ADVERTISEMENT

ಶಾಲೆಗೆ ‘ಹೊಸ’ ರೂಪ ಕೊಟ್ಟ ಹಳೆಯ ವಿದ್ಯಾರ್ಥಿಗಳು

ಗಮನಸೆಳೆಯುತ್ತಿರುವ ಬಾಣಂತಿಕೋಡಿ

ಸುಧಾಕರ ಎಸ್.ತಳವಾರ, ಬೆಂಗಳೂರು
Published 18 ಮಾರ್ಚ್ 2021, 19:30 IST
Last Updated 18 ಮಾರ್ಚ್ 2021, 19:30 IST
   

ಚಿಕ್ಕೋಡಿ (ಬೆಳಗಾವಿ): ಅದೊಂದು ತೋಟದ ಜನವಸತಿಯಲ್ಲಿರುವ ಸರ್ಕಾರಿ ಶಾಲೆ. ಕಾಂಪೌಂಡ್ ಕೂಡ ಇಲ್ಲ. ಆದರೂ, ಶಾಲೆ ಮುಂದೆ ಹಸಿರು ಸಿರಿ ಸೃಷ್ಟಿಯಾಗಿದೆ. ಸರ್ಕಾರದ ಸೌಲಭ್ಯಗಳೊಂದಿಗೆ ಸಮುದಾಯದ ಸಹಭಾಗಿತ್ವದೊಂದಿಗೆ ಹಲವು ಸೌಕರ್ಯಗಳನ್ನು ಹೊಂದಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಮಾದರಿ ಶಾಲೆಯಾಗಿ ರೂಪಗೊಂಡು ಗಮನಸೆಳೆದಿದೆ.

ತಾಲ್ಲೂಕಿನ ಕೇರೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಾಣಂತಿಕೋಡಿಯಲ್ಲಿರುವ ಕನ್ನಡ ಹಿರಿಯ (ಉನ್ನತೀಕರಿಸಿದ) ಸರ್ಕಾರಿ ಪ್ರಾಥಮಿಕ ಶಾಲೆಯು ಹಳೆಯ ವಿದ್ಯಾರ್ಥಿಗಳು ಮತ್ತು ಪಾಲಕರ ಸಹಾಯ, ಸರ್ಕಾರದ ಸೌಕರ್ಯಗಳು ಮತ್ತು ಶಿಕ್ಷಕ ವೃಂದದ ಸಮರ್ಪಣಾ ಮನೋಭಾವದ ಸೇವೆಯೊಂದಿಗೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದೆ.

1977ರಲ್ಲಿ ಸ್ಥಾಪನೆಯಾದ ಈ ಶಾಲೆಗೆ ಸಿದ್ದಪ್ಪ ಲಕ್ಷ್ಮಣ ಗುಡಸೆ ಭೂದಾನ ನೀಡಿದ್ದಾರೆ. ಸದ್ಯ 1ರಿಂದ 8ನೇ ತರಗತಿವರೆಗೆ 292 ಮಕ್ಕಳು ದಾಖಲಾಗಿದ್ದಾರೆ. ಒಟ್ಟು 10 ಜನ ಶಿಕ್ಷಕರ ಮಂಜೂರಾತಿ ಇದ್ದು, 4 ಹುದ್ದೆಗಳು ಖಾಲಿ ಇವೆ. ಶಾಲೆಗೆ ಬಾಲಕ-ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇದೆ.

ADVERTISEMENT

ಹಳೆಯ ವಿದ್ಯಾರ್ಥಿಗಳ ದೇಣಿಗೆಯಿಂದ, ಶಾಲೆಯ ಗೋಡೆಗಳ ಮೇಲೆ ಮಕ್ಕಳ ಕಲಿಕೆಗೆ ಪೂರಕವಾದ ಚಿತ್ತಾರಗಳನ್ನು ಚಿತ್ರಿಸಲಾಗಿದೆ. ಆಟದ ಮೈದಾನದ ಕೊರತೆ ಕಾಡುತ್ತಿದೆ. ಆದರೂ, ವಿದ್ಯಾರ್ಥಿಗಳು ಕ್ರೀಡಾ ಸ್ಪರ್ಧೆಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಶಾಲೆಯ ಶಿಕ್ಷಕ ಎಚ್.ಡಿ. ದರಗಾದ ಅವರಿಗೆ 2020-21ನೇ ಸಾಲಿನ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.

₹ 60 ಸಾವಿರ ವೆಚ್ಚದಲ್ಲಿ ಪಾಲಕರು ಸೋಲಾರ್ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ. ಅಲ್ಲದೇ, ಮಹಾದೇವ ಯಾದವ ಪ್ರೊಜೆಕ್ಟರ್ ಸ್ಕ್ರೀನ್, ದುಂಡಯ್ಯ ಹಿರೇಮಠ ಶಾಲಾ ಆವರಣಕ್ಕೆ ಬಣ್ಣ, ಪ್ರಕಾಶ ಗೋಪಾಳಗೋಳ, ಕುಮಾರ ಹುದ್ದಾರ, ಗಣಪತಿ ಜಾಧವ ಅವರು ತಲಾ 100 ಊಟದ ತಟ್ಟೆಗಳನ್ನು, ರುದ್ರಗೌಡ ಪಾಟೀಲ 100 ಗ್ಲಾಸ್‍ಗಳನ್ನು, ಸಿದ್ದಪ್ಪ ಗಾವಡೆ ಗ್ಲಾಸ್ ಡಯಾಸ್, ಪ್ರಕಾಶ ಹಿರೇಮಠ ಟಿವಿ, ಲಕ್ಷ್ಮಣ ಕುರಾಡೆ ಟ್ರ್ಯಾಲಿ ಸೌಂಡ್, ನಾರಾಯಣ ಕರನೂರೆ ಕ್ರೀಡಾ ಸಾಮಗ್ರಿಗಳನ್ನು, ಬಸವರಾಜ ಕುರಬೆಟ್ ಮತ್ತು ಗಿರೀಶ ಖಿನ್ನವರ ಕಂಪ್ಯೂಟರ್‌ಗಳನ್ನು ಕೊಡುಗೆ ನೀಡಿದ್ದಾರೆ.

ಡಸ್ಟ್ ಬಿನ್‌ಗಳು, ಕೊಠಡಿಗಳಲ್ಲಿ ಮ್ಯಾಟ್ ಅಳವಡಿಕೆ, ಗ್ರಂಥಾಲಯಕ್ಕೆ ಪುಸ್ತಕಗಳು, ಝರಾಕ್ಸ್ ಯಂತ್ರ, ಡೆಸ್ಟ್‌ಗಳಿಗೆ ಬಣ್ಣ, ಪ್ಲೇಟ್ ಸ್ಟ್ಯಾಂಡ್, ಮಹಾತ್ಮರ ಫೋಟೊಗಳು, ಶೂ ಸ್ಟ್ಯಾಂಡ್ ಮೊದಲಾದವುಗಳನ್ನು ಹಳೆಯ ವಿದ್ಯಾರ್ಥಿಗಳು ₹ 4 ಲಕ್ಷ ವಿನಿಯೋಗಿಸಿ ಮಾಡಿಸಿಕೊಟ್ಟಿದ್ದಾರೆ. ಜನರೇ ಕೊಠಡಿಯೊಂದನ್ನು ನಿರ್ಮಿಸಿಕೊಟ್ಟಿದ್ದಾರೆ ಎಂದು ಮುಖ್ಯ ಶಿಕ್ಷಕ ಎನ್.ವಿ. ಬಡಿಗೇರ ಹೇಳುತ್ತಾರೆ.

***

ಸಮುದಾಯದ ಸಹಕಾರ ಮತ್ತು ಸರ್ಕಾರದ ಸೌಲಭ್ಯಗಳೊಂದಿಗೆ ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗಿದೆ. ಮಕ್ಕಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಪ್ರಗತಿ ಸಾಧಿಸುತ್ತಿದ್ದಾರೆ.


-ಎನ್.ವಿ. ಬಡಿಗೇರ ,ಮುಖ್ಯ ಶಿಕ್ಷಕ

***

ಪಾಲಕರು ಮತ್ತು ಹಳೆಯ ವಿದ್ಯಾರ್ಥಿಗಳ ದೇಣಿಗೆಯಿಂದಾಗಿ ಶಾಲೆಯು ಹಲವು ಸೌಕರ್ಯಗಳನ್ನು ಕಂಡಿದೆ. ಇದರಿಂದ ಮಕ್ಕಳ ಕಲಿಕೆಗೂ ಸಹಕಾರಿಯಾಗಿದೆ. ಶಿಕ್ಷಕ ಸೇವಾ ಮನೋಭಾವವೂ ಪ್ರಗತಿಗೆ ಪೂರಕವಾಗಿದೆ.


-ಲಕ್ಕಪ್ಪ ಗುಡಸೆ ,ಅಧ್ಯಕ್ಷರು, ಎಸ್‍ಡಿಎಂಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.