ಬೆಲ್ಲದ ಬಾಗೇವಾಡಿ (ಬೆಳಗಾವಿ ಜಿಲ್ಲೆ): ಉಮೇಶ ಕತ್ತಿ ಅವರ ಅಂತ್ಯಸಂಸ್ಕಾರವನ್ನು ಬುಧವಾರ ಸಂಜೆ 5ರ ಸುಮಾರಿಗೆ ನೆರವೇರಿಸಲು ನಿರ್ಧರಿಸಲಾಗಿತ್ತು. ಆದರೆ ಪಾರ್ಥಿವ ಶರೀರವನ್ನು ಸ್ಥಳಕ್ಕೆ ತಂದಾಗಲೇ ಸಂಜೆ 5 ಗಂಟೆಯಾಯಿತು.
ಬುಧವಾರ ನಸುಕಿನಿಂದಲೇ ಅಪಾರ ಸಂಖ್ಯೆಯ ಜನ ಸ್ಥಳಕ್ಕೆ ಬಂದು ಸೇರಿದ್ದಾರೆ. ಕತ್ತಿ ಅವರ ಪತ್ನಿ, ಮಕ್ಕಳು, ಮೊಮ್ಮಕ್ಕಳಾದಿ ಆಗಿ ಎಲ್ಲರೂ ಸ್ಥಳದಲ್ಲಿ ಕಾದು ಕುಳಿತರು.
ನಾಡಿನ ವಿವಿಧ ಮಠಗಳ 50ಕ್ಕೂ ಹೆಚ್ಚು ಮಠಾಧೀಶರು, ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ಶಾಸಕರು, ವಿವಿಧ ಪಕ್ಷಗಳ ಮುಖಂಡರು ಸಹ ಎರಡು ತಾಸು ಮುಂಚಿತವಾಗಿಯೇ ಬಂದು ಸೇರಿದರು.
ಬೆಳಗಾವಿ ತಾಲ್ಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕೂಡ ಅಪಾರ ಜನ ಸೇರಿದ್ದರಿಂದ, ಅಲ್ಲಿಂದ ಶವ ಹೊರತರುವುದೂ ಕಷ್ಟವಾಯಿತು.
ನಂತರ ಮಾರ್ಗ ಮಧ್ಯದಲ್ಲಿ ಎಲ್ಲ ಗ್ರಾಮಗಳಲ್ಲೂ ಜನ ವಾಹನ ನಿಲ್ಲಿಸಿ ತಮ್ಮ ನೆಚ್ಚಿನ ನಾಯಕನಿಗೆ ಗೌರವ ಸಲ್ಲಿಸಲು ಮುಗಿಬಿದ್ದರು. ಅಂತಿಮವಾಗಿ ಮುಖ ನೋಡಲು ನೂಕಾಡಿದರು. ಇದರಿಂದ ಕಳೇಬರ ಸ್ಥಳ ತಲುಪುವುದು ತೀವ್ರ ವಿಳಂಬವಾಯಿತು.
ಈಗಾಗಲೇ ಅಪಾರ ಸಂಖ್ಯೆಯ ಜನ ಕಿಕ್ಕಿರಿದು ಸೇರಿದ್ದಾರೆ. ಎಲ್ಲರಿಗೂ ಅಂತಿಮ ದರ್ಶನಕ್ಕೆ ಅವಕಾಶ ಮಾಡಿ ಕೊಡುವುದೇ ಸವಾಲಾಗಿದೆ.
ಸ್ಥಳ ಇಕ್ಕಟ್ಟಾಗಿದ್ದರಿಂದ ಕತ್ತಿ ಕುಟುಂಬದವರು, ಮನೆಯ ಕೆಲಸದವರು, ವಿವಿಧೆಡೆಯಿಂದ ಬಂದ ಹಿರಿಯ ನಾಯಕರು ಕೂಡ ನಿಂತುಕೊಂಡು ಕಾಯಬೇಕಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.