ಚಿಕ್ಕೋಡಿ: ಭೀಕರ ಬರದಿಂದ ಕೃಷ್ಣಾ ಹಾಗೂ ಅದರ ಉಪನದಿಗಳಲ್ಲಿ ನೀರಿನ ಪ್ರಮಾಣ ಕುಸಿದಿದೆ. ನದಿ ದಡದಲ್ಲಿ ಎಲ್ಲಿ ನೋಡಿದರೂ ಸತ್ತ ಮೀನುಗಳ ರಾಶಿ ಕಾಣುತ್ತದೆ. ಬರದಿಂದ ಜಲಚರಗಳ ಮಾರಣಹೋಮವೇ ಆಗಿದೆ. ಮೀನುಗಾರಿಕೆ ನೆಚ್ಚಿಕೊಂಡ ನದಿ ತೀರದ ಗ್ರಾಮಸ್ಥರ ಬದುಕಿಗೂ ಬರೆ ಬಿದ್ದಿದೆ. ಇನ್ನೊಂದೆಡೆ ಮೀನಿನ ಆಹಾರ ಪ್ರಿಯರಿಗೆ ಕೊರತೆ ಉಂಟಾಗಿದೆ.
ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಹರಿಯುವ ಕೃಷ್ಣಾ ಮಳೆಗಾಲದಲ್ಲಿ ಸಮುದ್ರದಂತೆ ಕಂಡರೆ, ಈಗ ಒಡಲು ಬರಿದಾಗಿ ಮರುಭೂಮಿಯ ಸೆಲೆಯಂತೆ ಕಾಣುತ್ತಿದೆ. ಉಪನದಿಗಳಾದ ವೇದಗಂಗಾ, ದೂಧಗಂಗಾದಲ್ಲೂ ನೀರಿಲ್ಲದೆ ಪ್ರಾಣಿ, ಪಕ್ಷಿಗಳು, ಜಲಚರಗಳು ಪರದಾಡುವಂತಾಗಿದೆ.
ಪ್ರತಿಬಾರಿ ಅತಿ ಹೆಚ್ಚು ಮಳೆಯಾಗುತ್ತಿದ್ದ ಕಾರಣ ಮಹಾರಾಷ್ಟ್ರದ ಮೂರೂ ಅಣೆಕಟ್ಟೆಗಳಿಂದ ಕೃಷ್ಣಾ, ವೇದಗಂಗಾ, ದೂಧಗಂಗಾ ನದಿಗಳಿಗೆ ನೀರು ಹರಿಸಲಾಗುತ್ತಿತ್ತು. ಇದರಿಂದ ಬೇಸಿಗೆಯಲ್ಲೂ ನದಿಗಳು ತುಂಬಿ ಹರಿಯುತ್ತಿದ್ದವು. ಮಳೆಗಾಲ ಮಾತ್ರವಲ್ಲದೇ ಬೇಸಿಗೆಯಲ್ಲೂ ನಿರಂತರ ಮೀನುಗಾರಿಕೆ ನಡೆಯುತ್ತಿತ್ತು. ಇದರಿಂದ 800ಕ್ಕೂ ಹೆಚ್ಚು ಮೀನುಗಾರರ ಕುಟುಂಬಗಳ ಸಾವಿರಾರು ಮಂದಿ ಹಾಗೂ ಮತ್ಸ್ಯೋದ್ಯಮ ನಂಬಿಕೊಂಡ ಹಲವರಿಗೆ ಉದ್ಯೋಗ ಕೂಡ ಸಿಗುತ್ತಿತ್ತು.
ಆದರೆ, ಈ ಬಾರಿ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿಯೇ ಮಳೆ ಕೊರತೆ ಉಂಟಾಗಿದೆ. ದಕ್ಷಿಣ ಭಾಗದ ಎಲ್ಲ ಅಣೆಕಟ್ಟೆಗಳಲ್ಲೂ ಸಾಕಷ್ಟು ನೀರು ಇಲ್ಲ. ಇದರಿಂದ ಹೆಚ್ಚವರಿ ನೀರನ್ನು ಕರ್ನಾಟಕದತ್ತ ಹರಿಸಲು ಸಾಧ್ಯವಾಗಿಲ್ಲ. ಸಹಜವಾಗಿಯೇ ಜಿಲ್ಲೆಯಲ್ಲಿ ಕೂಡ ನದಿ ಒಡಲು ಒಣಗಿದೆ. ಕುಡಿಯುವ ಉದ್ದೇಶಕ್ಕೆ ನೀರು ಬಿಡುವಂತೆ ಈಗಾಗಲೇ ಕರ್ನಾಟಕದ ಅಧಿಕಾರಿಗಳು, ಜನಪ್ರತಿನಿಧಿಗಳು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಕೂಡ ಮಾಡಿದ್ದಾರೆ.
ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಖುದ್ದಾಗಿ ಮಹಾರಾಷ್ಟ್ರಕ್ಕೆ ಹೋಗಿ ಅಲ್ಲಿನ ನೀರಾವರಿ ಸಚಿವರಿಗೆ, ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಕೊಟ್ಟಿದ್ದಾರೆ. ಜಲಕ್ಷಾಮದ ಕಾರಣ ಕೃಷ್ಣಾ ತೀರದಲ್ಲಿ ಆಗುತ್ತಿರುವ ಅನಾಹುತಗಳ ಬಗ್ಗೆ ಮನವರಿಕೆ ಮಾಡಿದ್ದಾರೆ. ಆದರೆ, ಮಹಾರಾಷ್ಟ್ರದಿಂದ ಇದೂವರೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಇದರಿಂದ ಸದ್ಯಕ್ಕಂತೂ ನೀರಿನ ಸಮಸ್ಯೆ, ಕೃಷಿಕರ ಸಮಸ್ಯೆ, ಮೀನು ಕೃಷಿ ಮಾಡುವವರ ಸಮಸ್ಯೆ ನೀಗುವಂತೆ ಕಾಣುತ್ತಿಲ್ಲ.
ಈ ನದಿಗೆ ಜಿಲ್ಲೆಯಲ್ಲಿ 8 ಬ್ಯಾರೇಜ್‌ಗಳನ್ನು ನಿರ್ಮಿಸಲಾಗಿದೆ. ಎಲ್ಲ ಕಡೆ ಅಲ್ಪಸ್ವಲ್ಪ ಸಂಗ್ರಹವಿದೆ. ಇದನ್ನು ಕೂಡ ಕುಡಿಯುವ ಉದ್ದೇಶಕ್ಕೆ ಮಾತ್ರ ಉಳಿಸಿಕೊಳ್ಳಲಾಗಿದೆ. ಹಿನ್ನೀರಿನಲ್ಲಿ ಮೀನು ಹಿಡಿಯುವಷ್ಟು ನೀರು ಈಗ ಇಲ್ಲ. ಇದರಿಂದ ಮೀನುಗಾರಿಕೆ ಸಂಕಷ್ಟಕ್ಕೆ ಸಿಲುಕಿದೆ.
ಕುಸಿದ ಮೀನು ಉತ್ಪಾದನೆ: ‘ಚಿಕ್ಕೋಡಿ ತಾಲ್ಲೂಕಿನಲ್ಲೇ 800ಕ್ಕೂ ಹೆಚ್ಚು ಮೀನುಗಾರ ಕುಟುಂಬಗಳಿವೆ. ಎಲ್ಲರೂ ಅತಂತ್ರರಾಗಿದ್ದಾರೆ. ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಗ್ರಾಮದಲ್ಲಿ ಪ್ರತಿ ವರ್ಷ ಬೇಸಿಗೆಯಲ್ಲಿ ಪ್ರತಿ ದಿನ 5 ಕ್ವಿಂಟಲ್‌ಗೂ ಹೆಚ್ಚು ಮೀನು ಸಾಗಿಸಲಾಗುತ್ತಿತ್ತು. ಸದ್ಯ 1 ಕ್ವಿಂಟಲ್ ಕೂಡ ಸಾಧ್ಯವಾಗುತ್ತಿಲ್ಲ’ ಎಂದು ಮೀನುಗಾರರು ‘ಪ್ರಜಾವಾಣಿ’ಗೆ ತಿಳಿಸಿದರು.
ಮೀನಿಗಾರರ ಕುಟುಂಬಗಳು ಪ್ರತಿ ದಿನ ಸಾವಿರಾರು ಕ್ವಿಂಟಲ್ ಮೀನುಗಳನ್ನು ನೆರೆಯ ಮಹಾರಾಷ್ಟ್ರ ಹಾಗೂ ಕರ್ನಾಟಕದ ವಿವಿಧೆಡೆ ಸರಬರಾಜು ಮಾಡುತ್ತಿದ್ದವು. ಆದರೆ, ಈ ಬಾರಿ ಎಲ್ಲವೂ ನೆಲಕಚ್ಚಿದೆ.
ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಏಳು ಮೀನುಗಾರಿಕೆ ಸಹಕಾರ ಸಂಘಗಳಿವೆ. ಪ್ರತಿ ಸಂಘದಲ್ಲಿ ನೂರಾರು ಸದಸ್ಯರು ಇದ್ದಾರೆ. ಇಲ್ಲಿನ ಮೀನುಗಳಿಗೆ ಅಂಕಲಿ, ಚಿಕ್ಕೋಡಿ, ನಿಪ್ಪಾಣಿ, ಸಂಕೇಶ್ವರ, ಬೆಳಗಾವಿ ಮತ್ತು ಮಹಾರಾಷ್ಟ್ರದ ಮೀರಜ್, ಸಾಂಗ್ಲಿ, ಕೊಲ್ಹಾಪುರ ಮುಂತಾದ ಕಡೆ ಬೇಡಿಕೆ ಇದೆ. ಹೋಟೆಲ್, ದಾಬಾ, ರೆಸ್ಟೋರೆಂಟ್‌ಗಳಲ್ಲಿ ಮೀನಿನ ಊಟ ಅಪರೂಪವಾಗಿದೆ.
ಮೀನು ಬಿತ್ತನೆ ಮಾಡಿಲ್ಲ
2019ರಲ್ಲಿ ಕೃಷ್ಣಾ ನದಿಗೆ ಆಘಾತಕಾರಿ ಪ್ರವಾಹ ಬಂದ ಬಳಿಕ ಮೀನು ಮರಿಗಳ ಬಿತ್ತನೆ ಮಾಡಿಲ್ಲ. ಬಿತ್ತನೆ ಮಾಡದೇ ಇರುವುದಕ್ಕೆ ಕಾರಣ ಏನು ಎಂದೂ ಗೊತ್ತಾಗಿಲ್ಲ. ಮೀನುಗಳ ಸಂಖ್ಯೆ ಗಣನೀಯವಾಗಿ ಕುಸಿಯಲು ಇದು ಕೂಡ ಕಾರಣ.
ಕಟ್ಲಾ, ರೋಹು, ಕಾಮನ್ ಕಾರ್ಪ (ಗೌರಿ ಮೀನು), ಬಾಳೆ ಮೀನು, ಮರಳು ಮೀನು, ಸಣ್ಣ ಮೀನು, ಲವಣಿ, ಕಾಟವೆ, ಹಾವು ಮೀನುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತಿದ್ದವು. ಈ ಬಾರಿ ಎಲ್ಲವೂ ಸಮಾಧಿಯಾಗಿವೆ.
ಮೀನು ಮರಿ ಉತ್ಪಾದನೆ ಮಾಡಲು ಅಧಿಕಾರಿಗಳು ಇನ್ನು ಮುಂದಾದರೂ ಮೀನ ಮೇಷ ಎಣಿಸಬಾರದು ಎಂಬುದು ಮೀನುಗಾರರ ಅಂಬೋಣ.
ಎಲ್ಲೆಲ್ಲಿ ಇವೆ ಸಂಘಗಳು
ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ ಅಂಕಲಿಯಲ್ಲಿ 1, ರಾಯಬಾಗ ತಾಲ್ಲೂಕಿನ ಬಾವನ ಸೌದತ್ತಿಯಲ್ಲಿ 2, ಕುಡಚಿಯಲ್ಲಿ 1, ಅಥಣಿ ತಾಲ್ಲೂಕಿನ ಹಲ್ಯಾಳದಲ್ಲಿ 1, ಕಾಗವಾಡ ತಾಲ್ಲೂಕಿನ ಉಗಾರದಲ್ಲಿ 1, ನಿಪ್ಪಾಣಿ ತಾಲ್ಲೂಕಿನ ಅಕ್ಕೋಳದಲ್ಲಿ 1 ಸೇರಿದಂತೆ ಒಟ್ಟು 7 ಮೀನುಗಾರಿಕೆ ಸಹಕಾರಿ ಸಂಘಗಳು ಇವೆ.
ಈ ಸಂಘಗಳ ಅಡಿಯಲ್ಲಿ 800ಕ್ಕೂ ಹೆಚ್ಚು ಕುಟುಂಬಗಳು ಮೀನುಗಾರಿಕೆ ಮಾಡುತ್ತಿದ್ದಾರೆ. ನದಿ, ಕೆರೆಗಳು ಬತ್ತಿದ್ದರಿಂದ ಮೀನುಗಾರಿಕೆಯನ್ನೇ ನಂಬಿದ ಕುಟುಂಬಗಳ ಪರಿಸ್ಥಿತಿ ದೇವರಿಗೇ ಪ್ರೀತಿ ಎನ್ನುವಂತಾಗಿದೆ. ಕೃಷ್ಣೆ ಮಡಿಲಿನ ಈ ಮಕ್ಕಳ ಬದುಕು ಈಗ ‘ಮೀನನ್ನು ನೀರಿನಿಂದ ಹೊರಗೆಸೆದಂತೆ’ ಆಗಿದೆ.
ಮಳೆಗಾಲದಲ್ಲಿ ಮಹಾಪೂರದಿಂದ, ಬೇಸಿಗೆಯಲ್ಲಿ ಬರಗಾಲದಿಂದ ಸಂಕಷ್ಟ ಎದುರಾಗುತ್ತದೆ. ಪ್ರತಿ ವರ್ಷ ನಮ್ಮ ಬದುಕು ಗರಗಸಕ್ಕೆ ಸಿಕ್ಕಂತಹ ಅನುಭವವಾಗುತ್ತದೆಸಂಜೀವ ಕಾಂಬಳೆಕೃಷ್ಣಾ ತೀರದ ನಿವಾಸಿ, ದರೂರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.