ADVERTISEMENT

ಮಲಪ್ರಭಾ ಜಾಧವ್‌ಗೆ ಕಂಚಿನ ಪದಕ: ಬೆಳಗಾವಿಯ ತುರಮುರಿಯಲ್ಲಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2018, 16:47 IST
Last Updated 28 ಆಗಸ್ಟ್ 2018, 16:47 IST
ಮಲಪ್ರಭಾ ಅವರ ಸಹೋದರ ಮೋಹನ, ತಾಯಿ ಶೋಭಾ ಹಾಗೂ ತಂದೆ ಯಲ್ಲಪ್ಪಾ.
ಮಲಪ್ರಭಾ ಅವರ ಸಹೋದರ ಮೋಹನ, ತಾಯಿ ಶೋಭಾ ಹಾಗೂ ತಂದೆ ಯಲ್ಲಪ್ಪಾ.   

ಬೆಳಗಾವಿ:ಏಷ್ಯನ್‌ ಕ್ರೀಡಾಕೂಟದಲ್ಲಿ ಕುರಷ್‌ (ಕುಸ್ತಿಯ ಒಂದು ವಿಧ) ಆಟದಲ್ಲಿ ಕಂಚಿನ ಪದಕ ಗೆದ್ದ ಮಲಪ್ರಭಾ ಜಾಧವ ಅವರ ಹುಟ್ಟೂರು ಬೆಳಗಾವಿ ತಾಲ್ಲೂಕಿನ ತುರಮುರಿ ಗ್ರಾಮದಲ್ಲಿ ಮಂಗಳವಾರ ಸಂಜೆ ಹಬ್ಬದ ವಾತಾವರಣ ಕಂಡುಬಂದಿತು. ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಸಿಹಿ ಹಂಚಿ, ಸಂಭ್ರಮ ಪಟ್ಟರು.

‘ನನ್ನ ಮಗಳು ಕಂಚಿನ ಪದಕ ಗೆದ್ದಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಶಾಲಾ ದಿನಗಳಿಂದಲೂ ಅವಳು ಆಟದಲ್ಲಿ ಚುರುಕಾಗಿದ್ದಳು. ಅದಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ’ ಎಂದು ಪದಕ ಮಲಪ್ರಭಾ ಅವರ ತಾಯಿ ಶೋಭಾ ಸುದ್ದಿಗಾರರಿಗೆ ತಿಳಿಸಿದರು.

ರೈತ ಕುಟುಂಬದ ಯಲ್ಲಪ್ಪಾ ಹಾಗೂ ಶೋಭಾ ದಂಪತಿಗೆ ನಾಲ್ಕು ಜನ ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗ ಇದ್ದಾರೆ. ಮೂರು ಹೆಣ್ಣುಮಕ್ಕಳ ಮದುವೆಯಾಗಿದ್ದು, ನಾಲ್ಕನೇ ಮಗಳಾಗಿರುವ ಮಲಪ್ರಭಾ ಬೆಳಗಾವಿಯಲ್ಲಿ ಪಿ.ಯು.ಸಿ ವ್ಯಾಸಂಗ ಮಾಡುತ್ತಿದ್ದಾರೆ. ಬೆಳಗಾವಿಯ ಕ್ರೀಡಾ ವಸತಿ ನಿಲಯದಲ್ಲಿ ವಾಸವಾಗಿದ್ದಾರೆ.

ADVERTISEMENT

‘ಇವರ ಕುಟುಂಬ ಅತ್ಯಂತ ಕಡುಬಡವರಾಗಿದ್ದಾರೆ. ಸ್ವಲ್ಪ ಜಮೀನಿನಲ್ಲಿಯೇ ತಂದೆ– ತಾಯಿಯವರು ಕೃಷಿ ಮಾಡಿಕೊಂಡು ತಮ್ಮ ಜೀವನ ನಡೆಸುತ್ತಿದ್ದಾರೆ. ಮಲಪ್ರಭಾ ಅವರ ಮುಂದಿನ ವ್ಯಾಸಂಗ ಹಾಗೂ ಕ್ರೀಡಾ ತರಬೇತಿಗೆ ಸರ್ಕಾರ ಹಾಗೂ ದಾನಿಗಳು ಸಹಾಯ ಮಾಡಬೇಕು’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗನಾಥ ಜಾಧವ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.