ADVERTISEMENT

ಪ್ರಾಣಿಗಳ ಕಳೇಬರಕ್ಕಿಲ್ಲ ಗೌರವದ ’ವಿದಾಯ’

ನಿಗದಿತ ಜಾಗವಿಲ್ಲ; ಎಲ್ಲೆಂದರಲ್ಲಿ ಬಿಸಾಡಿ ವಿಲೇವಾರಿ

ಎಂ.ಮಹೇಶ
Published 11 ಜನವರಿ 2021, 19:30 IST
Last Updated 11 ಜನವರಿ 2021, 19:30 IST
ಮೂಡಲಗಿಯ ಪ್ರಸಿದ್ಧ ಜಾನುವಾರು ಪೇಟೆಯ ನೋಟ (ಸಂಗ್ರಹ ಚಿತ್ರ)
ಮೂಡಲಗಿಯ ಪ್ರಸಿದ್ಧ ಜಾನುವಾರು ಪೇಟೆಯ ನೋಟ (ಸಂಗ್ರಹ ಚಿತ್ರ)   

ಬೆಳಗಾವಿ: ಜಿಲ್ಲೆಯಾದ್ಯಂತ ಪ್ರಾಣಿಗಳ ಕಳೇಬರಗಳಿಗೆ ಗೌರವದ ‘ವಿದಾಯ’ ಸಿಗುತ್ತಿಲ್ಲ.

ಬಿಡಾಡಿದನ, ಕರುಗಳು ಅಥವಾ ಎಮ್ಮೆಗಳು ಅಥವಾ ಬೀದಿ ನಾಯಿಗಳು ಮೃತಪಟ್ಟರೆ ಕಳೇಬರಗಳು ರಸ್ತೆ ಬದಿಯಲ್ಲೋ, ಕಾಲುವೆಗಳ ಸಮೀಪವೋ, ಯಾವುದೋ ಗುಂಡಿಗಳಲ್ಲೋ ಬಿದ್ದು ಕೊಳೆತು ದುರ್ನಾತ ಹರಡಿ, ಅಸ್ತಿಪಂಜರವಾಗಿ ಕ್ರಮೇಣ ನಾಶವಾಗುವುದು ಸಾಮಾನ್ಯ.

ಮಾಹಿತಿ ಸಿಕ್ಕರೆ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ, ಜಾನುವಾರು ಅಥವಾ ಸಾಕುಪ್ರಾಣಿಗಳ ಕಳೇಬರದ ಅಂತ್ಯಕ್ರಿಯೆ ನೆರವೇರಿಸುತ್ತಾರೆ. ಅವುಗಳಿಗೆಂದು ಪ್ರತ್ಯೇಕ ಜಾಗವಾಗಲಿ ಅಥವಾ ಸ್ಮಶಾನವಾಗಲಿ ಇಲ್ಲ. ಸಿಕ್ಕಲ್ಲಿ ಅಥವಾ ಸ್ಮಶಾನಗಳ ಒಂದು ಕಡೆಯಲ್ಲಿ ಗುಂಡಿ ತೆಗೆದು ಹೂಳುವ ಮೂಲಕ ವಿಲೇವಾರಿ ಮಾಡುವುದು ಕಂಡುಬರುತ್ತಿದೆ.

ADVERTISEMENT

ಹಳ್ಳಿಗಳಲ್ಲಿ ರೈತರು ತಾವು ಸಾಕಿದ ಜಾನುವಾರು ಮೃತಪಟ್ಟಲ್ಲಿ, ಅಂತ್ಯಕ್ರಿಯೆಯನ್ನು ಗೌರವದಿಂದ ನೆರವೇರಿಸುತ್ತಾರೆ. ಕೆಲವೆಡೆ ಹೊರವಲಯದಲ್ಲೋ ಅಥವಾ ಖಾಲಿ ಜಾಗದಲ್ಲೋ ಬಿಸಾಡುವುದೂ ಉಂಟು. ಇದರಿಂದ ಅ ಪ್ರದೇಶದ ವಾತಾವರಣ ಹಾಳಾಗುವುದಲ್ಲದೆ, ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ರೋಗ–ರುಜಿನಗಳು ಹರಡುವುದಕ್ಕೂ ಕಾರಣವಾಗುತ್ತಿದೆ.

ಮುಖ್ಯ ರಸ್ತೆ ಅಥವಾ ಹೆದ್ದಾರಿಗಳಲ್ಲಿ ವಾಹನಗಳಿಗೆ ಸಿಲುಕಿ ಸಾವಿಗೀಡಾಗುವ ನಾಯಿ ಮೊದಲಾದವುಗಳ ತೆರವು ಕಾರ್ಯ ‌ಸಮರ್ಪಕವಾಗಿ ನಡೆಯುತ್ತಿಲ್ಲ. ಅವುಗಳು ನಾಯಿ, ಹದ್ದು, ಕಾಗೆ ಮೊದಲಾದವುಗಳಿಗೆ ‘ಆಹಾರ’ವಾಗುತ್ತವೆ.

ಕಳೇಬರಗಳಿಂದ ಗೊಬ್ಬರ!

ಮೂಡಲಗಿಯಲ್ಲಿ ನಾಯಿ, ಹಂದಿ, ದನ, ಕರುಗಳು ಮೃತಪಟ್ಟಿದ್ದು ಗೊತ್ತಾದಲ್ಲಿ, ಕಳೇಬರವನ್ನು ಪುರಸಭೆಯವರು ತಂದು ವಿಲೇವಾರಿ ಮಾಡುವ ವ್ಯವಸ್ಥೆ ಇದೆ. ಕೆಲವೊಮ್ಮೆ ಪ್ರಾಣಿಗಳು ರಸ್ತೆಯಲ್ಲಿ ಸಾವಿಗೀಡಾಗಿ ದುರ್ನಾತ ಬೀರುವುದೂ ಉಂಟು. ಸಾರ್ವಜನಿಕರು ಪುರಸಭೆ ಗಮನಕ್ಕೆ ತಂದಾಗ ವಾಹನ ಕಳುಹಿಸಿ, ಸತ್ತ ಪ್ರಾಣಿಯನ್ನು ಮುಗಳಖೋಡ ರಸ್ತೆಯಲ್ಲಿರುವ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಒಯ್ದು ಗೊಬ್ಬರವಾಗಿ ಪರಿವರ್ತಿಸುವ ವ್ಯವಸ್ಥೆ ಮಾಡಿದ್ದಾರೆ. ತಿಂಗಳಲ್ಲಿ ಸರಾಸರಿ 2 ರಿಂದ 3 ಕರುಗಳು, 2–3 ನಾಯಿ, ಹಂದಿಗಳು ಸಾವಿಗೀಡಾಗುತ್ತಿರುವ ವರದಿ ಪುರಸಭೆಯಲ್ಲಿದೆ. ಈ ಪ್ರಾಣಿಗಳಿಗೆ ಸಮಾಧಿಗೆಂದು ಪ್ರತ್ಯೇಕ ಸ್ಥಳವಿಲ್ಲ.

ಮೂಡಲಗಿಯಲ್ಲಿ ಪ್ರತಿ ಭಾನುವಾರ ಜಾನುವಾರು ಸಂತೆ ಕಟ್ಟುತ್ತದೆ. ಎಮ್ಮೆ, ಹೋರಿ, ಎತ್ತುಗಳ ವಹಿವಾಟು ಜೋರಿರುತ್ತದೆ. ಎಮ್ಮೆಗಳನ್ನು ಸಾಕಿ ಅವುಗಳನ್ನು ಮಾರುವುದಕ್ಕಾಗಿ ನೂರಾರು ಕುಟುಂಬಗಳು ವಿವಿಧ ಬಡಾವಣೆಗಳಲ್ಲಿವೆ. ಎಮ್ಮೆಗಳು ಕರು ಹಾಕಿದ ನಂತರ ಮಾರುತ್ತಾರೆ. ಕೆಲವೊಮ್ಮೆ ಕರುಗಳು ಸಾವಿಗೀಡಾದರೆ, ಕಳೇಬರಗಳನ್ನು ಅಲ್ಲಲ್ಲಿ ಎಸೆಯುವುದು ಇಲ್ಲವೆ ತೋಚಿದಲ್ಲಿ ಸಮಾಧಿ ಮಾಡುತ್ತಿದ್ದರು. ಇದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಣಾಮ ಬೀರುತ್ತಿತ್ತು. ಎರಡು ವರ್ಷಗಳಿಂದ ಪುರಸಭೆಯವರು ಅದಕ್ಕೆ ಪರಿಹಾರ ಕಂಡುಕೊಂಡಿದ್ದಾರೆ.

‘ಸತ್ತ ದನ, ಕರುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆಯದಂತೆ ಅವುಗಳನ್ನು ಸಾಕುವ ಕುಟುಂಬಗಳಿಗೆ ನೋಟಿಸ್‌ ನೀಡಲಾಗಿದೆ. ಕರುಗಳು ಸಾವಿಗೀಡಾದರೆ ಪುರಸಭೆ ಗಮನಕ್ಕೆ ತರುತ್ತಿದ್ದಾರೆ. ಸದ್ಯ ಕಳೇಬರಗಳ ವಿಲೇವಾರಿ ಸರಿಯಾಗಿ ನಡೆಯುತ್ತಿದೆ’ ಎಂದು ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸ್ಮಶಾನದ ಬಳಿಯ ಪುರಸಭೆಗೆ ಸೇರಿದ ಖಾಲಿ ಜಾಗದಲ್ಲಿ ಕಳೇಬರವನ್ನು ಸಮಾಧಿ ಮಾಡಲಾಗುತ್ತಿದೆ’ ಎಂದರು.

ಮಾಹಿತಿಯೇ ಇಲ್ಲ:

ಜಾನುವಾರುಗಳು ಸಾವಿಗೀಡಾದರೆ ಹೇಗೆ ವಿಲೇವಾರಿ ನಡೆಯುತ್ತದೆ ಎನ್ನುವ ಬಗ್ಗೆ ಸವದತ್ತಿ ಅಧಿಕಾರಿಗಳಲ್ಲಿ ಮಾಹಿತಿ ಇಲ್ಲ. ರಸ್ತೆ ಪಕ್ಕ, ಊರಾಚೆಯ ನಿರ್ಜನ ಪ್ರದೇಶದಲ್ಲಿ ಕಳೇಬರವನ್ನು ಬಿಸಾಡುವುದು ಮುಂದುವರಿದಿದೆ.

ಬೈಲಹೊಂಗಲ ಪಟ್ಟಣದಲ್ಲಿ ರಸ್ತೆ ಅಪಘಾತ, ಅನಾರೋಗ್ಯ, ವಯೋಸಹಜ ಸಾವು ಹೊಂದುವ ಪಶು, ಪಕ್ಷಿ, ಪ್ರಾಣಿಗಳ ಅಂತ್ಯಸಂಸ್ಕಾರಕ್ಕೆ ಸ್ಮಶಾನ ಭೂಮಿ ಇಲ್ಲ. ನಾಯಿ, ನರಿ, ಹಂದಿ, ತೋಳಗಳ ಕಳೇಬರವನ್ನು ರಸ್ತೆ ಬದಿಯಲ್ಲಿಯೇ ಕೆಲವರು ಮಣ್ಣು ಹಾಕಿ ಮುಚ್ಚಿದರೆ, ಕೆಲವರು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಇದರಿಂದ ಪರಿಸರ ಹಾಳಾಗಿ, ಜನರಿಗೆ ಕಿರಿಕಿರಿ ಉಂಟಾಗುತ್ತಿದೆ.

‘ಪ್ರಾಣಿಗಳಿಗೆ ಸ್ಮಶಾನದ ಜಾಗವಿಲ್ಲ. ಹೀಗಾಗಿ ರಸ್ತೆ ಬದಿಯಲ್ಲಿಯೇ ಕಳೇಬರ ಬಿಸಾಡುವುದನ್ನು ಕಾಣಬಹುದಾಗಿದೆ. ಮಾನವೀಯತೆ ಇದ್ದವರು ಮಣ್ಣು ಮುಚ್ಚಿ ಅಂತ್ಯಕ್ರಿಯೆ ನೆರವೇರಿಸಿರುತ್ತಾರೆ’ ಎಂದು ತಾಲ್ಲೂಕು ಪಶು ವೈದ್ಯಾಧಿಕಾರಿ ಎಸ್.ಆರ್. ಕೋಲ್ಹಾರ ಪ್ರತಿಕ್ರಿಯಿಸಿದರು.

ರಸ್ತೆ ಬದಿಯಲ್ಲೇ:

ಎಂ.ಕೆ. ಹುಬ್ಬಳ್ಳಿ ಭಾಗದಲ್ಲಿ, ವಯೋಸಹಜ, ಕಾಯಿಲೆ ಮೊದಲಾದ ಕಾರಣದಿಂದ ಸಾವಿಗೀಡಾದ ಜಾನುವಾರು ಅಂತ್ಯಸಂಸ್ಕಾರಕ್ಕೆ ರಸ್ತೆ ಬದಿಯೇ ಆಸರೆಯಾಗಿದೆ. ಪಟ್ಟಣದ ಹಳೇ ವೀರಾಪೂರ ರಸ್ತೆ ಪಕ್ಕದ ಹಿಂದೂ ರುದ್ರಭೂಮಿಗೆ ತೆರಳುವ ರಸ್ತೆಯ ಪಕ್ಕದಲ್ಲಿಯೇ ಪ್ರಾಣಿಗಳ ಕಳೇಬರ ಎಸೆಯಲಾಗುತ್ತಿದೆ. ಇದರಿಂದ ಈ ಪ್ರದೇಶವೆಲ್ಲ ದುರ್ನಾತದಿಂದ ಕೂಡಿದ್ದು, ವಾಕರಿಕೆ ತರಿಸುವ ಸ್ಥಿತಿ ಇರುತ್ತದೆ. ಆ ಮಾರ್ಗದಲ್ಲಿ ಓಡಾಡುವವರು ಮೂಗು ಮುಚ್ಚಿಕೊಂಡು ಹೋಗಬೇಕಾದ, ಕಿರಿಕಿರಿ ಅನುಭವಿಸಬೇಕಾಗಿದೆ. ಪಕ್ಕದಲ್ಲೇ ಇರುವ ಕೆರೆ ನೀರು ಕೂಡ ಮಲಿನವಾಗುತ್ತಿದೆ. ವಿಷ ಜಂತುಗಳ ಕಾಟದ ಜೊತೆಗೆ ಸಾಂಕ್ರಾಮಿಕ ಕಾಯಿಲೆಗಳ ಭೀತಿಯೂ ಸ್ಥಳೀಯರಿಗೆ ಎದುರಾಗಿದೆ.

‘ರೈತಾಪಿ ಕುಟುಂಬಗಳ ಸಂಖ್ಯೆ ಅಧಿಕ ಪ್ರಮಾಣದಲ್ಲಿರುವುದರಿಂದ ಜಾನುವಾರು ಸಂಖ್ಯೆಯೂ ಜಾಸ್ತಿ ಇದೆ. ಸಂಬಂಧಿಸಿದವರು ಜಾನುವಾರು ಅಂತ್ಯಕ್ರಿಯೆಗೆ ಸ್ಥಳಾವಕಾಶ ಕಲ್ಪಿಸಬೇಕು. ಎಲ್ಲೆಂದರಲ್ಲಿ ಎಸೆಯದಂತೆ ನಿಗಾ ವಹಿಸಬೇಕು’ ಎನ್ನುವುದು ಪ್ರಜ್ಞಾವಂತರ ಆಗ್ರಹವಾಗಿದೆ.

ರಾಯಬಾಗದಲ್ಲಿ ಪೌರಕಾರ್ಮಿಕರು ಕಳೇಬರಗಳನ್ನು ನಿರ್ಜನ ಪ್ರದೇಶಕ್ಕೆ ಒಯ್ದು ಮಣ್ಣಲ್ಲಿ ಹೂಳುತ್ತಾರೆ. ‘ಬಿಡಾಡಿ ದನ, ಬೀದಿ ನಾಯಿಗಳನ್ನು ಪೌರಕಾರ್ಮಿಕರು ಮತ್ತು ಸಾಕು ಪ್ರಾಣಿಗಳನ್ನು ಮಾಲೀಕರು ಹೂಳುತ್ತಾರೆ ಅಥವಾ ಪೌರಕಾರ್ಮಿಕರನ್ನು ಸಂಪರ್ಕಿಸಿ ವಿಲೇವಾರಿ ಮಾಡಿಸುತ್ತಾರೆ’ ಎಂದು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ರಾಮು ಆರ್. ರಾಠೋಡ ತಿಳಿಸಿದರು.

ನದಿ ತೀರಕ್ಕೆ ಎಸೆಯುತ್ತಾರೆ!

ಖಾನಾಪುರದಲ್ಲಿ ಪ್ರಾಣಿಗಳಿಗೆ ಪ್ರತ್ಯೇಕ ಸ್ಮಶಾನವಿಲ್ಲದ ಕಾರಣ ಕಳೇಬರಗಳನ್ನು ಎಸೆಯಲು ಮಲಪ್ರಭಾ ನದಿತೀರವನ್ನೇ ಬಳಸಲಾಗುತ್ತಿದೆ. ಶ್ರೀರಾಮ ಸೇನೆ ಮತ್ತು ವಿವಿಧ ಹಿಂದೂಪರ ಸಂಘಟನೆಗಳವರು ಪಟ್ಟಣ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಮೃತ ಆಕಳು, ಎತ್ತು ಮತ್ತು ಮಂಗಗಳ ಕಳೇಬರಗಳನ್ನು ಅಂತ್ಯಸಂಸ್ಕಾರ ನೆರವೆರಿಸುತ್ತಾರೆ. ಬೀದಿ ನಾಯಿ, ಬೆಕ್ಕು, ಎಮ್ಮೆ ಹಾಗೂ ಇತರ ಪ್ರಾಣಿ-ಪಕ್ಷಿಗಳ ಕಳೇಬರಗಳನ್ನು ರಸ್ತೆ ಪಕ್ಕ ಅಥವಾ ನದಿತೀರದಲ್ಲಿ ಎಸೆಯಲಾಗುತ್ತಿದೆ.

ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ವಿವಿಧ ಕಾರಣಗಳಿಂದ ಸಾವಿಗೀಡಾಗುವ ವನ್ಯಜೀವಿಗಳ ಅಂತ್ಯಸಂಸ್ಕಾರವನ್ನು ಅಚ್ಚುಕಟ್ಟಾಗಿ ಕೈಗೊಳ್ಳಲಾಗುತ್ತದೆ. ಮರಣೋತ್ತರ ಪರೀಕ್ಷೆ ಕೈಗೊಂಡು ಬಳಿಕ ನಿಯಮಾನುಸಾರ ವಿಲೇವಾರಿ ಮಾಡಲಾಗುತ್ತದೆ.

ಸತ್ತ ಪ್ರಾಣಿಗಳಿಗಿಲ್ಲ ‘ಸಂಸ್ಕಾರ’

ಚನ್ನಮ್ಮನ ಕಿತ್ತೂರು ಭಾಗದಲ್ಲಿ ರೈತರ ಮನೆಯಲ್ಲಿ ಸಾಕಲಾದ ಎತ್ತು, ಎಮ್ಮೆ, ಹಸು ಸತ್ತರೆ ಸಂಸ್ಕಾರ ನೀಡಿ ಹೊಲದಲ್ಲೇ ಹೂಳಲಾಗುತ್ತದೆ. ಕುದುರೆ, ನಾಯಿ, ಹಂದಿ, ಬೆಕ್ಕು ಸತ್ತರೆ ರಸ್ತೆ ಬದಿಯಲ್ಲೇ ಬಿಸಾಡುತ್ತಾರೆ. ಅಲ್ಲೇ ಕೊಳೆತು ನಾರುತ್ತಿರುತ್ತದೆ. ಡೊಂಬರಕೊಪ್ಪಕ್ಕೆ ತೆರಳುವ ಮಾರ್ಗದಲ್ಲಿ ಅರಿಸಿನ ಕೆರೆ ಬಳಿ ಆಗಾಗ ಕಳೇಬರಗಳಿಂದ ದುರ್ವಾಸನೆ ಇದ್ದೇ ಇರುತ್ತದೆ. ಇದರ ವಿರುದ್ಧ ಡೊಂಬರಕೊಪ್ಪದ ಜನರು ಅನೇಕ ಬಾರಿ ಪ್ರತಿಭಟಿಸಿದ್ದಾರೆ. ಸ್ಥಳೀಯ ಸಂಸ್ಥೆಗೆ ಮನವಿ ನೀಡಿದ್ದಾರೆ. ಆದರೆ, ರಸ್ತೆ ಬದಿಯ ತಗ್ಗು ಪ್ರದೇಶದಲ್ಲಿ ಕಳೇಬರ ಎಸೆಯುವುದು ನಿಂತಿಲ್ಲ ಎಂದು ದೂರುತ್ತಾರೆ.

ಚಿಕ್ಕೋಡಿ ತಾಲ್ಲೂಕಿನಲ್ಲಿ ರೈತಾಪಿ ಜನರು ತಮ್ಮ ಜಾನುವಾರು ಮೃತಪಟ್ಟರೆ ಹೊಲಗಳಲ್ಲೇ ಅಂತ್ಯಸಂಸ್ಕಾರ ಮಾಡುತ್ತಾರೆ. ಆದರೆ, ಬೀದಿ ನಾಯಿ, ಬಿಡಾಡಿ ದನಗಳು ಮೊದಲಾದವುಗಳ ಸಂಸ್ಕಾರಕ್ಕೆ ಜಾಗದ ವ್ಯವಸ್ಥೆ ಇಲ್ಲ.

‘ಪ್ರಾಣಿಗಳ ಸಂಸ್ಕಾರಕ್ಕಾಗಿ ಸ್ಮಶಾನ ಜಾಗದ ವ್ಯವಸ್ಥೆಗೆ ಸರ್ಕಾರದಿಂದ ಅವಕಾಶವಿಲ್ಲ. ರೈತರು ಜನರು ಸಾಕು ಪ್ರಾಣಿಗಳು ಮೃತಪಟ್ಟಾಗ ಅವುಗಳನ್ನು ಸಂಸ್ಕಾರ ಮಾಡುತ್ತಾರೆ. ಬಿಡಾಡಿ ದನಗಳು, ಬೀದಿ ನಾಯಿಗಳು ಸೇರಿದಂತೆ ಇತರ ಪ್ರಾಣಿಗಳು ಮೃತಪಟ್ಟರೆ ಪರಿಸರ ಮಾಲಿನ್ಯ ಉಂಟಾಗದಂತೆ ಆಯಾ ಸ್ಥಳೀಯ ಸಂಸ್ಥೆಗಳಿಂದ ಅಂತ್ಯಸಂಸ್ಕಾರ ವ್ಯವಸ್ಥೆ ಮಾಡಬಹುದಾಗಿದೆ' ಎನ್ನುತ್ತಾರೆ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಸದಾಶಿವ ಉಪ್ಪಾರ.

ಗೋಕಾಕ, ಹುಕ್ಕೇರಿ ತಾಲ್ಲೂಕಿನಲ್ಲಿ ಎತ್ತು, ಆಕಳು ಮೃತಪಟ್ಟರೆ ರೈತರು ತಾವು ಕೃಷಿ ಮಾಡುವ ಭೂಮಿಯಲ್ಲಿಯೆ ಅವುಗಳಿಗೆ ಪೂಜೆ ಸಲ್ಲಿಸಿ ಹೂಳುತ್ತಾರೆ. ಎಮ್ಮೆ, ಕೋಣ, ಆಡು, ಕುರಿ ಸತ್ತರೆ ಅವುಗಳನ್ನು ಹಳ್ಳದ ದಂಡೆಗೆ ಅಥವಾ ತಗ್ಗು ಪ್ರದೇಶದಲ್ಲಿ ಹಾಕುತ್ತಾರೆ.

***

ಸತ್ತ ಪ್ರಾಣಿಯಿಂದ ಗಬ್ಬು ವಾಸನೆ ಬರುತ್ತಿದ್ದರೆ ಜನ ಫೋನ್‌ ಮಾಡಿ ತಿಳಿಸುತ್ತಾರೆ. ಕೂಡಲೇ ಪುರಸಭೆ ಸಿಬ್ಬಂದಿ ಕಸದ ವಾಹನದೊಂದಿಗೆ ಸಿಬ್ಬಂದಿ ಕಳೇಬರವನ್ನು ತಂದು ವಿಲೇವಾರಿ ಮಾಡುತ್ತಾರೆ

- ಚಿದಾನಂದ ಮುಗಳಖೋಡ,ಹಿರಿಯ ಆರೋಗ್ಯ ನಿರೀಕ್ಷಕ, ಮೂಡಲಗಿ ಪುರಸಭೆ

***

ಖಾನಾಪುರದಲ್ಲಿ ಪ್ರಾಣಿಗಳು ಸಾವಿಗೀಡಾದರೆ ವಿಲೇವಾರಿಗೆ ಪ್ರತ್ಯೇಕ ಸ್ಮಶಾನವಿಲ್ಲ. ಈ ವಿಷಯವನ್ನು ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಪಟ್ಟಣ ಪಂಚಾಯ್ತಿಯು ಪ್ರಾಣಿ-ಪಕ್ಷಿಗಳ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಬೇಕು

- ಪಂಡಿತ ಓಗಲೆ,ಸಾಮಾಜಿಕ ಕಾರ್ಯಕರ್ತ, ಖಾನಾಪುರ

***

ಪ್ರಾಣಿಗಳ ಕಳೇಬರವನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ದುರ್ನಾತ ಹರಡಿ ರೋಗಕ್ಕೆ ಆಹ್ವಾನ ಕೊಟ್ಟಂತಾಗುತ್ತದೆ. ಆದಷ್ಟು ಬೇಗ ಸರ್ಕಾರ ಪ್ರಾಣಿಗಳಿಗೂ ಪ್ರತ್ಯೇಕ ಸ್ಮಶಾನ ಜಾಗ ನಿಗದಿಪಡಿಸಬೇಕು
ಸುಭಾಸ ನಾಯಿಕ

-ಪ್ರಗತಿಪರ ರೈತ, ಹುಕ್ಕೇರಿ

***

ರೈತರಿಗೆ ಜಾನುವಾರುಗಳ ಬಗ್ಗೆ ಪೂಜ್ಯ ಭಾವನೆ ಹೊಂದಿರುತ್ತಾರೆ ಮತ್ತು ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಿರುತ್ತಾರೆ. ಹೀಗಾಗಿ, ಹೊಲಗಳಲ್ಲೇ ಅಂತ್ಯಕ್ರಿಯೆ ನೆರವೇರಿಸುತ್ತಾರೆ. ಈ ಕುರಿತು ಇಲಾಖೆಗೆ ಯಾರೂ ಮಾಹಿತಿ ನೀಡುವುದಿಲ್ಲ

- ಡಾ.ಅಶೋಕ ಕೊಳ್ಳ,ಉಪ ನಿರ್ದೇಶಕರು, ಪಶುಸಂಗೋಪನಾ ಇಲಾಖೆ

***

ಬೆಳಗಾವಿ ನಗರದಲ್ಲಿ ಯಾವುದಾದರೂ ಪ್ರಾಣಿ ಸತ್ತಿರುವ ಮಾಹಿತಿ ಸಿಕ್ಕ ಕೂಡಲೇ ಸಿಬ್ಬಂದಿ ತಕ್ಷಣ ತೆರಳಿ ಕಳೇಬರವನ್ನು ಸಾಗಿಸಿ ವಿಲೇವಾರಿ ಮಾಡುತ್ತಾರೆ. ಕೆಲವೊಮ್ಮೆ ಸ್ಮಶಾನಗಳ ಒಂದು ಭಾಗದಲ್ಲಿ ಗುಂಡಿ ತೋಡಿ ಹೂಳಲಾಗುತ್ತದೆ

- ಕೆ.ಎಚ್. ಜಗದೀಶ್,ಆಯುಕ್ತರು, ಮಹಾನಗರ ಪಾಲಿಕೆ

***

(ಪ್ರಜಾವಾಣಿ ತಂಡ: ಸುಧಾಕರ ತಳವಾರ, ಪ್ರದೀಪ ಮೇಲಿನಮನಿ, ಬಾಲಶೇಖರ ಬಂದಿ, ಆನಂದ ಮನ್ನಿಕೇರಿ, ರಾಮೇಶ್ವರ ಕಲ್ಯಾಣಶೆಟ್ಟಿ, ಬಸವರಾಜ ಶಿರಸಂಗಿ, ಎಸ್. ವಿಭೂತಿಮಠ, ಪ್ರಸನ್ನ ಕುಲಕರ್ಣಿ, ರವಿ ಎಂ. ಹುಲಕುಂದ, ಎನ್.ಪಿ. ಕೊಣ್ಣೂರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.