ಬೆಳಗಾವಿ: ‘ಇತಿಹಾಸ ಬಲ್ಲವರು ಇತಿಹಾಸ ನಿರ್ಮಿಸಲಬಲ್ಲರು ಎಂಬ ನುಡಿಯನ್ನು ಯುವ ಜನಾಂಗ ಅರಿಯಬೇಕು. ನಮ್ಮ ನಾಡಿನ ಕೆಲವು ಸಂಸ್ಥಾನಿಕರು ಸಾಂಸ್ಕೃತಿಕ ವಲಯಕ್ಕೆ ಭವ್ಯ ಕೊಡುಗೆ ನೀಡಿದ್ದಾರೆ. ಅವುಗಳನ್ನು ಹೆಕ್ಕಿ ತೆಗೆಯಬೇಕು’ ಎಂದು ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ಕರೆ ನೀಡಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಣಿ ಚನ್ನಮ್ಮ ಅಧ್ಯಯನ ಪೀಠ ಹಾಗೂ ಕೆಎಲ್‍ಇ ಸಂಸ್ಥೆಯ ಲಿಂಗರಾಜ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ‘ಬೆಳಗಾವಿ ಜಿಲ್ಲೆಯ ಸಂಸ್ಥಾನಗಳು’ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ನಗರದಲ್ಲಿ ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶದಲ್ಲಿ ನೂರಾರು ಸಂಸ್ಥಾನಗಳು ಆಳ್ವಿಕೆ ಮಾಡಿ ಹೋಗಿವೆ. ಅದರಲ್ಲಿ ಕೆಲವೇ ಕೆಲವು ಸಂಸ್ಥಾನಗಳು ಇಂದಿಗೂ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಿವೆ. ಜಿಲ್ಲೆಯ ಸಿರಸಂಗಿ ಸಂಸ್ಥಾನ, ವಂಟಮುರಿ, ಕಿತ್ತೂರು, ಬೆಳವಡಿ, ಚಚಡಿ ದೇಸಾಯಿ ಮನೆತನಗಳು ನೀಡಿರುವ ಕೊಡುಗೆ ಅನುಪಮ ಹಾಗೂ ಅವಿಸ್ಮರಣೀಯ. ಧಾರ್ಮಿಕವಾಗಿ ಹಾಗೂ ಶೈಕ್ಷಣಿಕವಾಗಿ ಅವರೆಲ್ಲ ನೀಡಿರುವ ಸೇವೆ ದಾಖಲಾರ್ಹ’ ಎಂದರು.
‘ಮಕ್ಕಳಿಲ್ಲದ ಲಿಂಗರಾಜರು ಸಮಾಜದ ಮಕ್ಕಳನ್ನೇ ತಮ್ಮ ಮಕ್ಕಳೆಂದು ತಿಳಿದು ತಮ್ಮ ಸರ್ವಸ್ವವನ್ನೆಲ್ಲ ಧಾರೆ ಎರೆದಿದ್ದಾರೆ. ಅವರು ನಿರ್ಮಿಸಿದ ಶಿರಸಂಗಿ ನವಲಗುಂದ ಟ್ರಸ್ಟ್ ಲಕ್ಷಾಂತರ ಮಕ್ಕಳಿಗೆ ಶಿಷ್ಯವೇತನ ನೀಡಿ ಅವರ ಬದುಕಿಗೆ ಬೆಳಕಾಗಿದೆ. ಲಖಮಗೌಡರು ಜಿಲ್ಲೆಯ ಹಲವಾರು ಶಿಕ್ಷಣ ಸಂಸ್ಥೆಗಳಿಗೆ, ಸಂಘಗಳಿಗೆ ನೀಡುವ ದಾನ ಊಹೆಗೂ ನಿಲುಕದ್ದು. ಅಂತೆಯೇ ಇವೆರಲ್ಲ ದಾನವೀರರೆಂಬ ಅಭಿದಾನಕ್ಕೆ ಪಾತ್ರರಾದರು’ ಎಂದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಎಚ್.ವೈ. ಕಾಂಬಳೆ ಮಾತನಾಡಿ, ‘ಶಿಕ್ಷಕರು ಹೆಚ್ಚು ಅಧ್ಯಯನ ನಿರತರಾಗಬೇಕಾಗಿದೆ. ನಾವು ಹೆಚ್ಚು ತಿಳಿದುಕೊಂಡರೆ ವಿದ್ಯಾರ್ಥಿಗಳನ್ನು ನಿರ್ಮಿಸಲು ಸಾಧ್ಯ. ಇಂದಿನ ಬಹುಶಿಕ್ಷಕರು ಅಧ್ಯಯನ ಅಧ್ಯಾಪನಗಳಿಂದ ದೂರ ಸರಿಯುತ್ತಿರುವುದು ಖೇದಕರ’ ಎಂದರು.
ರಾಣಿ ಚನ್ನಮ್ಮ ಅಧ್ಯಯನ ಪೀಠದ ನಿರ್ದೇಶಕ ಪ್ರೊ.ಎಸ್.ಎಂ. ಗಂಗಾಧರಯ್ಯ ಮಾತನಾಡಿ, ‘ಜಿಲ್ಲೆಯ ದೇಸಗತಿಗಳು ಹಾಗೂ ಸಂಸ್ಥಾನಗಳು ಕುರಿತು ವೇದಿಕೆಯ ಮೂಲಕ ಚಿಂತನೆಗಳು ಜರುಗಬೇಕಾಗಿದ್ದು ಇಂದಿನ ಅಗತ್ಯ. ಒಂದೊಂದು ಸಂಸ್ಥಾನಗಳು ಜಿಲ್ಲೆಯಲ್ಲಿ ದಾಖಲಾರ್ಹವಾದ ಕೊಡುಗೆ ನೀಡಿವೆ’ ಎಂದರು.
ಪ್ರಾಚಾರ್ಯ ಡಾ.ಎಚ್.ಎಸ್. ಮೇಲಿನಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ರೇಣುಕಾ ಕಠಾರಿ ನಿರೂಪಿಸಿದರು. ಡಾ.ಎಚ್.ಎಂ. ಚನ್ನಪ್ಪಗೋಳ ವಂದಿಸಿದರು. ವೇದಿಕೆಯ ಮೇಲೆ ಹಿರಿಯ ಸಾಹಿತಿ ಯ.ರು.ಪಾಟೀಲ, ಡಾ.ಬಾಳಣ್ಣ ಶೀಗಿಹಳ್ಳಿ, ಡಾ.ಮಹೇಶ ಗಾಜಪ್ಪನವರ, ಡಾ.ಗಜಾನನ ನಾಯ್ಕ, ಪಿ.ನಾಗರಾಜ, ನೀಲಗಂಗಾ ಚರಂತಿಮಠ, ಡಾ.ಪಿ.ಜಿ.ಕೆಂಪಣ್ಣನವರ, ಡಾ.ಎಂ.ಎಸ್.ಉಕ್ಕಲಿ, ಡಾ.ಮಹೇಶ ಗುರನಗೌಡರ, ಡಾ.ರಾಮಕೃಷ್ಣ ಮರಾಠೆ, ಬಸವರಾಜ ಗಾರ್ಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.