ADVERTISEMENT

ಬಿಜೆಪಿ ಗೆದ್ದರೆ ಏಕರೂಪದ ಕಾನೂನು: ಶೆಟ್ಟರ್‌

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 16:15 IST
Last Updated 13 ಏಪ್ರಿಲ್ 2024, 16:15 IST
ಬೆಳಗಾವಿ ಬಳಿಯ ಹಿಂಡಲಗಾದಲ್ಲಿ ಶನಿವಾರ ನಡೆದ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಸಮಾವೇಶದಲ್ಲಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಮಾತನಾಡಿದರು
ಬೆಳಗಾವಿ ಬಳಿಯ ಹಿಂಡಲಗಾದಲ್ಲಿ ಶನಿವಾರ ನಡೆದ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಸಮಾವೇಶದಲ್ಲಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಮಾತನಾಡಿದರು   

ಬೆಳಗಾವಿ: ‘ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾದರೆ ಪಾಕ್‌ ಆಕ್ರಮಿತ ಕಾಶ್ಮೀರ ವಾಪಸ್‌ ಪಡೆಯುತ್ತಾರೆ. ದೇಶದಲ್ಲಿ ಏಕರೂಪದ ನಾಗರಿಕ ಕಾನೂನು ಜಾರಿಗೆ ತರುತ್ತಾರೆ. ಹೀಗಾಗಿ ಜನರು ಬಿಜೆಪಿಗೆ ಮತ ನೀಡಿ 400 ಸೀಟುಗಳನ್ನು ಗೆಲ್ಲಿಸುವ ಸಂಕಲ್ಪ ಮಾಡಿದ್ದಾರೆ’ ಎಂದು ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಹೇಳಿದರು.

ಸಮೀಪದ ಹಿಂಡಲಗಾ ಗ್ರಾಮದಲ್ಲಿ ಶನಿವಾರ ನಡೆದ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬೂತ್‌ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಈಗ ಮೋದಿ ಅವರ ಬಿರುಗಾಳಿಯೇ ಬೀಸುತ್ತಿದೆ. ಕಾಂಗ್ರೆಸ್‌ನ ಬೆಲೆ ದಿನದಿಂದ ದಿನಕ್ಕೆ ಪಾತಾಳ ಸೇರುತ್ತಿದೆ. ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲೇ ಇಷ್ಟು ದೊಡ್ಡ ಸಂಖ್ಯೆಯ ಜನ ಸೇರಿದ್ದು ನಮ್ಮ ಗೆಲುವಿನ ಮುನ್ಸೂಚನೆ’ ಎಂದರು.

ಶಾಸಕ ರಮೇಶ ಜಾರಕಿಹೊಳಿ‌ ಮಾತನಾಡಿ, ‘ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಎಲ್ಲ ನಾಯಕರೂ ಒಗ್ಗಟ್ಟಿನಿಂದ ನಿಂತಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಗೆ 25 ಸಾವಿರ ಮತಗಳ ಮುನ್ನಡೆ ಸಿಗಲಿದೆ. ಶೆಟ್ಟರ್‌ ಅವರು 2.5 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಸೇರಿಸಿ ತ್ರಿವಳಿ ನಗರಗಳ ಅಭಿವೃದ್ಧಿ ಮಾಡುತ್ತೇವೆ. ಬೆಂಗಳೂರು– ಚೆನ್ನೈ ಮಾದರಿಯ ಕೈಗಾರಿಕಾ ಕಾರಿಡಾರ್‌ ಈ ಮಾರ್ಗದಲ್ಲಿ ನಿರ್ಮಿಸುವ ಉದ್ದೇಶವಿದೆ. ಪಶ್ಚಿಮ ಭಾಗದ ಮರಾಠಿ ಪ್ರದೇಶದ ಜನರಿಗೆ ನೀರಾವರಿ ಸೌಕರ್ಯ ಒದಗಿಸಲು ಮಹಾರಾಷ್ಟ್ರದೊಂದಿಗೆ ಸೇರಿ ಯೋಜನೆ ರೂಪಿಸುತ್ತೇವೆ’ ಎಂದರು.

ಬಿಜೆಪಿ ಲೋಕಸಭಾ ಕ್ಷೇತ್ರದ ಉಸ್ತುವಾರಿ ಸಂಜಯ ಪಾಟೀಲ, ರಾಜ್ಯ ಘಟಕದ ಉಪಾಧ್ಯಕ್ಷ ಅನಿಲ ಬೆನಕೆ, ಸಂಸದೆ ಮಂಗಲಾ ಅಂಗಡಿ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಮಾತನಾಡಿದರು. ಜಿಲ್ಲಾ ಘಟಕದ ಅಧ್ಯಕ್ಷ ಸುಭಾಸ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಅಧ್ಯಕ್ಷ ಧನಂಜಯ ಜಾಧವ, ಪ್ರಮುಖರಾದ ನಾಗೇಶ ಮನ್ನೋಳಕರ, ಶಂಕರಗೌಡ ಪಾಟೀಲ, ರಾಮಚಂದ್ರ ಮನ್ನೋಳಕರ, ವಿನಯ ಕದಮ್‌, ಭಾಗ್ಯಶ್ರೀ ಕೊರತಕರ, ಸ್ನೇಹಲ್‌ ಕೋಳೆಕರ, ಚಿಕ್ಕರೇವಣ್ಣ ಹಾಗೂ ಅಪಾರ ಕಾರ್ಯಕರ್ತರು ಸೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.