ADVERTISEMENT

ಬೆಳಗಾವಿ | ಸಿದ್ದರಾಮಯ್ಯಗೆ ಇದು ಕೊನೇ ಅಧಿವೇಶನ: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 14:24 IST
Last Updated 21 ನವೆಂಬರ್ 2024, 14:24 IST
ವಿಜಯೇಂದ್ರ 
ವಿಜಯೇಂದ್ರ    

ಬೆಳಗಾವಿ: ‘ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 9ರಿಂದ ಆರಂಭವಾಗಲಿರುವ ವಿಧಾನ ಮಂಡಲ ಚಳಿಗಾಲದ ಅಧಿವೇಶನವು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪಾಲ್ಗೊಳ್ಳಲಿರುವ ಕೊನೆಯ ಅಧಿವೇಶನವಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಷ್ಟುದಿನ ತಾವು ಭ್ರಷ್ಟರಲ್ಲ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಿದ್ದರು. ಆದರೆ, ಈಗ ಅವರ ಇಡೀ ಕುಟುಂಬವೇ ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಮುಳುಗಿದೆ’ ಎಂದು ದೂರಿದರು.

‘ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಮೊದಲ ಆರೋಪಿಯಾಗಿರುವ ಅವರು ರಾಜೀನಾಮೆ ನೀಡಬೇಕಿತ್ತು. ಆದರೆ, ಹಟಮಾರಿ. ಮುಖ್ಯಮಂತ್ರಿ ಸ್ಥಾನದ ಕೊನೆಯ ದಿನಗಳನ್ನು ಅವರು ಎಣಿಸುತ್ತಿದ್ದಾರೆ. ಆ ಸ್ಥಾನವನ್ನು ಕಾಂಗ್ರೆಸ್ ಹರಾಜಿಗೆ ಇಟ್ಟಿದೆ’ ಎಂದು ದೂರಿದರು.

ADVERTISEMENT

‘ಕಾಂಗ್ರೆಸ್ ಶಾಸಕರೂ ಮುಖ್ಯಮಂತ್ರಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಆದರೆ, ನಾವು ‘ಆಪರೇಷನ್ ಕಮಲ’ ಮಾಡುತ್ತಿದ್ದೇವೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸುತ್ತಿದ್ದಾರೆ. ಭ್ರಷ್ಟಾಚಾರದಿಂದ ರಾಜ್ಯ ಸಂಕಷ್ಟಕ್ಕೆ ಸಿಲುಕಿದ್ದು, ಅಭಿವೃದ್ಧಿಗೆ ಹಣವಿಲ್ಲ’ ಎಂದರು.

‘ಕಾಂಗ್ರೆಸ್ ಸರ್ಕಾರವು ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಗಳನ್ನು ಕಡೆಗಣಿಸಿದೆ. ಅಭಿವೃದ್ಧಿ ಸ್ಥಗಿತಗೊಂಡಿದೆ. ಆಡಳಿತಾರೂಢ ಕಾಂಗ್ರೆಸ್‌ನ ಶಾಸಕರು, ಅದರಲ್ಲೂ ಮೊದಲ ಬಾರಿ ಗೆದ್ದವರು ನಿಸ್ಸಹಾಯಕರಾಗಿದ್ದಾರೆ, ಆಕ್ರೋಶ ಭರಿತವಾಗಿದ್ದಾರೆ. ಅಭಿವೃದ್ಧಿಗೆ ಹಣ ಬಿಡುಗಡೆಯಾಗದ ಕಾರಣ ಕಾಮಗಾರಿ ಅನುಷ್ಠಾನಕ್ಕೆ ತೊಂದರೆಯಾಗಿದೆ’ ಎಂದು ಹೇಳಿದರು.

‘ವಕ್ಫ್ ಮಂಡಳಿಗೆ ರೈತರು ಮತ್ತು ಮಠ-ಮಾನ್ಯಗಳು ಗುರಿಯಾಗಿವೆ. ಬಿಪಿಎಲ್ ಪಡಿತರ ಚೀಟಿ ಹಿಂದಕ್ಕೆ ಪಡೆಯುತ್ತಿರುವುದು ಬಡವರ ಮೇಲೆ ಪರಿಣಾಮ ಬೀರಿದೆ. ಹಾದಿ ತಪ್ಪಿದ ಸರ್ಕಾರವನ್ನು ಸರಿದಾರಿಗೆ ತರಬೇಕಿದೆ. ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಭೆ ನಡೆಸುತ್ತೇವೆ’ ಎಂದರು.

‘ರಾಜ್ಯದ ಮೂರು ವಿಧಾನಸಭೆ ಕ್ಷೇತ್ರಗಳಲ್ಲೂ ಬಿಜೆಪಿ, ಜೆಡಿಎಸ್‌ ಅಭ್ಯರ್ಥಿಗಳು ಗೆಲ್ಲಲಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಚಳಿಗಾಲದ ಅಧಿವೇಶನಕ್ಕೆ ಹೊಸ ಮುಖ್ಯಮಂತ್ರಿಯನ್ನು ಸ್ವಾಗತಿಸಲಾಗುವುದು’ ಎಂದು ವಿಜಯೇಂದ್ರ ಅವರು ಅಕ್ಟೋಬರ್‌ 11ರಂದು ಹೇಳಿಕೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.