ಬೆಳಗಾವಿ: ‘ಗಂಡುಮೆಟ್ಟಿನ ನೆಲ ಬೆಳಗಾವಿಗೆ ಫೆ.27ರಂದು ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಮೊದಲ ಬಾರಿ ಕರ್ನಾಟಕದಿಂದ ರೈತ ಕಿಸಾನ್ ಸಮ್ಮಾನ್ ಯೋಜನೆ ನಿಧಿಯನ್ನು ರೈತರ ಖಾತೆಗೆ ವರ್ಗಾಯಿಸಲಿದ್ದಾರೆ’ ಎಂದು ಕೃಷಿ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಇಲ್ಲಿನ ಬಿ.ಎಸ್.ಯಡಿಯೂರಪ್ಪ ಮಾರ್ಗದಲ್ಲಿರುವ ಮಾಲಿನಿ ಸಿಟಿಯಲ್ಲಿ ನಡೆಯಲಿರುವ ಪ್ರಧಾನಿ ಕಾರ್ಯಕ್ರಮದ ವೇದಿಕೆ ನಿರ್ಮಾಣ ಮತ್ತಿತರ ಸಿದ್ಧತೆ ಗುರುವಾರ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಕಳೆದ ಬಾರಿ ದೆಹಲಿ ಗ್ರಾಮೀಣ ಕ್ಷೇತ್ರದಿಂದ ರೈತರ ಖಾತೆಗೆ ₹22 ಸಾವಿರ ಕೋಟಿ ನಿಧಿ ವರ್ಗಾಯಿಸಿದ್ದರು. ಈ ಬಾರಿ ಕರ್ನಾಟಕದಿಂದ 14 ಕೋಟಿ ರೈತರ ಖಾತೆಗೆ ₹2.70 ಲಕ್ಷ ಕೋಟಿ ವರ್ಗಾಯಿಸಲಿದ್ದಾರೆ. ರೈತರ ಖಾತೆಗೆ ವಾರ್ಷಿಕ ₹6 ಸಾವಿರ ಹಾಕುತ್ತಿದ್ದೇವೆ. ಈ ಬಾರಿ ಬಿ.ಎಸ್.ಯಡಿಯೂರಪ್ಪ ಜನ್ಮದಿನದಂದು ರೈತರ ಖಾತೆಗೆ ಹಣ ವರ್ಗಾಯಿಸುತ್ತಿರುವುದು ಖುಷಿ ತಂದಿದೆ’ ಎಂದರು.
‘ಫೆ.27ರಂದು ಶಿವಮೊಗ್ಗ ವಿಮಾನ ನಿಲ್ದಾಣವನ್ನು ದೇಶಕ್ಕೆ ಸಮರ್ಪಿಸಿದ ನಂತರ, ಬೆಳಗಾವಿಗೆ ಮೋದಿ ಆಗಮಿಸಲಿದ್ದಾರೆ. ರೋಡ್ ಶೋ ನಡೆಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಆದರೆ, ಭದ್ರತೆ ದೃಷ್ಟಿಯಿಂದ ಎಲ್ಲಿ ರೋಡ್ ಶೋ ಮಾಡಬೇಕು ಎಂದು ಎಸ್‌ಪಿಜಿಯವರು ಹೇಳುತ್ತಾರೆ. ಅದರಂತೆ ವ್ಯವಸ್ಥೆ ಮಾಡುತ್ತೇವೆ’ ಎಂದು ಹೇಳಿದರು.
‘ಇದು ಸಂಪೂರ್ಣ ರೈತರ ಕಾರ್ಯಕ್ರಮವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸೇರಲಿದ್ದಾರೆ. ಕೃಷಿಯಲ್ಲಿ ರೈತ ಮಹಿಳೆಯರ ಪಾತ್ರ ದೊಡ್ಡದು. ಹೀಗಾಗಿ ರೈತ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಲಾಗುತ್ತಿದೆ. ಬೆಳಗಾವಿಯೊಂದಿಗೆ, ಅಕ್ಕಪಕ್ಕದ ಜಿಲ್ಲೆಗಳ ರೈತರು, ಜನರು ಬರಲಿದ್ದಾರೆ’ ಎಂದು ತಿಳಿಸಿದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.