ಬೆಳಗಾವಿ: ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಗೆ (ಕಾಹೇರ್) ವಿಶ್ವವಿದ್ಯಾಲಯ ಅನುದಾನ ಅಯೋಗದಿಂದ (ಯುಜಿಸಿ) ‘12(ಬಿ)’ ಮಾನ್ಯತೆ ದೊರೆತಿದೆ.
ಕೆಎಲ್‌ಇ ಸ್ವಾಯತ್ತ ವಿಶ್ವವಿದ್ಯಾಲಯದಲ್ಲಿನ ಶೈಕ್ಷಣಿಕ ಸೌಕರ್ಯ, ಎಲ್ಲ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ ಮತ್ತು ಗುಣಮಟ್ಟದ ಶಿಕ್ಷಣ ಪರಿಗಣಿಸಿ ಯುಜಿಸಿ ಈ ಗ್ರಾಂಟ್ ನೀಡಿದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಕೈಗೊಳ್ಳುವ ಯಾವುದೇ ಶೈಕ್ಷಣಿಕ ಹಾಗೂ ಸಂಶೋಧನಾ ಚಟುವಟಿಕೆಗಳಿಗೆ ಈ ಅನುದಾನ ಸಿಗಲಿದೆ.
‘ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ, ಕಾಹೇರ್‌ನ ಕುಲಪತಿಯೂ ಆದ ಪ್ರಭಾಕರ ಕೋರೆ ಅವರ ದೂರದೃಷ್ಟಿ, ಪರಿಶ್ರಮದ ಕಾರಣ ವಿಶ್ವವಿದ್ಯಾಲಯಕ್ಕೆ ಈ ಮಾನ್ಯತೆ ಸಿಕ್ಕಿದೆ. ಸಂಶೋಧನಾ ವಲಯದಲ್ಲಿ ಇನ್ನಷ್ಟು ಉನ್ನತ ಸಾಧನೆ ತೋರಲು ಇದು ಅನುಕೂಲಕರ’ ಎಂದು ಕಾಹೇರ್ ಕುಲಸಚಿವ ಪ್ರೊ.ಎಂ.ಎಸ್. ಗಣಾಚಾರಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈ ಸಾಧನೆಗೆ ಕಾಹೇರ್‌ನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಪರಿಶ್ರಮ ಕಾರಣ. ಅವರ ಸಮರ್ಪಣಾ ಭಾವಕ್ಕೆ ಸಾಕ್ಷಿಯಾಗಿದೆ. ಯುಜಿಸಿಯೊಂದಿಗೆ ಕೆಎಲ್‌ಇ ಸಂಸ್ಥೆಯು ಇನ್ನೊಂದು ಮೈಲುಗಲ್ಲು ಸ್ಥಾಪಿಸಿದೆ’ ಎಂದು ಕಾಹೇರ್ ಕುಲಪತಿ ಪ್ರಭಾಕರ ಕೋರೆ ಮತ್ತು ಉಪಕುಲಪತಿ ಡಾ.ನಿತಿನ್ ಎಂ.ಗಂಗಾನೆ ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.