ADVERTISEMENT

ಎಂ.ಕೆ‌.ಹುಬ್ಬಳ್ಳಿ | ಹೆಸರಷ್ಟೇ ‘ತುಂಬು’ಕೆರೆ, ವರ್ಷವಿಡೀ ಖಾಲಿ

​ಪ್ರಜಾವಾಣಿ ವಾರ್ತೆ
Published 27 ಮೇ 2024, 5:26 IST
Last Updated 27 ಮೇ 2024, 5:26 IST
ಎಂ.ಕೆ.ಹುಬ್ಬಳ್ಳಿಯ ತುಂಬುಕೆರೆ ಬರಿದಾಗಿರುವುದು
ಎಂ.ಕೆ.ಹುಬ್ಬಳ್ಳಿಯ ತುಂಬುಕೆರೆ ಬರಿದಾಗಿರುವುದು   

ಎಂ.ಕೆ‌.ಹುಬ್ಬಳ್ಳಿ: ಒಂದು ಕಾಲದಲ್ಲಿ ಇಡೀ ಊರಿನ ಜನರ ದಾಹ ನೀಗಿಸುತ್ತಿದ್ದ ಇಲ್ಲಿನ ಐತಿಹಾಸಿಕ ‘ತುಂಬುಕೆರೆ’ ಈಗ ಬಾಯಾರಿ ಬಳಲಿದೆ. ಅಧಿಕಾರಿಗಳ ನಿರ್ಲಕ್ಷ್ಯ, ಜನರ ನಿಷ್ಕಾಳಜಿಯಿಂದ ಅವ್ಯವಸ್ಥೆ ಆಗರವಾಗಿ ಮಾರ್ಪಟ್ಟಿದೆ.

ಇದು ಹೆಸರಿಗಷ್ಟೇ ತುಂಬುಕೆರೆ. ವರ್ಷವಿಡೀ ‘ಖಾಲಿ’ ಇರುತ್ತದೆ. ಕಾಲುವೆ ಒತ್ತುವರಿಯಾಗಿದ್ದರಿಂದ ಮತ್ತು ರಾಷ್ಟ್ರೀಯ ಹೆದ್ದಾರಿ–4 ನಿರ್ಮಾಣದ ವೇಳೆ ಕೆಲವು ಜಲಮೂಲ ಮುಚ್ಚಿದ್ದರಿಂದ ಕೆರೆಗೆ ಮಳೆನೀರು ಹರಿದುಬರುವುದು ನಿಂತಿದೆ.

ಕೆರೆಯ ಜಾಗ ಒತ್ತುವರಿ ಮತ್ತು ಕೊಳಚೆ ನೀರು ನುಗ್ಗುತ್ತಿರುವುದನ್ನು ತಡೆಯುವಲ್ಲಿ ವಿಫಲವಾದ ಪಟ್ಟಣ ಪಂಚಾಯ್ತಿ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ‘ಕೆರೆ ಉಳಿವಿಗೆ ಏಕೆ ನಿರ್ಲಕ್ಷ್ಯ ವಹಿಸುತ್ತಿದ್ದೀರಿ’ ಎಂದು ಕಿಡಿಕಾರಿದ್ದಾರೆ.

ADVERTISEMENT

ಕೆರೆಯೊಡಲಿಗೆ ಕೊಳಚೆ ನೀರು: ತುಂಬುಕೆರೆ ಪಕ್ಕದ ಓಣಿ ಮತ್ತು ಮನೆಗಳಿಂದ ಹರಿದುಬರುವ ಕೊಳಚೆ ನೀರಿನಿಂದ ಕೆರೆಯೊಡಲು ದುರ್ನಾತ ಬೀರುತ್ತಿದೆ. ಇಲ್ಲಿ ಗಿಡಗಂಟಿ ಬೆಳೆದಿದ್ದು, ವಿಷಜಂತುಗಳ ಹಾವಳಿ ಹೆಚ್ಚಿದೆ.

ಪೈಪ್‌ಲೈನ್‌ ಅಳವಡಿಕೆ: ಕಿತ್ತೂರು ವಿಧಾನಸಭಾ ಕ್ಷೇತ್ರದ 64 ಕೆರೆಗಳನ್ನು ಮಲಪ್ರಭಾ ನದಿಯಿಂದ ತುಂಬಿಸುವ ಯೋಜನೆಯನ್ನು ಐದಾರು ವರ್ಷಗಳ ಹಿಂದೆ ಕೈಗೆತ್ತಿಕೊಳ್ಳಲಾಗಿತ್ತು. ಎಂ.ಕೆ.ಹುಬ್ಬಳ್ಳಿಯ ತುಂಬುಕೆರೆಯೂ ಇದರಲ್ಲಿ ಸೇರಿತ್ತು. ಆಗ ಶಾಸಕರಾಗಿದ್ದ ಮಹಾಂತೇಶ ದೊಡಗೌಡರ, ಮಲಪ್ರಭಾ ನದಿಯಲ್ಲಿ ಸ್ಥಗಿತಗೊಂಡಿದ್ದ ಹಳೆಯ ಜಾಕ್‌ವೆಲ್ ಸ್ಥಳದಲ್ಲೇ ಹೊಸ ಜಾಕ್‌ವೆಲ್‌ ನಿರ್ಮಾಣಕ್ಕೆ ₹5 ಕೋಟಿ ಅನುದಾನ ತಂದರು. ಕೆರೆ ತುಂಬಿಸಲು ಕಳೆದ ವರ್ಷ ಪೈಪ್‌ಲೈನ್‌ ಅಳವಡಿಸಲಾಗಿದೆ. ಆದರೆ, ಈವರೆಗೂ ಕೆರೆಗೆ ನೀರು ಹರಿದಿಲ್ಲ.

ತುಂಬುಕೆರೆ ಬತ್ತಿದ್ದರಿಂದ ಸುತ್ತಲಿನ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಕೆರೆಯನ್ನೇ ನೆಚ್ಚಿಕೊಂಡಿದ್ದ ಜಾನುವಾರುಗಳು ಪರದಾಡುವಂತಾಗಿದೆ.

ಕೆರೆ ತುಂಬಿಸಲು ಪೈಪ್‌ಲೈನ್ ಅಳವಡಿಸಲಾಗಿದೆ. ಆದರೆ, ಕೆರೆದಂಡೆ ಹಾಳಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಲು ಕೆರೆದಂಡೆಯ ಎತ್ತರವನ್ನೂ ಹೆಚ್ಚಿಸಬೇಕು’ ಎಂಬುದು ಜನರ ಒತ್ತಾಯ.

ಎಂ.ಕೆ.ಹುಬ್ಬಳ್ಳಿಯ ತುಂಬುಕೆರೆ ಸುತ್ತಲೂ ಕಸಕಂಟಿ ಬೆಳೆದಿರುವುದು
ತುಂಬುಕೆರೆಗೆ ಮಲಪ್ರಭಾ ನದಿಯಿಂದ ನೀರು ಹರಿಸಲು ಅಳವಡಿಸಿರುವ ಪೈಪ್‌ಲೈನ್‌
ಊರಿನ ಜನರ ನೀರಿನ ದಾಹ ನೀಗಿಸುತ್ತಿದ್ದ ತುಂಬುಕೆರೆ ಈಗ ಖಾಲಿಯಾಗಿದೆ. ಕೆರೆಗೆ ಮಳೆನೀರು ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ಮಾಡಬೇಕು. ಸ್ವಚ್ಛತೆಗೆ ಕ್ರಮ ವಹಿಸಬೇಕು
ಅದೃಶ್ಯಾನಂದ ಗದ್ದಿಹಳ್ಳಿ ಗ್ರಾಮಸ್ಥ
ನಾವು ಚಿಕ್ಕವರಿದ್ದಾಗ ತುಂಬುಕೆರೆ ಮೈದುಂಬಿ ನಳನಳಿಸುತ್ತಿತ್ತು. ಊರಿನ ಜನರ ಕುಡಿಯುವ ನೀರಿನ ಮೂಲವಾಗಿತ್ತು. ಈಗ ಇದರ ಚಿತ್ರಣ ಬದಲಾಗಿದೆ. ಮಲಪ್ರಭಾ ನದಿಯಿಂದ ಕೆರೆಗೆ ನೀರು ತುಂಬಿಸಬೇಕು
ಎನ್.ಸಿ.ಗಣಾಚಾರಿ ಗ್ರಾಮಸ್ಥ
ಕೆರೆ ಸಂರಕ್ಷಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕೆರೆಗೆ ಸೇರುತ್ತಿರುವ ಕೊಳಚೆ ನೀರು ತಡೆಯುವ ಜತೆಗೆ ಕೆರೆ ಪರಿಸರವನ್ನು ಶುಚಿಗೊಳಿಸಲಾಗುವುದು
ಶರಣಬಸಯ್ಯ ಮುಖ್ಯಾಧಿಕಾರಿ ಪಟ್ಟಣ ಪಂಚಾಯ್ತಿ ಎಂ.ಕೆ.ಹುಬ್ಬಳ್ಳಿ
ಮಲಪ್ರಭಾ ನದಿಯಿಂದ ತುಂಬುಕೆರೆಗೆ ನೀರು ಹರಿಸಲು ಕೈಗೊಂಡ ಜಾಕ್‌ವೆಲ್ ಪೈಪ್‌ಲೈನ್ ಕಾಮಗಾರಿ ಮುಗಿದಿದೆ. ವಿದ್ಯುತ್ ಸಂಪರ್ಕ ನೀಡುವುದಷ್ಟೇ ಬಾಕಿ ಇದೆ. ಕೆರೆ ಸೌಂದರ್ಯೀಕರಣಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು
- ಎಂ.ಆರ್.ಪಾಟೀಲ ಸಹಾಯಕ ಎಂಜಿನಿಯರ್‌ ಸಣ್ಣ ನೀರಾವರಿ ಇಲಾಖೆ ಬೈಲಹೊಂಗಲ ಉಪವಿಭಾಗ

‘ಪ್ರವಾಸಿಗರನ್ನು ಸೆಳೆಯುವಂತಾಲಿ’

‘ಎಂ.ಕೆ. ಹುಬ್ಬಳ್ಳಿಯ ತುಂಬುಕೆರೆ 26 ಎಕರೆಯಲ್ಲಿ ಹರಡಿಕೊಂಡಿದೆ. ಒಂದೆಡೆ ಜನವಸತಿ ಪ್ರದೇಶ ಇನ್ನೊಂದೆಡೆ ಶಾಲೆ ಆಸ್ಪತ್ರೆ ಹಾಗೂ ಮತ್ತೊಂದು ಕಡೆಯ ಗುಡ್ಡದ ಮೇಲೆ ಪೀರ ಮುಗಟಶಾವಲಿ ದರ್ಗಾ ಇದೆ. ಇಲ್ಲಿ ವರ್ಷವಿಡೀ ನೀರು ಇರುವಂತೆ ಮಾಡಿ ಬೋಟಿಂಗ್‌ ವ್ಯವಸ್ಥೆ ಮಾಡಬೇಕು. ಕೆರೆ ಸೌಂದರ್ಯೀಕರಣ ಹೆಚ್ಚಿಸಿ ಪ್ರವಾಸಿಗರನ್ನು ಸೆಳೆಯುವ ಕೆಲಸವಾಗಬೇಕು’ ಎಂದು ಗ್ರಾಮಸ್ಥ ದಯಾನಂದ ಬಡಿಗೇರ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.