ಬೆಳಗಾವಿ: ಇಲ್ಲಿನ ಕೋಟೆ ಕೆರೆಯ ಮೈದಾನದಲ್ಲಿರುವ ದಕ್ಷಿಣ ಭಾರತದ ಅತಿ ಎತ್ತರದ ಧ್ವಜಸ್ತಂಭದ ಮೇಲೆ ಶನಿವಾರ ಬೆಳಿಗ್ಗೆ ತ್ರಿವರ್ಣಧ್ವಜ ಹಾರಾಡಿತು.
ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಕೇಂದ್ರ ಸರ್ಕಾರ ಆಯೋಜಿಸಿದ ಮನೆಮನೆಗೂ ತ್ರಿವರ್ಣಧ್ವಜ ಅಭಿಯಾನದ ಭಾಗವಾಗಿ ಈ ಧ್ವಜಾರೋಹಣ ನೆರವೇರಿತು.
ಬಾನಿನತ್ತ ಏರಿದ ಧ್ವಜವು ಗಾಳಿಯಲ್ಲಿ ಪದರುಬಿಚ್ಚಿ ಹಾರುತ್ತಿದ್ದಂತೆಯೇ ಕೆಳಗೆ ನಿಂತವರಲ್ಲಿ ರೋಮಾಂಚನ ಉಂಟಾಯಿತು. ಭಾರತ ಮಾತಾ ಕಿ ಜೈ, ವಂದೇ ಮಾತರಂ, ಮಾತಾಮಾತಾ ಭಾರತ ಮಾತಾ, ಜೈ ಜವಾನ್ ಜೈ ಕಿಸಾನ್ ಘೋಷಣೆಗಳು ನಿರಂತರ ಮಾರ್ದನಿಸಿದವು.
ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ ಅನಿಲ ಬೆನಕೆ, ಜಾಲ್ಲಾಧಿಕಾರಿ ನಿತೇಶ್ ಪಾಟೀಲ, ಎಸ್ಪಿ ಡಾ.ಸಂಜೀವ್ ಪಾಟೀಲ, ನಗರ ಪೊಲೀಸ್ ಕಮಿಷನರ್ ಡಾ.ಎಂ.ಬಿ. ಬೋರಲಿಂಗಯ್ಯ ಸೇರಿದಂತೆ ಹಲವು ಅಧಿಕಾರಿಗಳು, ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು, ಸ್ವಯಂ ಸೇವಕರು, ಸಂಘಟನೆಗಳ ಸದಸ್ಯರು, ಸಾರ್ವಜನಿಕರು ಕೂಡ ಈ ವೈಭವದಲ್ಲಿ ಪಾಲ್ಗೊಂಡರು.
ಇದಕ್ಕೂ ಮುನ್ನ 75 ಮೀಟರ್ ಉದ್ದದ ತ್ರಿವರ್ಣಧ್ವಜವನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ತರಲಾಯಿತು. ಮಾರ್ಗದಲ್ಲಿ ರಾಷ್ಟ್ರಭಕ್ತಿ ಗೀತೆಗಳು ಮೊಳಗಿದವು.
ನಗರದ ಪ್ರಮುಖ ರಸ್ತೆ, ವೃತ್ತ, ಚೌಕಗಳಲ್ಲಿ ತ್ರಿವರ್ಣಧ್ವಜ ರಾರಾಜಿಸಿತು. ಹಲವರು ಈಗಾಗಲೇ ತಮ್ಮ ಮನೆಗಳ ಮೇಲೆ, ಕಚೇರಿಗಳಲ್ಲಿ, ಮಳಿಗೆಗಳ ಮೇಲೂ ಧ್ವಜ ಹಾರಿಸಿದ್ದು ಗಮನ ಸೆಳೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.