ADVERTISEMENT

ಗೌಂಡವಾಡ: ದೇವಸ್ಥಾನ ಜಮೀನು ವಿವಾದ, ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನ

ಮುಖಂಡನ ಕೊಲೆ, ವಾಹನ, ಬಣವಿಗಳಿಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 21:15 IST
Last Updated 18 ಜೂನ್ 2022, 21:15 IST
   

ಬೆಳಗಾವಿ: ತಾಲ್ಲೂಕಿನ ಗೌಂಡವಾಡ ಗ್ರಾಮದಲ್ಲಿ ದೇವಸ್ಥಾನ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಸಮುದಾಯಗಳ ಮಧ್ಯೆ ನಡೆದ ತಂಟೆಯು, ಶನಿವಾರ ತಡರಾತ್ರಿ ಗಲಭೆ ಸ್ವರೂಪ ಪಡೆದಿದೆ.

ಘಟನೆಯಲ್ಲಿ ವ್ಯಕ್ತಿಯೊಬ್ಬರನ್ನು ಹೊಡೆದು ಕೊಲೆ ಮಾಡಲಾಗಿದೆ. ಇದರಿಂದ ರೊಚ್ಚಿಗೆದ್ದ ಇನ್ನೊಂದು ಸಮುದಾಯದ ಜನ ಹಲವು ವಾಹನ, ಬಣವಿಗಳಿಗೆ ಬೆಂಕಿ ಹಚ್ಚಿದ್ದಾರೆ. ಇಡೀ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ತಡರಾತ್ರಿ 1ರ ಸುಮಾರಿಗೂ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲಿಸರು ಪರದಾಡಿದರು.

ಈ ಗ್ರಾಮದಲ್ಲಿ ಐದು ವರ್ಷಗಳಿಂದ ದೇವಸ್ಥಾನ ಒಂದರ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಸಮುದಾಯಗಳ ಮಧ್ಯೆ ಆಗಾಗ ತಂಟೆ ನಡೆಯುತ್ತಿತ್ತು.

ಶನಿವಾರ ತಡರಾತ್ರಿ ಕಾರು ಪಾರ್ಕಿಂಗ್ ಮಾಡುವ ವಿಷಯಕ್ಕೆ ಇಬ್ಬರ ಮಧ್ಯೆ ಗಲಾಟೆ ಶುರುವಾಯಿತು. ಹೊಡೆದಾಟದಲ್ಲಿ ಗೌಂಡವಾಡ ಗ್ರಾಮದ ಮುಖಂಡ ಸತೀಶ ಪಾಟೀಲ ಅವರನ್ನು ಹತ್ಯೆ ಮಾಡಲಾಯಿತು.

ಇದನ್ನೂ ಓದಿ:

ಇದರಿಂದ ರೊಚ್ಚಿಗೆದ್ದ ವ್ಯಕ್ತಿಯ ಸಮುದಾಯದವರು ಸಿಕ್ಕಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಿದರು.
ಕಾರು, ದ್ವಿಚಕ್ರ ವಾಹನಗಳು ಮತ್ತು ಮೂರು ಹುಲ್ಲಿನ ಬಣವಿ ಸುಟ್ಟುಹೋದವು. ಅಗ್ನಿಶಾಮಕ ದಳ‌ ಸಿಬ್ಬಂದಿ ಬೆಂಕಿ ನಂದಿಸಿದರು.

ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ, ಪಿ.ವಿ. ಸ್ನೇಹಾ, ಗ್ರಾಮೀಣ ಎಸಿಪಿ ಗುಡಾಜಿ ಹಾಗೂ ಕಾಕತಿ ಇನ್ಸ್ಪೆಕ್ಟರ್ ಗುರುನಾಥ ಸೇರಿದಂತೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು.

ತಡರಾತ್ರಿಯೂ ಗ್ರಾಮದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.