ಬೆಳಗಾವಿ: ನಗರದಲ್ಲಿ ನಕಲಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಳಗಾವಿ ಸಿಸಿಬಿ ಘಟಕದ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಅವರಿಂದ ₹4 ಲಕ್ಷ ಮೌಲ್ಯದ ಮದ್ಯ, ₹17,500 ನಗದು, 4 ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ ವಾಹನ ವಶಪಡಿಸಿಕೊಳ್ಳಲಾಗಿದೆ
ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಈ ಕುರಿತು ಮಾಹಿತಿ ನೀಡಿದರು.
‘ನಕಲಿ ಮದ್ಯ ಮಾರಾಟ ಮಾಡುತ್ತಿರುವ ಮಾಹಿತಿ ಪೊಲೀಸ್ ಇನ್‌ಸ್ಪೆಕ್ಟರ್ ಅಲ್ತಾಫ್ ಮುಲ್ಲಾ ನೇತೃತ್ವದ ತಂಡಕ್ಕೆ ಸಿಕ್ಕಿತು. ಇಲ್ಲಿನ ಸದಾಶಿವ ನಗರದ ವಿರೂಪಾಕ್ಷಿ ರೆಸಿಡೆನ್ಸಿ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮದ್ಯದ ಬಾಟಲಿಗಳನ್ನು ಸಂಗ್ರಹಿಸಿ, ಅದರಲ್ಲಿ ಗೋವಾ ಹಾಗೂ ಕರ್ನಾಟಕದಲ್ಲಿ ತಯಾರಾಗುವ ಕಡಿಮೆ ಬೆಲೆಯ ಮದ್ಯ ಹಾಕುತ್ತಿದ್ದೆವು. ನಂತರ ರಾಸಾಯನಿಕ ಪದಾರ್ಥ ಬೆರೆಸಿ ಮಾರಾಟ ಮಾಡುತ್ತಿದ್ದೆವು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ’ ಎಂದು ತಿಳಿಸಿದರು.
‘ಆರೋಪಿಗಳು ಖಾಲಿ ಬಾಟಲಿಗಳಿಗೆ ವಿವಿಧ ಬ್ರ್ಯಾಂಡ್‌ಗಳ ಲೇಬಲ್ ಅಂಟಿಸಿ, ನಕಲಿ ಮುಚ್ಚಳ ಹಾಕುತ್ತಿದ್ದರು. ಅದೇ ಬ್ರ್ಯಾಂಡಿನ ಬಾಕ್ಸ್‌ಗಳಲ್ಲಿ ಬಾಟಲಿಗಳನ್ನು ಇರಿಸಿ, ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದರು. ಇದು ಮೂಲ ಕಂಪನಿಯ ಮದ್ಯ ಎಂದೇ ಬಿಂಬಿಸುತ್ತಿದ್ದರು. ಈ ಮದ್ಯದಲ್ಲಿ ಬೆರೆಸಿದ್ದ ರಾಸಾಯನಿಕ ಪದಾರ್ಥಗಳ ಮಾದರಿಯನ್ನು ವಿಧಿ–ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಮುಂದಿನ ಕ್ರಮ ಜರುಗಿಸುತ್ತೇವೆ’ ಎಂದು ತಿಳಿಸಿದರು.
‘ಪರವಾನಗಿ ಪಡೆಯದೆ ಮದ್ಯ ಮಾರಾಟ ಮಾಡಿದವರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪರಾರಿಯಾದ ಇನ್ನಿಬ್ಬರು ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ. ಆರೋಪಿಗಳು ಈ ಮದ್ಯವನ್ನು ಯಾವ ಅಂಗಡಿಗಳಿಗೆ ಪೂರೈಸುತ್ತಿದ್ದರು ಎನ್ನುವ ಕುರಿತು ಪರಿಶೀಲಿಸಲಾಗುತ್ತಿದೆ’ ಎಂದು ಹೇಳಿದರು.
ಈ ಪ್ರಕರಣ ಬೇಧಿಸಿದ ಅಲ್ತಾಫ್ ಮುಲ್ಲಾ ನೇತೃತ್ವದ ತಂಡಕ್ಕೆ ₹8 ಸಾವಿರ ನಗದು ಬಹುಮಾನ ವಿತರಿಸಿದರು. ನಗರ ಪೊಲೀಸ್ ಉಪ ಆಯುಕ್ತರಾದ ಪಿ.ವಿ.ಸ್ನೇಹಾ, ಶೇಖರ್ ಠಕ್ಕೆನ್ನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.