ಮೂಡಲಗಿ: ಮೂಡಲಗಿ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ನವರಾತ್ರಿ ಉತ್ಸವ ಸಮಿತಿಯವರು ಏರ್ಪಡಿಸಿದ್ದ ಟ್ರ್ಯಾಕರ್ ಎಳೆಯುವ ಸ್ಪರ್ಧೆ ರೋಮಾಂಚಕಾರಿಯಾಗಿ ಗಮನಸೆಳೆಯಿತು.
ಸ್ಪರ್ಧೆಯ ನಿಯಮದಂತೆ ನಾಲ್ಕು ಜನರ ತಂಡವು ಟ್ರ್ಯಾಕ್ಟರ್ ಮುಂಭಾಗದಲ್ಲಿ ಕಟ್ಟಿದ್ದ ದಪ್ಪ ಹಗ್ಗವನ್ನು ಹಿಡಿದು ಟ್ರ್ಯಾಕರ್ ಎಳೆಯುತ್ತಿದ್ದಂತೆ ಸೇರಿದ ಜನರೆಲ್ಲ ಹೋ... ಎಂದು ಕೂಗುತ್ತ, ಮುಗಿಲು ಮುಟ್ಟುವಂತೆ ಶಿಳ್ಳೆ, ಕೇಕೆ, ಚಪ್ಪಾಳೆಗಳ ಸದ್ದು ಮುಗಿಲು ಮುಟ್ಟಿತು. ಟ್ರ್ಯಾಕ್ಟರ್ ಎಳೆಯುವ ಸ್ಪರ್ಧೆಯನ್ನು ನೋಡಲು ಮತ್ತು ಎಳೆಯುವ ತಂಡಗಳಿಗೆ ಪ್ರೋತ್ಸಾಹಿಸಲು ಸಾವಿರಾರು ಜನರು ಮೈದಾನದಲ್ಲಿ ಸೇರಿದ್ದರು.
ಮುಧೋಳದ ಸತ್ಯಮ್ಮದೇವಿ ತಂಡದ ಜಟ್ಟಿಗಳು ಟ್ರ್ಯಾಕ್ಟರ್ ಅನ್ನು ಒಂದು ನಿಮಿಷದಲ್ಲಿ 252.8 ಅಡಿ ಎಳೆದು ಮೊದಲ ಸ್ಥಾನ ಪಡೆದರು. ಬಿಸನಾಳದ ಅಮೋಘಸಿದ್ದೇಶ್ವರ ತಂಡದವರು 248 ಅಡಿ ಎಳೆದು ದ್ವಿತೀಯ ಸ್ಥಾನ ಮತ್ತು ಮುಧೋಳ ತಾಲ್ಲೂಕಿನ ಚಿಮ್ಮಡದ ಕರಿಸಿದ್ಧೇಶ್ವರ ತಂಡದವರು 231.8 ಅಡಿ ಎಳೆದು ತೃತೀಯ ಸ್ಥಾನ ಪಡೆದು ಕ್ರಮವಾಗಿ 5000, 3000 ಮತ್ತು 2000 ನಗದು ಮತ್ತು ಪಾರಿತೋಷಕ ತಮ್ಮದಾಗಿಸಿಕೊಂಡರು. ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ್ದ 20 ತಂಡಗಳು ತಮ್ಮ ಶಕ್ತಿ ಸಾಮರ್ಥ್ಯ ಒರೆಗೆ ಹಚ್ಚಿದವು.
‘ರೈತಾಪಿ ಜನರಿಗಾಗಿ ಎತ್ತು ಓಡಿಸುವ ಸ್ಪರ್ಧೆ, ಎತ್ತುಗಳಿಂದ ತೆರೆಬಂಡಿ ಸ್ಪರ್ಧೆ, ಬಂಡಿ ಓಡಿಸುವ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದರು. ಆಧುನಿಕತೆಯಿಂದಾಗಿ ರೈತರ ಗೆಳೆಯ ಎತ್ತುಗಳ ಸ್ಥಳವನ್ನು ಟ್ರ್ಯಾಕ್ಟರ್‌ಗಳು ಆವರಿಸಿಕೊಂಡಿವೆ. ಹೀಗಾಗಿ ಕಾಲಕ್ಕೆ ತಕ್ಕಂತೆ ಈ ಬಾರಿ ರೈತರಿಗೆ ಟ್ರ್ಯಾಕ್ಟರ್ ಓಡಿಸುವ ಸ್ಪರ್ಧೆಯನ್ನು ಏರ್ಪಸಿದ್ದೇವೆ’ ಎಂದು ಸಂಘಟಕರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಸ್ಪರ್ಧೆಯನ್ನು ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲಕರ, ಕೃಷಿ ಇಲಾಖೆಯ ಉಪನಿರ್ದೇಶಕ ರಂಗಣ್ಣ ನಾಗಣ್ಣವರ ಸ್ಪರ್ಧೆಗೆ ಚಾಲನೆ ನೀಡಿದರು. ನವರಾತ್ರಿ ಸಮಿತಿಯ ಅಜ್ಜಪ್ಪ ಅಂಗಡಿ, ಈರಪ್ಪ ಢವಳೇಶ್ವರ, ಬಸವರಾಜ ಸಸಾಲಟ್ಟಿ, ಪ್ರಭು ತೇರದಾಳ, ಸಂಜು ಕಮತೆ, ಶಿವಬೋಧ ಮಠಪತಿ, ಭೀಮಶಿ ತಳವಾರ, ಅಬ್ದುಲ್ ಪೈಲ್ವಾನ, ರಮೇಶ ಸಣ್ಣಕ್ಕಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.