ADVERTISEMENT

25ನೇ ವಯಸ್ಸಿಗೆ ವಿಧಾನಸೌಧ ಪ್ರವೇಶ: ಇಲ್ಲಿದೆ ಉಮೇಶ್ ಕತ್ತಿ ನಡೆದುಬಂದ ಹಾದಿ...

3ನೇ ಬಾರಿ ಸಂಭವಿಸಿದ ಹೃದಯಾಘಾತದಲ್ಲಿ ಕತ್ತಿ ನಿಧನ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 9:59 IST
Last Updated 7 ಸೆಪ್ಟೆಂಬರ್ 2022, 9:59 IST
 ಉಮೇಶ್ ಕತ್ತಿ
ಉಮೇಶ್ ಕತ್ತಿ   

ಬೆಳಗಾವಿ: ಉಮೇಶ ಕತ್ತಿ ಅವರು 1985ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಆಗ ಅವರಿಗೆ ಕೇವಲ 25 ವರ್ಷ ವಯಸ್ಸು. ರಾಜ್ಯದ ಅತ್ಯಂತ ಕಿರಿಯ ವಯಸ್ಸಿನ ಶಾಸಕ ಎಂಬ ಅವರ ಕೀರ್ತಿ ಇನ್ನೂ ಹಾಗೇ ಉಳಿದಿದೆ.

ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ 25 ವರ್ಷ ವಯಸ್ಸಾಗಿರಬೇಕು ಎಂಬುದು ನಿಯಮ. ಈ ಹಂತ ತಲುಪಿದ ಕೆಲವೇ ದಿನಗಳಲ್ಲಿ ಉಮೇಶ ಕತ್ತಿ ಅವರಿಗೆ ವಿಧಾನಸೌಧ ಪ್ರವೇಶಿಸುವ ಅವಕಾಶ ಸಿಕ್ಕಿದ್ದು ಈಗ ಇತಿಹಾಸ.

ಅವರ ತಂದೆ ವಿಶ್ವನಾಥ ಕತ್ತಿ 1985ರಲ್ಲಿ ಹೃದಯಾಘಾತದಿಂದ ನಿಧನರಾದರು. ಆಗ ಜನತಾ ಪರಿವಾರದ ಮುಖಂಡರು ಉಮೇಶ ಅವರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದರು.

ADVERTISEMENT

ರಾಜಕಾರಣಿಗೆ ಇರಬೇಕಾದ ಉಡುಪು, ನಡೆ, ನುಡಿಯನ್ನೂ ಹಿರಿಯರು ಅವರಿಗೆ ದಿನೇದಿನೇ ಹೇಳಿಕೊಟ್ಟಿದ್ದರು. ಇಂಥ ವಿಶಿಷ್ಟ ಸಂಗತಿಗಳನ್ನು ಉಮೇಶ ಅವರು ತಮ್ಮ ಗೆಳೆಯರ ಬಳಿ ತಮಾಷೆಯಾಗಿ ಹಂಚಿಕೊಳ್ಳುತ್ತಿದ್ದರು ಎಂದು ಹಿರಿಯರು ನೆನೆದರು.

6 ಪಕ್ಷ, 8 ಗೆಲುವು, 4 ಬಾರಿ ಸಚಿವ:

ಅಲ್ಲಿಂದ ವಿಜಯ ಯಾತ್ರೆ ಆರಂಭಿಸಿದ ಉಮೇಶ ಕತ್ತಿ ತಿರುಗಿ ನೋಡಿದವರಲ್ಲ.

ಹುಕ್ಕೇರಿ ಕ್ಷೇತ್ರದಲ್ಲಿ 9 ಬಾರಿ ಚುನಾವಣೆ ಎದುರಿಸಿದ ಅವರು, 8 ಬಾರಿ ಗೆದ್ದಿದ್ದಾರೆ. ವಿಶೇಷವೆಂದರೆ, ಆರು ಪಕ್ಷಗಳನ್ನು ಅವರು ಬದಲಾಯಿಸಿದರು. ಹೀಗೆ ಯಾವುದೇ ಪಕ್ಷಕ್ಕೆ ಹೋದಾಗಲೂ ತಮ್ಮ ವೈಯಕ್ತಿಕ ವರ್ಚಸ್ಸಿನ ಮೇಲೆಯೇ ಅವರು ಗೆಲುವು ಸಾಧಿಸಿದವರು. ಒಂದು ಅವಧಿಯಲ್ಲಿ ಮಾತ್ರ ಸೋಲು ಕಂಡರು.

ಸಕ್ಕರೆ ಸಚಿವರಾಗಿ ಮೊದಲ ಬಾರಿಗೆ ಖಾತೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಅವರ ನಡೆಗೆ ಹಿರಿಯರು ಬೆರಗಾಗಿದ್ದರು. ನಂತರ ತೋಟಗಾರಿಕೆ ಮತ್ತು ಬಂದಿಖಾನೆ, ಲೋಕೋಪಯೋಗಿ, ಕೃಷಿ, ಆಹಾರ ಮತ್ತು ನಾಗರಿಕ ಸರಬರಾಜು, ಅರಣ್ಯ ಹೀಗೆ ವಿವಿಧ ದೊಡ್ಡ ಖಾತೆಗಳನ್ನು ಅವರು ನಿಭಾಯಿಸಿದ್ದಾರೆ.

55 ವಯಸ್ಸು ದಾಟುವ ಮುನ್ನವೇ ತಂದೆ, ತಾತ ಕೂಡ ಸಾವು:

ಉಮೇಶ ಕತ್ತಿ ಅವರ ತಂದೆ ವಿಶ್ವನಾಥ ಅವರು ತಮ್ಮ 54ನೇ ವಯಸ್ಸಿನಲ್ಲಿಯೇ ಹೃದಯಾಘಾತದಿಂದ ನಿಧನರಾದರು. ಆಗ ಅವರೂ ಶಾಸಕರಾಗಿದ್ದರು. ಉಮೇಶ ಅಜ್ಜ ಮಲ್ಲಪ್ಪ ಅವರೂ 53ನೇ ವಯಸ್ಸಿನಲ್ಲಿ ಹೃದಯಾಘಾತದಿಂದಲೇ ಕೊನೆಯುಸಿರೆಳೆದರು ಎಂಬುದು ಅವರ ಆಪ್ತರ ಮಾಹಿತಿ.

ಕತ್ತಿ ಅವರ ಕುಟುಂಬದ ಹಿರಿಯರಲ್ಲಿ ಹಲವರು 55ನೇ ವಯಸ್ಸಿನೊಳಗೇ ನಿಧನರಾಗಿದ್ದಾರೆ ಎನ್ನುತ್ತಾರೆ ಅವರ ಓರಿಗೆಯವರು.

ಅವರ ಇಬ್ಬರು ಪುತ್ರರು, ಒಬ್ಬ ಪುತ್ರಿಯಲ್ಲಿ ರಾಹುಲ್ ಎಂಬ ಒಬ್ಬ ಪುತ್ರ ಬಾಲ್ಯದಲ್ಲೇ ಕಾಯಿಲೆಯಿಂದ ನಿಧನರಾಗಿದ್ದಾರೆ. ಅಮೆರಿಕದಲ್ಲಿ ಚಿಕಿತ್ಸೆಗೆ ದಾಖಲಿಸಿದ ಸಂದರ್ಭದಲ್ಲಿ ಅವರು ನಿಧನರಾಗಿದ್ದಾರೆ.

ಉಮೇಶ ಕತ್ತಿ ಹಾಗೂ ಅವರ ಕಿರಿಯ ಸಹೋದರ ರಮೇಶ ಕತ್ತಿ 60 ವಯಸ್ಸು ದಾಟಿದವರು. ಹೀಗಾಗಿ ಉಮೇಶ ಅವರ 60ನೇ ಜನ್ಮದಿನದ ಅಂಗವಾಗಿ ಹುಕ್ಕೇರಿಯಲ್ಲಿ ಅವರ ಅಭಿಮಾನಿಗಳು ಅದ್ದೂರಿಯಾಗಿ "ಷಷ್ಟ್ಯಬ್ದಿ" ಕಾರ್ಯಕ್ರಮ ಮಾಡಿದ್ದರು.

ಮೂರನೇ ಬಾರಿಗೆ ಹೃದಯಾಘಾತ:

ಉಮೇಶ ಕತ್ತಿ ಅವರಿಗೆ ಹೃದಯಾಘಾತ ಇದೇ ಮೊದಲಲ್ಲ. ಈಗಾಗಲೇ ಅವರಿಗೆ ಎರಡು ಬಾರಿ ಹೃದಯಾಘಾತವಾಗಿತ್ತು. ಹೃದಯ ಸ್ಟಂಟ್ ಕೂಡ ಅಳವಡಿಸಲಾಗಿತ್ತು.

1997ರಲ್ಲಿ ಮೊದಲಬಾರಿಗೆ ಹೃದಯಾಘಾತ ಆಗಿತ್ತು. 2014ರಲ್ಲಿ ಎರಡನೇ ಬಾರಿಗೆ ಸಂಭವಿಸಿತ್ತು. ಒಮ್ಮೆ ಬೆಳಗಾವಿಯ ಕೆಎಲ್ಇಎಸ್ ಆಸ್ಪತ್ರೆಯಲ್ಲಿ ಮತ್ತೊಮ್ಮೆ ಚೆನ್ನೈ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಮಂಗಳವಾರ ರಾತ್ರಿ ಮೂರನೇ ಬಾರಿಗೆ ಆಘಾತವಾಗಿ ಅವರು ಉಸಿರು ನಿಂತಿತು.

ಇವನ್ನೂ ಓದಿ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.