ADVERTISEMENT

​ಬೆಳಗಾವಿ: ಇನ್ನೂ ಪೂರೈಕೆಯಾಗದ ಸಮವಸ್ತ್ರ

3.10 ಲಕ್ಷ ವಿದ್ಯಾರ್ಥಿಗಳಿಗೆ ಸಿಗಬೇಕಿದೆ ಬಟ್ಟೆ, ಐದು ವಲಯಗಳಲ್ಲಷ್ಟೇ ವಿತರಣೆ

ಇಮಾಮ್‌ಹುಸೇನ್‌ ಗೂಡುನವರ
Published 16 ಜೂನ್ 2024, 13:21 IST
Last Updated 16 ಜೂನ್ 2024, 13:21 IST
ಮೋಹನಕುಮಾರ್ ಹಂಚಾಟೆ
ಮೋಹನಕುಮಾರ್ ಹಂಚಾಟೆ   

​ಬೆಳಗಾವಿ: 2024-25ನೇ ಸಾಲಿನ ತರಗತಿ ಆರಂಭವಾಗಿ ಮೂರು ವಾರವಾದರೂ, ಇನ್ನೂ ಹಲವು ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಮವಸ್ತ್ರದ ಬಟ್ಟೆ ವಿತರಣೆಯಾಗಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಹಳೇ ಸಮವಸ್ತ್ರದಲ್ಲೇ ಶಾಲೆಯತ್ತ ಹೆಜ್ಜೆ ಹಾಕುವುದು ಅನಿವಾರ್ಯವಾಗಿದೆ.

ಪ್ರತಿವರ್ಷ ಶಾಲಾ ಆರಂಭೋತ್ಸವ ದಿನವೇ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಕ್ಕಳಿಗೆ ಸಮವಸ್ತ್ರದ ಬಟ್ಟೆ ನೀಡಲಾಗುತ್ತಿತ್ತು. 8ರಿಂದ 10ನೇ ತರಗತಿ ವಿದ್ಯಾರ್ಥಿನಿಯರಿಗೆ ಚೂಡಿದಾರ್‌ ಬಟ್ಟೆ ಕೊಡಲಾಗುತ್ತಿತ್ತು. ಈ ವರ್ಷದಿಂದ ತಮಗೂ ಚೂಡಿದಾರ್‌ ಬಟ್ಟೆ ಸಿಗುತ್ತದೆ ಎಂದು 6 ಮತ್ತು 7ನೇ ತರಗತಿ ವಿದ್ಯಾರ್ಥಿನಿಯರೂ ಸಂತಸಗೊಂಡಿದ್ದರು. ಮಹಾರಾಷ್ಟ್ರದ ಗುತ್ತಿಗೆದಾರರು ಬಟ್ಟೆ ಪೂರೈಕೆಯ ಗುತ್ತಿಗೆ ಪಡೆದಿದ್ದರು. ಆದರೆ, ವಿವಿಧ ಕಾರಣಗಳಿಂದ ವಿತರಣೆ ವಿಳಂಬವಾಗಿರುವುದು ವಿದ್ಯಾರ್ಥಿಗಳ ನಿರಾಸೆಗೆ ಕಾರಣವಾಗಿದೆ.

ಐದು ವಲಯಗಳಲ್ಲಷ್ಟೇ ವಿತರಣೆ:

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಏಳು ವಲಯಗಳಿವೆ. ಇಲ್ಲಿ 1,96,292 ವಿದ್ಯಾರ್ಥಿಗಳಿಗೆ ಎರಡು ಜತೆ ಬಟ್ಟೆ ಸಮವಸ್ತ್ರದ ಬಟ್ಟೆ ಪೂರೈಕೆಗೆ ಬೇಡಿಕೆ ಸಲ್ಲಿಸಲಾಗಿತ್ತು. ಈ ಪೈಕಿ 58,851 ವಿದ್ಯಾರ್ಥಿಗಳಿಗೆ ವಿತರಣೆಯಾಗಿದೆ. ಬೆಳಗಾವಿ ನಗರ ವಲಯದಲ್ಲಿ ಎರಡೂ ಜತೆ ಸಮವಸ್ತ್ರ ನೀಡಲಾಗಿದ್ದರೆ, ಬೆಳಗಾವಿ ಗ್ರಾಮೀಣ ವಲಯದಲ್ಲಿ ಮೊದಲ ಜತೆ ಸಮವಸ್ತ್ರವಷ್ಟೇ ಕೊಡಲಾಗಿದೆ.

ADVERTISEMENT

ಎಂಟು ವಲಯಗಳನ್ನು ಒಳಗೊಂಡಿರುವ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 2,51,742 ವಿದ್ಯಾರ್ಥಿಗಳಿಗೆ ಸಮವಸ್ತ್ರದ ಬೇಡಿಕೆ ಸಲ್ಲಿಸಲಾಗಿತ್ತು. ಈ ಪೈಕಿ 78,816 ಮಕ್ಕಳಿಗೆ ವಿತರಿಸಲಾಗಿದೆ. ನಿಪ್ಪಾಣಿ, ಕಾಗವಾಡ ವಲಯಗಳಲ್ಲಿ ಎರಡೂ ಜತೆ ಸಮವಸ್ತ್ರ ನೀಡಲಾಗಿದ್ದರೆ, ಚಿಕ್ಕೋಡಿ ವಲಯದಲ್ಲಿ ಒಂದು ಜತೆ ಮಾತ್ರ ನೀಡಲಾಗಿದೆ.

ಬೇಗ ವಿತರಿಸಿದರೆ ಅನುಕೂಲವಾಗುತ್ತದೆ: ‘ನಾನು 6ನೇ ತರಗತಿಯಲ್ಲಿ ಓದುತ್ತಿದ್ದೇನೆ. ಈ ಸಲ ಚೂಡಿದಾರ್‌ ಸಮವಸ್ತ್ರ ನೀಡುತ್ತಾರೆ. ಮೊದಲ ದಿನವೇ ಕೊಟ್ಟರೆ ಬೇಗ ಹೊಲಿಸಿಕೊಂಡು, ಹೊಸ ದಿರಿಸಿನಲ್ಲಿ ಶಾಲೆಗೆ ಹೋಗಬೇಕೆಂದು ಯೋಜಿಸಿದ್ದೆ. ಆದರೆ, ತಡವಾಗಿದ್ದು ಬೇಸರ ತರಿಸಿದೆ. ಇನ್ನಾದರೂ ಬೇಗ ವಿತರಿಸಿದರೆ ಅನುಕೂಲವಾಗುತ್ತದೆ’ ಎಂದು ರಾಮದುರ್ಗ ವಲಯದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯೊಬ್ಬರು ಹೇಳಿದರು.

ಪೂರೈಕೆ ಅನುಸಾರ ಹಂತ–ಹಂತವಾಗಿ ಮಕ್ಕಳಿಗೆ ಸಮವಸ್ತ್ರ ವಿತರಿಸುತ್ತಿದ್ದೇವೆ. ವಾರದೊಳಗೆ ಎಲ್ಲ ಮಕ್ಕಳಿಗೂ ತಲುಪಿಸಲು ಕ್ರಮ ವಹಿಸುತ್ತೇವೆ
–ಮೋಹನಕುಮಾರ್‌ ಹಂಚಾಟೆ ಡಿಡಿಪಿಐ ಚಿಕ್ಕೋಡಿ

ಅಂಕಿ–ಸಂಖ್ಯೆ ಸಮವಸ್ತ್ರ ವಿತರಣೆ ವಿವರ ಬೆಳಗಾವಿ ಜಿಲ್ಲೆ

448034- ಸರ್ಕಾರಿ ಶಾಲೆಗಳ ಒಟ್ಟು ವಿದ್ಯಾರ್ಥಿಗಳು

137667 -ಈವರೆಗೆ ಸಮವಸ್ತ್ರ ಪಡೆದವರು

310367-ಬಾಕಿ ಉಳಿದ ವಿದ್ಯಾರ್ಥಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.