆ. ಚರಂಡಿಯಲ್ಲಿನ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ.

ಮಳೆಗಾಲ ಆರಂಭಕ್ಕೂ ಮುನ್ನ ನಿರ್ವಹಣಾ ಕ್ರಮ ಚುರುಕುಗೊಳಿಸದಿದ್ದರೆ ಪರಿಸ್ಥಿತಿ ಇನ್ನೂ ಬಿಗಡಾಯಿಸಲಿದೆ. ಮನೆಗಳು ಜಲಾವೃತವಾಗಲಿವೆ ಎನ್ನುವುದು ಆಯಾ ಭಾಗದ ನಿವಾಸಿಗಳ ಅತಂಕವಾಗಿದೆ. ಆದರೆ, ಇದಕ್ಕೆ ಮಹಾನಗರಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಆದ್ಯತೆ ಕೊಡದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ADVERTISEMENT

ರಸ್ತೆಯೋ, ಕಾಲುವೆಯೋ?:ಜೋರಾಗಿ ಮಳೆ ಸುರಿದರೆ ಅಶೋಕ ವೃತ್ತ, ಹಳೆಯ ಪಿ.ಬಿ. ರಸ್ತೆ, ಧರ್ಮನಾಥ ಭವನ ಬಳಿಯ ಮತ್ತಿತರ ಮುಖ್ಯರಸ್ತೆಗಳಲ್ಲಿ ಅಪಾರ ಪ್ರಮಾಣದ ನೀರು ನಿಲ್ಲುತ್ತಿದೆ. ಗಾಂಧಿ ನಗರ ಬಳಿಯ ಮೇಲ್ಸೇತುವೆಯಲ್ಲೂ ನೀರು ನಿಲ್ಲುತ್ತಿದೆ. ಈ ಮಾರ್ಗ ಕೆರೆಯೋ ಅಥವಾ ಕಾಲುವೆಯೋ ಎನ್ನುವ ಪ್ರಶ್ನೆ ಮೂಡುತ್ತದೆ. ಇಲ್ಲಿ ಸಂಚರಿಸುವ ದ್ವಿಚಕ್ರವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಖಚಿತ ಎನ್ನುವಂತಾಗಿದೆ. ಸರ್ಕಸ್ ಮಾಡಿಕೊಂಡು ಸಂಚರಿಸಬೇಕಾಗಿದೆ.

ತಪ್ಪದ ಗೋಳು:ಪ್ರತಿ ಮಳೆಗಾಲದಲ್ಲಿ ಶಿವಾಜಿ ನಗರ, ವೀರಭದ್ರ ನಗರ, ಮರಾಠ ಕಾಲೊನಿ, ಶಾಸ್ತ್ರಿ ನಗರ, ಸಮರ್ಥ ನಗರ, ಇಂದ್ರಪ್ರಸ್ಥ ನಗರ, ಕರಿಯಪ್ಪ ಕಾಲೊನಿ, ವಡಗಾವಿ ಮತ್ತು ಖಾಸಬಾಗದ ಮನೆಗಳಿಗೆ ಮಳೆ ನೀರು ನುಗ್ಗುತ್ತಿದೆ. ಕೆಲವೊಮ್ಮೆ ಸತತ ಮಳೆಯಾದಾಗ ಮನೆಗಳಿಂದ ನೀರು ಹೊರ ಹಾಕುವುದಕ್ಕೆ ಜನರು ಪ್ರಯಾಸಪಡುವುದು ಹಿಂದೆಲ್ಲಾ ವರದಿಯಾಗಿದೆ. ಆ ಸ್ಥಿತಿ ಈ ಬಾರಿಯೂ ಮರುಕಳಿಸಿದರೆ ಅಚ್ಚರಿಯೇನಿಲ್ಲ ಎನ್ನುವಂತಹ ಸನ್ನಿವೇಶವಿದೆ.

ನಗರದಲ್ಲಿ ಹಾದು ಹೋಗಿರುವ ಬಳ್ಳಾರಿ ನಾಲೆ, ಲೆಂಡಿ ನಾಲೆ ಅತಿಕ್ರಮಣಗೊಂಡಿವೆ. ನಾಲೆಗಳು ಹಾಗೂ ಚರಂಡಿಗಳನ್ನು ಸಮರ್ಪಕವಾಗಿ ಸ್ವಚ್ಛಗೊಳಿಸಿಲ್ಲ ಎನ್ನುವ ಆರೋಪವೂ ಜನರಿಂದ ಕೇಳಿಬರುತ್ತಿದೆ. ಹಾಗಾಗಿ ಈ ಬಾರಿಯೂ ಮಳೆ ನೀರು ಮನೆಗಳಿಗೆ ನುಗ್ಗುವ ಸಾಧ್ಯತೆ ಇದ್ದು, ತಗ್ಗು ಪ್ರದೇಶದ ನಿವಾಸಿಗಳ ಆತಂಕ ನಿವಾರಣೆಗೆ ಸೂಕ್ತ ಕ್ರಮವಾಗಿಲ್ಲ.

ಅಪಾಯಕ್ಕೆ ಆಹ್ವಾನ:ನಗರದಲ್ಲಿ ಪ್ರತಿಬಾರಿ ಜೋರು ಮಳೆ–ಗಾಳಿಯಿಂದಾಗಿ ಮರಗಳು ಧರೆಗುರುಳುತ್ತಲೇ ಇವೆ. ಆದರೆ, ಈವರೆಗೂ ಅಪಾಯ ಹಂತದ ಮರಗಳ ರೆಂಬೆ–ಕೊಂಬೆಗಳನ್ನು ಕತ್ತರಿಸದೆ ಮಹಾನಗರ ಪಾಲಿಕೆ, ಅರಣ್ಯ ಇಲಾಖೆಯವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಜನರದ್ದು. ಇನ್ನೂ ಅಲ್ಲಲ್ಲಿ ವಿದ್ಯುತ್‌ ಕಂಬಗಳು ಬೀಳುವ ಹಂತದಲ್ಲಿದ್ದು, ಅಪಾಯ ಆಹ್ವಾನಿಸುತ್ತಿವೆ.

ಹುಕ್ಕೇರಿಯಲ್ಲೂ ತೊಂದರೆ

ಹುಕ್ಕೇರಿ: ಪಟ್ಟಣದ ಬಸವ ನಗರ ಮತ್ತು ಗಣೇಶ ಬಡಾವಣೆ ಸೇರಿ ವಿವಿಧ ಪ್ರದೇಶಗಳಲ್ಲಿ ಚರಂಡಿಗಳನ್ನು ಸಮರ್ಪಕವಾಗಿ ನಿರ್ವಹಿಸದೆ ಇರುವುದರಿಂದ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಇದರಿಂದ ಡಾಂಬರು ಕಿತ್ತು ಹೋಗುತ್ತಿದ್ದು, ದೊಡ್ಡ ಗುಂಡಿಗಳು ಉಂಟಾಗಿವೆ.

‘ಚರಂಡಿಗಳನ್ನು ವೈಜ್ಞಾನಿಕವಾಗಿ ನಿರ್ಮಿಸಿಲ್ಲ. ಇದರಿಂದಾಗಿ ತೊಂದರೆಯಾಗುತ್ತಿದೆ’ ಎಂದು ನಿವಾಸಿ ರವಿ ಕಾಂಬಳೆ ಹೇಳುತ್ತಾರೆ.

‘ಪೌರಕಾರ್ಮಿಕರ ಸಂಖ್ಯೆ ಕಡಿಮೆ ಇರುವುದರಿಂದ ಸ್ವಚ್ಛತಾ ಕಾರ್ಯ ತಡವಾಗುತ್ತಿದೆ ಎನ್ನುವ ಸಮಜಾಯಿಷಿ ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ್ ಅವರದು’ ಎನ್ನುತ್ತಾರೆ ನಿವಾಸಿಗಳಾದ ಕೆ.ಪಿ. ಶಿರಗಾಂವಕರ್, ಬಸವರಾಜ ಕೆ.

ಅವೈಜ್ಞಾನಿಕ ರಸ್ತೆಯೇ ಕಂಟಕ

ಚನ್ನಮ್ಮನ ಕಿತ್ತೂರು: ಮುಂಗಾರು ಮಳೆಯಿಂದ ಅವಘಡ ಸಂಭವಿಸಬಾರದು ಎಂದು ತಾಲ್ಲೂಕಿನ ಗ್ರಾಮ ಪಂಚಾಯ್ತಿ ಮತ್ತು ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಊರುಗಳಲ್ಲಿ ಚರಂಡಿ ಸ್ವಚ್ಛತೆ ಕೆಲಸವನ್ನು ಬಹುತೇಕ ಕಡೆ ಮಾಡಲಾಗಿದೆ.

ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿಕೊಂಡಿದ್ದರೂ, ಅನೇಕ ಊರುಗಳಲ್ಲಿ ಇನ್ನೂ ಚರಂಡಿಗಳನ್ನೇ ಮಾಡಲಾಗಿಲ್ಲ ಎಂಬ ದೂರುಗಳು ಸಾಮಾನ್ಯವಾಗಿವೆ. ಸಿಮೆಂಟ್ ಕಾಂಕ್ರೀಟ್ (ಸಿಸಿ)ರಸ್ತೆ ನಿರ್ಮಾಣದ ನಂತರ ಹಳ್ಳಿಗಳ ಕೆಲವು ಓಣಿಗಳ ಪರಿಸ್ಥಿತಿ ಹೇಳತೀರದಾಗಿದೆ. ಅನೇಕ ಕಡೆಗಳಲ್ಲಿ ಮನೆಗಳು ಈ ಸಿ.ಸಿ. ರಸ್ತೆ ನಿರ್ಮಾಣವಾದ ನಂತರ ರಸ್ತೆ ಬಿಟ್ಟು ಕೆಳಗೆ ಹೋಗಿವೆ. ಮಳೆಯಾದರೆ, ಈ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಬಡಕುಟುಂಬಗಳ ರೋದನೆ ಹೇಳತೀರದು ಎಂಬ ದೂರುಗಳು ಜನರಿಂದ ಕೇಳಿಬರುತ್ತಿವೆ.

ತ್ಯಾಜ್ಯದಿಂದ ತುಂಬಿದೆ

ಸವದತ್ತಿ: ಮಳೆ ನೀರು ಸರಾಗವಾಗಿ ಹರಿದು ಹೋಗಲೆಂದು ಪಟ್ಟಣದಲ್ಲಿ ಲಂಡೇನ ಹಳ್ಳ ರಾಜ ಕಾಲುವೆ ಇದೆ. ಕಟಕೋಳ ಬ್ಯಾಂಕ್‌ ಹತ್ತಿರ ಸೇತುವೆ ನಿರ್ಮಾಣದಿಂದ ಕಾಲುವೆ ಇಕ್ಕಟ್ಟಾಗಿದೆ. ಅಲ್ಲಿ ತ್ಯಾಜ್ಯ, ಹೂಳು ತುಂಬಿಕೊಂಡಿದ್ದು ನೀರು ಸರಾಗವಾಗಿ ಹರಿಯವುದಕ್ಕೆ ವ್ಯವಸ್ಥೆ ಇಲ್ಲದಾಗಿದೆ.

ಬಜಾರ್‌ ಮಾರ್ಗದ ನೀರು ಮರಳಿ ಹಳ್ಳ ಸೇರಲು ಸರಿಯಾದ ವ್ಯವಸ್ಥೆ ಇಲ್ಲದಾಗಿದೆ. ಪಕ್ಕದ ಮನೆ, ಅಂಗಡಿಗಳಿಗೆ ನೀರು ನುಗ್ಗುತ್ತದೆ. ಕುಂಬಾರ ಗಲ್ಲಿಯವರೆಗೂ ನುಗ್ಗಿ ಅವಾಂತರ ಸೃಷ್ಟಿಸಿದ್ದೂ ಇದೆ. ಚರಂಡಿ ಮತ್ತು ಹಳ್ಳವನ್ನು ಸ್ವಚ್ಛಗೊಳಿಸಿಲ್ಲವೆಂದು ಸ್ಥಳೀಯರು ತಿಳಿಸಿದರು.

ಈಗಲೂ ಪಟ್ಟಣದ ಬಹುತೇಕ ಚರಂಡಿಗಳು ತ್ಯಾಜ್ಯದಿಂದ ಕೂಡಿವೆ. ಅಲ್ಪ ಮಳೆಗೂ ರಸ್ತೆ ಮೇಲೆ ನೀರು ಹರಿಯುವುದು ಕಂಡುಬರುತ್ತಿದೆ. ಕೆಲವೆಡೆ ಚರಂಡಿಯಿಂದ ಹೊರತೆಗೆದ ತ್ಯಾಜ್ಯವನ್ನು ವಿಲೇವಾರಿ ಮಾಡಿಲ್ಲ; ಪಕ್ಕದಲ್ಲೇ ಸುರಿಯಲಾಗಿದೆ. ಇದರಿಂದ ವಾತಾವರಣ ಹಾಳಾಗುತ್ತಿದೆ.

‘ಸಕಾಲಕ್ಕೆ ಲಂಡೇನ ಹಳ್ಳ, ಚರಂಡಿಗಳ ಸ್ವಚ್ಛತೆ ಮತ್ತು ಮಳೆಗಾಲ ನಿರ್ವಹಣೆಗೆ ಕ್ರಮ ವಹಿಸಲಾಗುತ್ತಿದೆ‘ ಎಂದು ಪುರಸಭೆ ಮುಖ್ಯಾಧಿಕಾರಿ ಪಿ.ಎಂ. ಚನ್ನಪ್ಪನವರ ಪ್ರತಿಕ್ರಿಯಿಸಿದರು.

ಮುನ್ನೆಚ್ಚರಿಕೆ ಕ್ರಮವಿಲ್ಲ

ನೇಸರಗಿ: ಗ್ರಾಮೀಣ ಪ್ರದೇಶದಲ್ಲಿ ಗಟಾರುಗಳು ತ್ಯಾಜ್ಯದಿಂದ ತುಂಬಿದ್ದು, ಸ್ವಚ್ಚಗೊಳಿಸುವ ಕೆಲಸವಾಸಗಿಲ್ಲ. ಮಳೆ ನೀರು ಸರಾಗವಾಗಿ ಹರಿದು ಹೋಗಲು ಗ್ರಾ.ಪಂ.ಗಳು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಸಮೀಪದ ದೇಶನೂರ ಗ್ರಾಮದ ಗ್ರಾ.ಪಂ. ಬಳಿಯ ಚರಂಡಿ ನಿರ್ವಹಿಸಿಲ್ಲ. ಸಂಬಂಧಿಸಿದವರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎನ್ನುವುದು ಜನರ ಒತ್ತಾಯವಾಗಿದೆ.

‘ಮುನವಳ್ಳಿ ಪಟ್ಟಣವು ಬೆಳೆಯುತ್ತಿದ್ದು, ಹೊಸ ಬಡಾವಣೆಗಳು ತಲೆ ಎತ್ತುತ್ತಿವೆ. ಇಲ್ಲಿ ಹುಬ್ಬಳ್ಳಿ–ಧಾರವಾಡ ರಸ್ತೆ ಬದಿಯ ಗಟಾರಗಳು ಕಿತ್ತು ಹೋಗಿವೆ. ಪುರಸಭೆಯು ಗಟಾರದ ಹೂಳು ತೆರವಿಗೆ ಕ್ರಮ ವಹಿಸಿಲ್ಲ. ಇದರಿಂದಾಗಿ ಮಳೆಗಾಲದಲ್ಲಿ ಗಟಾರಗಳು ಉಕ್ಕಿ ಹರಿದು ನೀರು ರಸ್ತೆಯಲ್ಲಿ ಹರಿಯುತ್ತಿದೆ. ಜನರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಅಧಿಕಾರಿಗಳು ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವ ಬದಲಿಗೆ ಮುಂಚಿತವಾಗಿಯೇ ಎಚ್ಚೆತ್ತುಕೊಂಡು ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸುತ್ತಾರೆ ಮುನವಳ್ಳಿಯ ನಿವಾಸಿ ಕಿರಣ ಯಲಿಗಾರ.

ಪ್ರತಿಕ್ರಿಯೆಗಳು

ಕಾರ್ಮಿಕರ ಕೊರತೆ

ಹುಕ್ಕೇರಿಯಲ್ಲಿ ಪೌರಕಾರ್ಮಿಕರ ಸಂಖ್ಯೆ ಕಡಿಮೆ ಇರುವುದರಿಂದ ಸ್ವಚ್ಛತಾ ಕಾರ್ಯ ತ್ವರಿತವಾಗಿ ನಡೆಸಲಾಗುತ್ತಿಲ್ಲ. ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರನ್ನು ನೇಮಿಸಿಕೊಂಡು ನಿರ್ವಹಣೆಗೆ ಕ್ರಮ ವಹಿಸಲಾಗುವುದು.

ಮೋಹನ್ ಜಾಧವ್, ಮುಖ್ಯಾಧಿಕಾರಿ, ಹುಕ್ಕೇರಿ

ಈಗಲೇ ಎಚ್ಚೆತ್ತುಕೊಳ್ಳಲಿ

ಬೆಳಗಾವಿಯ ಕೋಟೆ ಕೆರೆ ತುಂಬಿದಾಗ ಹೆಚ್ಚುವರಿ ನೀರು ಶಿವಾಜಿ ನಗರಕ್ಕೆ ನುಗ್ಗುತ್ತಿದೆ. ತೊಂದರೆ ತಲೆದೋರಿದಾಗ ಬಗೆಹರಿಸುವ ಬದಲಿಗೆ ಪಾಲಿಕೆಯವರು ಈಗಿನಿಂದಲೇ ನಿರ್ವಹಣಾ ಕೆಲಸ ಚುರುಕುಗೊಳಿಸಬೇಕು

ರಾಹುಲ್‌ ಹೆದ್ದೂರಶೆಟ್ಟಿ, ನಿವಾಸಿ, ಬೆಳಗಾವಿ

ಆತಂಕ ಕಾಡುತ್ತಿದೆ

2019ರಲ್ಲಿ ನಮ್ಮ ಮನೆಗೆ ನೀರು ನುಗ್ಗಿತ್ತು. ಆಗ ಮನೆ ಮುಂಭಾಗದಲ್ಲಿ ಒಂದೇ ರೈಲ್ವೆ ಹಳಿ ಇತ್ತು. ಈ ಬಾರಿ ಮೂರು ಹಳಿ ನಿರ್ಮಾಣವಾಗಿವೆ. ಅದರ ಪಕ್ಕದಲ್ಲೇ ನಾಲೆ ಇದೆ. ಹಾಗಾಗಿ ಈ ಬಾರಿ ನಾಲೆ ಸರಾಗ ಹರಿದು ಹೋಗುವುದೇ ಎನ್ನುವ ಆತಂಕ ಕಾಡುತ್ತಿದೆ.

ಉದಯ ಕಿಂಜವಾಡ್ಕರ್, ರಾಹುಲ್‌ ಬಾಳೇಕುಂದ್ರಿ, ನಿವಾಸಿಗಳು, ಮರಾಠ ಕಾಲೊನಿ

ಈ ವರ್ಷ ಸಮಸ್ಯೆಯಾಗದಂತೆ ಕ್ರಮ

ಈ ಹಿಂದೆ ಬೆಳಗಾವಿ ನಗರದಲ್ಲಿ ಬಳ್ಳಾರಿ ಮತ್ತು ಲೇಂಡಿ ನಾಲಾಗಳಿಂದ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿಯಾಗಿತ್ತು. ಈ ವರ್ಷ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಏಪ್ರಿಲ್‌ನಿಂದಲೇ ನಾಲೆಗಳ ಸ್ವಚ್ಚತೆ ಕಾರ್ಯ ನಡೆಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಈ ಬಾರಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು.

ಅನಿಲ ಬೆನಕೆ, ಶಾಸಕ, ಉತ್ತರ ವಿಧಾನಸಭಾ ಕ್ಷೇತ್ರ

33 ಕಿ.ಮೀ. ನಾಲೆ ಸ್ವಚ್ಛ: ಆಯುಕ್ತ

ಬೆಳಗಾವಿ ನಗರದಲ್ಲಿ 34 ಕಿ.ಮೀ. ನಾಲೆ ಇದೆ. ಆ ಪೈಕಿ 33 ಕಿ.ಮೀ. ಸ್ವಚ್ಛಗೊಳಿಸಿದ್ದೇವೆ. ಬಡಾವಣೆಗಳಲ್ಲಿನ ಚರಂಡಿಗಳನ್ನೂ ಸ್ವಚ್ಛಗೊಳಿಸಲಾಗುತ್ತಿದೆ. ಅಪಾಯದ ಹಂತದಲ್ಲಿರುವ ಮರಗಳನ್ನು ಕತ್ತರಿಸಲು ಹಾಗೂ ವಿದ್ಯುತ್‌ ಕಂಬ ಸರಿಪಡಿಸಲು ನಾವು, ಅರಣ್ಯ ಇಲಾಖೆ ಮತ್ತು ಹೆಸ್ಕಾಂ ಅಧಿಕಾರಿಗಳು ಜಂಟಿಯಾಗಿ ಸಭೆ ನಡೆಸಲಿದ್ದೇವೆ. ಮಳೆಗಾಲದಲ್ಲಿ ಯಾವುದೇ ಸಮಸ್ಯೆ ತಲೆದೋರದಂತೆ ಕ್ರಮ ಕೈಗೊಳ್ಳುತ್ತಿದ್ದೇವೆ. ಜನರು ಕಾಲುವೆ, ಚರಂಡಿಯಲ್ಲಿ ತ್ಯಾಜ್ಯ ಎಸೆಯದೆ ಸಹಕರಿಸಬೇಕು.

ರುದ್ರೇಶ್ ಘಾಳಿ, ಆಯುಕ್ತ, ಮಹಾನಗರ ಪಾಲಿಕೆ, ಬೆಳಗಾವಿ

(ಪ್ರಜಾವಾಣಿ ತಂಡ: ಇಮಾಮ್‌ಹುಸೇನ್‌ ಗೂಡುನವರ, ಪ್ರದೀಪ ಮೇಲಿನಮನಿ, ಎನ್‌.ಪಿ. ಕೊಣ್ಣೂರ, ಬಸವರಾಜ ಶಿರಸಂಗಿ, ಚ.ಯ. ಮೆಣಶಿನಕಾಯಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.