ಚನ್ನಮ್ಮನ ಕಿತ್ತೂರು: ಬ್ರಿಟಿಷರ ವಿರುದ್ಧ ವೀರರಾಣಿ ಕಿತ್ತೂರು ಚನ್ನಮ್ಮ ದಿಗ್ವಿಜಯ ಸಾಧಿಸಿದ ಐತಿಹಾಸಿಕ ಘಟನೆಗೆ 200 ವರ್ಷಗಳು ಸಂದಿದ್ದು, ಎಲ್ಲೆಡೆ ಸಂಭ್ರಮ ಮಾಡಿದೆ. ಐತಿಹಾಸಿಕ ಚನ್ನಮ್ಮನ ಕೋಟೆಗೆ ಸಾಗರೋಪಾದಿಯಲ್ಲಿ ಹರಿದು ಬರುತ್ತಿರುವ ಜನತೆ ಕಿತ್ತೂರು ಕೋಟೆಯನ್ನು ಗುರುವಾರ ಮುತ್ತಿಕಿದರು.
ಚನ್ನಮ್ಮನ ಕಿತ್ತೂರು ಉತ್ಸವಕ್ಕೆ ಜನಸಾಗರವೇ ಹರಿದು ಬರುತ್ತಿದೆ. ವಿದ್ಯುತ್ ದೀಪಾಲಂಕಾರದಿಂದ ಕೋಟೆ ಆವರಣದ ಒಳಗೆ, ಹೊರಗೆ ಹಾಗೂ ಇಡೀ ಪಟ್ಟಣ ನಳನಳಿಸುತ್ತಿದೆ. ಜನರು ಸೆಲ್ಫಿ, ಫೋಟೊ ತೆಗೆಸಿಕೊಳ್ಳುತ್ತಿರುವುದು ಎಲ್ಲೆಡೆ ಸಾಮಾನ್ಯವಾಗಿದೆ. ಉತ್ಸವಕ್ಕೆ ಬಂದವರು ಕೋಟೆ ಅಭಿವೃದ್ಧಿಯಾಗಿ, ಪ್ರಸಿದ್ಧ ಪ್ರವಾಸಿ ತಾಣವಾಗಬೇಕು. ದಸರಾ ಮಾದರಿಯಲ್ಲಿ ಪ್ರತಿ ವರ್ಷ ಕಿತ್ತೂರು ಚನ್ನಮ್ಮನ ಉತ್ಸವ ನಡೆಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಸ್ತು ಪ್ರದರ್ಶನದಲ್ಲಿ ಮಾರಾಟಕ್ಕೆ ಇಟ್ಟಿರುವ ವಿವಿಧ ವಸ್ತುಗಳ ಖರೀದಿ ಭರಾಟೆಯೂ ಜೋರಾಗಿದೆ.
ಅತ್ಯಾಕರ್ಷಿಸಿದ ಊಯ್ಯಾಲೆ: ಕೋಟೆ ಆವರಣದ ಎದುರು ತೊಟ್ಟಿಲು ಆಟ, ಊಯಾಲೆಗಳು, ಉಗಿ ಬಂಡಿ ಸೇರಿ ಇನ್ನಿತರ ಆಟಗಳು ಮಕ್ಕಳನ್ನು ಆಕರ್ಷಿಸಿದವು. ಸಾವಿರಾರು ಜನ ಊಯಾಲೆ ಜೀಗಿದರು. ಮಕ್ಕಳ ಆಟಿಕೆ ವಸ್ತಗಳು ಗಮನ ಸೆಳೆದವು.
ಶಿಕ್ಷಕಿ ಸ್ನೇಹಾ ಹುಣಶೀಕಟ್ಟಿ ಮಾತನಾಡಿ, ‘ಕೋಟೆ ಅಭಿವೃದ್ಧಿಪಡಿಸಿದರೆ ಬಹಳಷ್ಟು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಆ ನಿಟ್ಟಿನಲ್ಲಿ ರಾಜಕಾರಣಿಗಳು ಯೋಚಿಸಬೇಕು. ನಾಡಿನ ಇತಿಹಾಸ ಅಜರಾಮರಗೊಳಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಸಿನಿಮಾ ತಾರೆಯರು ತಾವೇ ಸ್ವಯಂ ಅಭಿಮಾನದಿಂದ ಉತ್ಸವಕ್ಕೆ ಬರುವಂತಾಗಬೇಕು’ ಎಂದು ಹೇಳಿದರು.
ಕುಟುಂಬ ಸಮೇತವಾಗಿ ಆಗಮಿಸಿದ್ದ ವಿಜಯ ಸಂಗೊಳ್ಳಿ ಮಾತನಾಡಿ, ‘ಕಿತ್ತೂರಿನ ಕೋಟೆಯ ಪಳೆಯುಳಿಕೆಗಳನ್ನಷ್ಟೇ ನಾವು ನೋಡುತ್ತಿದ್ದೇವೆ. ಕೋಟೆ ಮರು ನಿರ್ಮಾಣವಾಗಿ, ಗತವೈಭವ ಮತ್ತೆ ಮರುಕಳಿಸಬೇಕು’ ಎಂದರು.
ಕಿತ್ತೂರು ನಾಡಿನ ಕಣಕಣದಲ್ಲೂ ಸ್ವಾತಂತ್ರ್ಯ ಪ್ರೇಮ ದೇಶಾಭಿಮಾನವಿದೆ. ಈ ಮಣ್ಣಿನ ಗುಣಧರ್ಮದ ಅಭಿಮಾನವೇ ನಮ್ಮೆಲ್ಲರ ಹೆಮ್ಮೆ ವೀರಮಾತೆ ಕಿತ್ತೂರು ಚನ್ನಮ್ಮ. ಪ್ರತಿ ವರ್ಷ ಕಿತ್ತೂರು ಉತ್ಸವವನ್ನು ಅದ್ದೂರಿಯಾಗಿ ನಡೆಸಲಾಗುವುದು–ಬಾಬಾಸಾಹೇಬ ಪಾಟೀಲ ಶಾಸಕ
ಜಿಲ್ಲಾಧಿಕಾರಿ ಶಾಸಕರ ಮಾರ್ಗದರ್ಶನದಲ್ಲಿ ಕಿತ್ತೂರು ಉತ್ಸವದಲ್ಲಿ ಹಲವು ವೈಭವಯುತ ಕಾರ್ಯಕ್ರಮ ನಡೆಸಲಾಗುತ್ತಿದೆ. ಕಿತ್ತೂರು ಕೋಟೆಗೆ ವಿದ್ಯುತ್ ದೀಪಗಳ ಝಲಕ್ ನೀಡಲಾಗಿದ್ದು ಜನತೆ ಹರ್ಷ ವ್ಯಕ್ತಪಡಿಸುತ್ತಿದ್ದಾರೆ–ಪ್ರಭಾವತಿ ಫಕೀರಪೂರ ಉಪವಿಭಾಗಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.