ಬೆಳಗಾವಿ: ಇಲ್ಲಿನ ಶಾಹೂ ನಗರದಲ್ಲಿ ಶನಿವಾರ ವಿದ್ಯುತ್ ತಗುಲಿ ಮತಪಟ್ಟ ಅಜ್ಜ, ಅಜ್ಜಿ ಹಾಗೂ ಮೊಮ್ಮಗಳು ಶವಗಳನ್ನು ಮಧ್ಯಾಹ್ನ ಮರಣೋತ್ತರ ಪರೀಕ್ಷೆಗೆ ಸಾಗಿಸಲಾಯಿತು. ಪರಿಹಾರ ಘೋಷಣೆ ಮಾಡುವವರೆಗೆ ಶವ ಮುಟ್ಟಲು ಬಿಡಿವುದಿಲ್ಲ ಎಂದು ಕುಟುಂಬದವರು ಪಟ್ಟು ಹಿಡಿದಿದ್ದರು. ಕೊನೆಗೆ ತಾಂಡಾದ ಹಿರಿಯರ ಸಮ್ಮುಖದಲ್ಲಿ ಸಮಾಧಾನ ಮಾಡಿದ ಪೊಲೀಸರು ಶವ ಸಾಗಿಸಿದರು.
ರಾಮದುರ್ಗ ತಾಲ್ಲೂಕಿನ ಅರಬೆಂಚಿ ತಾಂಡಾ ಮೂಲದವರಾದ ಈರಪ್ಪ ರಾಠೋಡ (55) ಇವರು ಪತ್ನಿ ಶಾಂತವ್ವ ರಾಠೋಡ (50), 3ನೇ ತರಗತಿ ಓದುತ್ತಿದ್ದ ಮೊಮ್ಮಗಳು ಅನ್ನಪೂರ್ಣಾ ಅವರ ಶವಗಳು ಆರು ತಾಸು ಸ್ಥಳದಲ್ಲೇ ಉಳಿದವು. ಶವ ಸಾಗಿರುವ ವಾಹನದಲ್ಲಿ ದೇಹಗಳನ್ನು ಹಾಕುತ್ತಿದ್ದಂತೆ ಕುಟುಂಬದವರು, ಸಮುದಾಯದ ಮಹಿಳೆಯರ ಆಕ್ರಂದನ ಮುಗಿಲು ಮುಟ್ಟಿತು. ಮಹಿಳೆಯರು ಶವಗಳ ಮುಂದೆ ಬಿದ್ದು ಹೊರಳಾಡಿ ಗೋಳಿಟ್ಟರು.
ಇದನ್ನೂ ಓದಿ: ನಿರ್ಮಾಣ ಹಂತದ ಮನೆಯಲ್ಲಿ ವಿದ್ಯುತ್ ಅವಘಡ: ಅಜ್ಜ, ಅಜ್ಜಿ, ಮೊಮ್ಮಗಳು ಸಾವು
ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಶವಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗುವುದು. ನಂತರ ಅರಬೆಂಚಿ ತಾಂಡಾಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ತ ಶವಗಳನ್ನು ಹೊತ್ತ ವಾಹನ ಹೊರಡುತ್ತಿದ್ದಂತೆಯೇ ಜನರೂ ಅದರ ಹಿಂದೆ ಸಾಗಿದರು. ಅವಘಡ ಸಂಭವಿಸಿದ, ನಿರ್ಮಾಣ ಹಂತದಲ್ಲಿದ್ದ ಮನೆ ಖಾಲಿ ಆಯಿತು. ಸುತ್ತಲಿನ ಜನರೂ ಚದುರಿದರು. ನೀರವ ಮೌನ ಆವರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.