ADVERTISEMENT

ಸಿ.ಎಂ ಕುರ್ಚಿಗೆ ಯತ್ನ ನಡೆಸಿದ್ದರೆ ತಪ್ಪೇನಿಲ್ಲ: ಸಚಿವ ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 8:31 IST
Last Updated 8 ಅಕ್ಟೋಬರ್ 2024, 8:31 IST
<div class="paragraphs"><p>ಸಚಿವ ಕೃಷ್ಣ ಬೈರೇಗೌಡ</p></div>

ಸಚಿವ ಕೃಷ್ಣ ಬೈರೇಗೌಡ

   

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ‘ಕಾಂಗ್ರೆಸ್‌ನಲ್ಲಿ ಬೇರೆ ಯಾರಾದರೂ ಮುಖ್ಯಮಂತ್ರಿ ಆಗುವ ಪ್ರಯತ್ನ ನಡೆಸಿದ್ದರೆ ನಡೆಸಲಿ. ಆದರೆ, ಎಲ್ಲ ಶಾಸಕರು ಹಾಗೂ ಹೈಕಮಾಂಡ್‌ ನಾಯಕರು ಸಿದ್ದರಾಮಯ್ಯ ಅವರ ಜತೆಗಿದ್ದೇವೆ. ಪಕ್ಷದ ವೇದಿಕೆಯಲ್ಲಿ ಮುಖ್ಯಮಂತ್ರಿ ಬದಲಾವಣೆಯ ಯಾವುದೇ ಚರ್ಚೆ ಆಗಿಲ್ಲ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

‘ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ, ಕೆ.ಸಿ.ವೇಣುಗೋಪಾಲ ಅವರೆಲ್ಲ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದಾರೆ. ಹಾಗಾಗಿ, ನಾಯಕರನ್ನು ಭೇಟಿ ಮಾಡಿ ಬರುವ ಸಚಿವರ ಬಗ್ಗೆ ತಪ್ಪು ಕಲ್ಪನೆ ಬೇಡ. ಒಂದುವೇಳೆ ಅವರು ಮುಖ್ಯಮಂತ್ರಿ ಆಗುವ ಉದ್ದೇಶದಿಂದಲೇ ಭೇಟಿ ನೀಡಿದ್ದರೂ ಅದರಲ್ಲಿ ತಪ್ಪೇನೂ ಇಲ್ಲ. ಅವರವರ ಇಷ್ಟ’ ಎಂದು ಪಟ್ಟಣದಲ್ಲಿ ಮಂಗಳವಾರ ಮಾಧ್ಯಮದವರಿಗೆ ತಿಳಿಸಿದರು.

ADVERTISEMENT

‘ನಾನು ಒಳ್ಳೆಯ ಕೆಲಸ ಮಾಡುತ್ತೇನೆ ಎಂಬ ಕಾರಣಕ್ಕೆ ಜನ ಆರು ಬಾರಿ ಗೆಲ್ಲಿಸಿದ್ದಾರೆ. ಮೂರು ಬಾರಿ ಸಚಿವನಾಗಿ ವಿವಿಧ ಖಾತೆ ನಿರ್ವಹಿಸಿದ್ದೇನೆ. ಈಗಲೂ ನನಗೆ ಕೈತುಂಬ ಕೆಲಸವಿದೆ. 24 ಗಂಟೆ ಮಾತ್ರವಲ್ಲ; ದಿನಕ್ಕೆ 48 ಗಂಟೆ ಸಿಕ್ಕರೂ ಸಾಲುವುದಿಲ್ಲ. ಒಳ್ಳೆಯ ಕೆಲಸ ಮಾಡಿದ ಮಾತ್ರಕ್ಕೆ ನಾನೂ ಮುಖ್ಯಮಂತ್ರಿ ಕುರ್ಚಿ ಗಿಟ್ಟಿಸಿಕೊಳ್ಳಲು ಹವಣಿಸುತ್ತಿದ್ದೇನೆ ಎಂಬುದು ಸರಿಯಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹೊಟ್ಟೆಪಾಡಿನ ವಿಷಯಕ್ಕೆ ಜಯ:

‘ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಬಂಡವಾಳಶಾಹಿ ಪರವಾದ ಆಡಳಿತವನ್ನು ಜನ ತಿರಸ್ಕರಿಸುತ್ತಿದ್ದಾರೆ. ಹರಿಯಾಣ ಹಾಗೂ ಜಮ್ಮು ರಾಜ್ಯಗಳಲ್ಲಿ ಕಾಂಗ್ರೆಸ್‌ ನೇತೃತ್ವದ ಒಕ್ಕೂಟಕ್ಕೆ ಗೆಲುವು ಸಿಕ್ಕಿದೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್‌ ಗಾಂಧಿ ಅವರ ಜನಪರ ಹೋರಾಟಗಳ ಫಲವಿದು. ಇದೇ ಗಾಳಿ ಶೀಘ್ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲೂ ಬೀಸಲಿದೆ’ ಎಂದೂ ಹೇಳಿದರು.

‘ದೇಶದ ಎಲ್ಲೆಡೆ ಬಿಜೆಪಿ ಶ್ರೀಮಂತರ ಪರವಾಗಿ ಕೆಲಸ ಮಾಡುತ್ತ ಬಂದಿದೆ. ಈಗ ಜನ ಭಾವನಾತ್ಮಕ ವಿಷಯಗಳಿಂದ ಹೊರಬಂದಿದ್ದಾರೆ. ಹೊಟ್ಟೆಪಾಡಿನ ವಿಷಯಗಳಿಗೆ ಮನ್ನಣೆ ಕೊಡುತ್ತಿದ್ದಾರೆ. ಎಲ್ಲಿಯರೆಗೆ ಹೊಟ್ಟೆಪಾಡಿನ ವಿಷಯವೇ ಪ್ರಧಾನ ಆಗಿರುತ್ತದೆಯೋ ಅಲ್ಲಿಯವರೆಗೆ ಪ್ರಜಾಪ್ರಭುತ್ವಕ್ಕೆ ಗೆಲುವಾಗುತ್ತದೆ’ ಎಂದೂ ಕೃಷ್ಣ ಬೈರೇಗೌಡ ‍ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.