ADVERTISEMENT

ಅ‍ಪ್ರಾಪ್ತೆಯರ ಮೇಲೆ ಅತ್ಯಾಚಾರ: ಇಬ್ಬರು ಆರೋಪಿಗಳಿಗೆ 20 ವರ್ಷ ಕಠಿಣ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2024, 14:45 IST
Last Updated 23 ಸೆಪ್ಟೆಂಬರ್ 2024, 14:45 IST
   

ಬೆಳಗಾವಿ: ಅಪ್ರಾಪ್ತೆಯರ ಮೇಲೆ ಅತ್ಯಾಚಾರ ಎಸಗಿದ ಇಬ್ಬರು ಆರೋಪಿಗಳಿಗೆ ಪ್ರತ್ಯೇಕ ಪ್ರಕರಣಗಳಲ್ಲಿ ಇಲ್ಲಿನ ಪೋಕ್ಸೊ ನ್ಯಾಯಾಲಯ, 20 ವರ್ಷ ಕಠಿಣ ಶಿಕ್ಷೆ ಮತ್ತು ತಲಾ ₹10 ಸಾವಿರ ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದೆ.

ರಾಯಬಾಗದ ನಿವಾಸಿಗಳಾದ ಆಶೀಷ್‌ ಧರ್ಮರಾಜ ಕಾಂಬಳೆ(25), ಅರ್ಬಾಜ್‌ ರಸೂಲ್‌ ನಾಲಬಂದ ಶಿಕ್ಷೆಗೆ ಒಳಗಾದವರು.

2016ರ ಡಿ.29ರಂದು ಬಾಲಕಿ ಅಪಹರಿಸಿದ್ದ ಆಶೀಷ್‌, ಮಹಾರಾಷ್ಟ್ರದ ಗಣೇಶವಾಡಿಗೆ ಬೈಕ್‌ನಲ್ಲಿ ಕರೆದೊಯ್ದು ಮನೆಯೊಂದರಲ್ಲಿ ಅತ್ಯಾಚಾರ ಎಸಗಿದ್ದ. ನಂತರ ಚಿಕ್ಕೋಡಿ ತಾಲ್ಲೂಕಿನ ಅಂಕಲಿಯವರೆಗೆ ವಾಪಸ್‌ ತಂದುಬಿಟ್ಟು ಪರಾರಿಯಾಗಿದ್ದ. ಈ ಸಂಬಂಧ ಬಾಲಕಿ ತಂದೆ ರಾಯಬಾಗ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖಾಧಿಕಾರಿ ಬಿ.ಎಸ್‌.ಲೋಕಾಪುರ ಮತ್ತು ಪ್ರೀತಮ್‌ ಶ್ರೇಯಕರ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ADVERTISEMENT

ಮತ್ತೊಂದು ಪ್ರಕರಣದಲ್ಲಿ 2018ರ ಮೇ 29ರಂದು ಅರ್ಬಾಜ್‌ನು ಬಲವಂತವಾಗಿ ಬಾಲಕಿಯನ್ನು ತನ್ನ ಬೈಕ್‌ ಮೇಲೆ ಕೂಡ್ರಿಸಿಕೊಂಡು ಹೋಗಿದ್ದ. ರಾಯಬಾಗ ತಾಲ್ಲೂಕಿನ ದಿಗ್ಗೇವಾಡಿ ಕ್ರಾಸ್‌ ಬಳಿಯ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದ. ಈ ವಿಷಯ ಬಹಿರಂಗಪಡಿಸದಂತೆ ಜೀವ ಬೆದರಿಕೆ ಹಾಕಿದ್ದ. ಬಾಲಕಿ ತಾಯಿ ನೀಡಿದ್ದ ದೂರು ಆಧರಿಸಿ ತನಿಖೆ ಕೈಗೊಂಡ ಮಂಜುನಾಥ ನಡುವಿನಮನಿ ಮತ್ತು ಪ್ರೀತಮ್‌ ಶ್ರೇಯಕರ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಎರಡೂ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಿ.ಎಂ.‍ಪುಷ್ಪಲತಾ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತೀರ್ಪು ಪ್ರಕಟಿಸಿದ್ದಾರೆ. ಇಬ್ಬರೂ ಸಂತ್ರಸ್ತೆಯರೂ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ತಲಾ ₹1 ಲಕ್ಷ ಪರಿಹಾರ ಪಡೆಯುವಂತೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್‌.ವಿ.ಪಾಟೀಲ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.