ಬೆಳಗಾವಿ: ತಾಲ್ಲೂಕಿನ ಭೂತರಾಮನಹಟ್ಟಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ‘ಶೌರ್ಯ’ ಹೆಸರಿನ ಹುಲಿ ಬಹುಅಂಗಾಂಗ ವೈಫಲ್ಯದಿಂದ ಭಾನುವಾರ ಮೃತಪಟ್ಟಿದೆ.
‘ರಕ್ತದಲ್ಲಿ ಕಂಡುಬರುವ ಮೈಕೋಪ್ಲಾಸ್ಮಾ, ಬೇಬಿಸಿಯೋಸಿಸ್ ಮತ್ತು ಸೈಟಾಕ್ಝೋನೋಸಿಸ್ ಎಂಬ ಅಪರೂಪದ ಕಾಯಿಲೆಯಿಂದ 12ರಿಂದ 13 ವರ್ಷ ವಯಸ್ಸಿನ ಗಂಡು ಹುಲಿ ಬಳಲುತ್ತಿತ್ತು. ಕಳೆದ 21 ದಿನಗಳಿಂದ ವನ್ಯಜೀವಿ ತಜ್ಞವೈದ್ಯರ ಸಲಹೆಯಂತೆ ಉಪಚಾರ ಮಾಡಲಾಗುತ್ತಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಬೆೆಳಿಗ್ಗೆ 9.40ಕ್ಕೆ ಮೃತಪಟ್ಟಿದೆ’ ಎಂದು ವಲಯ ಅರಣ್ಯ ಅಧಿಕಾರಿ ಪವನ ಕುರನಿಂಗ ‘ಪ್ರಜಾವಾಣಿ’ಗೆ ತಿಳಿಸಿದರು.
‘ಇದೇರೀತಿಯ ಆರೋಗ್ಯ ಸಮಸ್ಯೆ ಕಳೆದ ವರ್ಷವೂ ಹುಲಿಯಲ್ಲಿ ಕಾಣಿಸಿಕೊಂಡಿತ್ತು. ಆದರೆ, ಚಿಕಿತ್ಸೆ ನಂತರ ಚೇತರಿಸಿಕೊಂಡಿತ್ತು. ಈ ಬಾರಿ ಮತ್ತೆ ಅನಾರೋಗ್ಯಕ್ಕೆ ತುತ್ತಾಗಿತ್ತು. 21 ದಿನ ನಿರಂತರವಾಗಿ ಚಿಕಿತ್ಸೆ ಕೊಟ್ಟರೂ ಬದುಕುಳಿಯಲಿಲ್ಲ’ ಎಂದರು.
ಮರಣೋತ್ತರ ಪರೀಕ್ಷೆ ಮಾಡಿದ ನಂತರ, ನಿಯಮಾನುಸಾರವಾಗಿ ಅಂತ್ಯಕ್ರಿಯೆ ಮಾಡಲಾಯಿತು. ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
ಬನ್ನೇರಘಟ್ಟ ಮೃಗಾಲಯದಿಂದ 2021ರಲ್ಲಿ ಭೂತರಾಮನಹಟ್ಟಿಯ ಕಿರು ಮೃಗಾಲಯಕ್ಕೆ ‘ಶೌರ್ಯ’ ಎಂಬ ಹುಲಿಯನ್ನು ಸ್ಥಳಾಂತರಿಸಲಾಗಿತ್ತು. ಇಲ್ಲಿಗೆ ಬರುವ ಪ್ರವಾಸಿಗರು ತಮ್ಮ ಕ್ಯಾಮೆರಾ ಮತ್ತು ಮೊಬೈಲ್‌ಗಳಲ್ಲಿ ‘ಶೌರ್ಯ’ನನ್ನು ಸೆರೆಹಿಡಿದು ಸಂಭ್ರಮಿಸುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.