ADVERTISEMENT

ಉಳವಿ ಚನ್ನಬಸವಣ್ಣನ ಸನ್ನಿಧಿಯತ್ತ ರೈತರು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2024, 3:10 IST
Last Updated 18 ಫೆಬ್ರುವರಿ 2024, 3:10 IST
ಬೈಲಹೊಂಗಲದಿಂದ ಉಳವಿಗೆ ರೈತರು ಚಕ್ಕಡಿಗಳಲ್ಲಿ ಸಾಗುತ್ತಿರುವುದು
ಬೈಲಹೊಂಗಲದಿಂದ ಉಳವಿಗೆ ರೈತರು ಚಕ್ಕಡಿಗಳಲ್ಲಿ ಸಾಗುತ್ತಿರುವುದು   

ಬೈಲಹೊಂಗಲ: ‘ಅಣ್ಣ ಉಳವಿಷನ ಬಣ್ಣದ ತೇರಾ, ನೋಡಲು ಬಲುಜೋರಾ...’

–ಹೀಗೆ ಜೈಕಾರ ಕೂಗುತ್ತ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಉಳವಿಯ ಚನ್ನಬಸವೇಶ್ವರ ದೇವಸ್ಥಾನದತ್ತ ರೈತರು ಸಾಗುತ್ತಿದ್ದಾರೆ. ಫೆ.24ರಂದು ಅಲ್ಲಿ ನಡೆಯಲಿರುವ ಚನ್ನಬಸವೇಶ್ವರರ ಮಹಾರಥೋತ್ಸವದಲ್ಲಿ ಭಾಗವಹಿಸಿ ಸಂಭ್ರಮಿಸಲಿದ್ದಾರೆ.

ಬೈಲಹೊಂಗಲ ಪಟ್ಟಣ ಹಾಗೂ ತಾಲ್ಲೂಕಿನ ರೈತರು ಹಲವು ವರ್ಷಗಳಿಂದಲೂ ಎತ್ತಿನಬಂಡಿಗಳಲ್ಲಿ ಉಳವಿಗೆ ತೆರಳುತ್ತಾರೆ. ಅಂತೆಯೇ, ಈ ವರ್ಷವೂ ‘ಬರ’ದ ಮಧ್ಯೆಯೂ ಹೋಗುತ್ತಿದ್ದಾರೆ. 180ಕ್ಕೂ ಅಧಿಕ ಎತ್ತಿನಬಂಡಿ ಈಗಾಗಲೇ ತಮ್ಮ ಪ್ರಯಾಣ ಆರಂಭಿಸಿವೆ. ನೂರಾರು ಭಕ್ತರು ಪಾದಯಾತ್ರೆ ಮೂಲಕ ಚನ್ನಬಸವೇಶ್ವರ ಸನ್ನಿಧಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಇನ್ನೂ ಟ್ರ್ಯಾಕ್ಟರ್, ದ್ವಿಚಕ್ರ ವಾಹನ ಮತ್ತು ಲಾರಿಗಳಲ್ಲಿ ತೆರಳುತ್ತಿರುವ ಭಕ್ತರಿಗೂ ‘ಬರ’ವಿಲ್ಲ.

ADVERTISEMENT

ಬಣ್ಣಗಳಿಂದ ಚಕ್ಕಡಿಗಳನ್ನು ಅಲಂಕರಿಸಿದ ರೈತರು, ಜೋಡೆತ್ತುಗಳಿಗೆ ಕೋಡಂಚು, ಕೊಲಾರಿ, ಝೋಲಾ ಮತ್ತು ಗೆಜ್ಜೆ ಕಟ್ಟಿ ಸಿಂಗರಿಸಿದ್ದಾರೆ. ಹರ ಹರ ಮಹಾದೇವ, ಉಳವಿ ಚನ್ನಬಸವೇಶ್ವರನಿಗೆ ಜಯ ಎನ್ನುವ ಜೈಕಾರ ಕೂಗುತ್ತ ಮುಂದೆಸಾಗುತ್ತಿದ್ದಾರೆ. ಸಾಲು ಸಾಲಾಗಿ ಹೋಗುವ ಈ ಚಕ್ಕಡಿಗಳ ವೈಭವ ಕಣ್ತುಂಬಿಕೊಳ್ಳುವುದೇ ಹಬ್ಬ.

15 ದಿನ ವಾಸ್ತವ್ಯ: ಸುಮಾರು 300 ಕಿ.ಮೀ ದೂರವನ್ನು ಚಕ್ಕಡಿಯಲ್ಲಿ ಕ್ರಮಿಸುವ ರೈತರು, 15 ದಿನ ಉಳವಿಯ ದಟ್ಟ ಅರಣ್ಯ ಪ್ರದೇಶದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಜಾತ್ರೆಯಲ್ಲಿ ಸಂಭ್ರಮಿಸುತ್ತಾರೆ. ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವ ಚನ್ನಬಸವಣ್ಣನಿಗೆ ಶ್ರದ್ಧೆಯಿಂದ ಪೂಜೆ ಸಲ್ಲಿಸಿ, ವಿವಿಧ ಕಾಣಿಕೆಗಳನ್ನು ಅರ್ಪಿಸಿ ಹರಕೆ ತೀರಿಸುತ್ತಾರೆ. ನಂತರ ಊರಿಗೆ ವಾಪಸಾಗುತ್ತಾರೆ.

ಎಂದಿನಂತೆ ಈ ವರ್ಷವೂ ಬೈಲಹೊಂಗಲದ ಜನರು ಮತ್ತು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಉಳವಿಗೆ ತೆರಳುತ್ತಿದ್ದಾರೆ. ಸುಕ್ಷೇತ್ರ ಉಳವಿಗೂ ಬೈಲಹೊಂಗಲಕ್ಕೂ ಅವಿನಾಭಾವ ಸಂಬಂಧವಿದೆ.
ರಾಜು ಕುಡಸೋಮಣ್ಣವರ, ರೈತ
ಐತಿಹಾಸಿಕ ಹಿನ್ನಲೆವುಳ್ಳ ಉಳವಿ ಶರಣರ ನೆಲೆಬೀಡು. ಚಕ್ಕಡಿಗಳಲ್ಲಿ ಅಲ್ಲಿಗೆ ಹೋಗಿ ಬರುವುದೇ ಸಂಭ್ರಮ –
ಸೋಮನಾಥ ಸೊಪ್ಪಿಮಠ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.