ADVERTISEMENT

ಬೆಳಗಾವಿ: ಕಣಬರ್ಗಿ ಕೆರೆಯಲ್ಲಿ ಬಳಕೆಯಾಗದ ಸೌಕರ್ಯ

ಸ್ಮಾರ್ಟ್‌ಸಿಟಿ ಯೋಜನೆಯಡಿ ಮಾದರಿಯಾಗಿ ಅಭಿವೃದ್ಧಿ, ಇನ್ನೂ ಆರಂಭವಾಗದ ತಿನಿಸು ಅಂಗಡಿಗಳು

ಇಮಾಮ್‌ಹುಸೇನ್‌ ಗೂಡುನವರ
Published 30 ಮೇ 2024, 3:59 IST
Last Updated 30 ಮೇ 2024, 3:59 IST
ಬೆಳಗಾವಿ ಹೊರವಲಯದ ಕಣಬರ್ಗಿಯಲ್ಲಿರುವ ಕೆರೆಯ ನೋಟ– ಪ್ರಜಾವಾಣಿ ಚಿತ್ರ:ಏಕನಾಥ ಅಗಸಿಮನಿ
ಬೆಳಗಾವಿ ಹೊರವಲಯದ ಕಣಬರ್ಗಿಯಲ್ಲಿರುವ ಕೆರೆಯ ನೋಟ– ಪ್ರಜಾವಾಣಿ ಚಿತ್ರ:ಏಕನಾಥ ಅಗಸಿಮನಿ   

ಬೆಳಗಾವಿ: ನಗರ ಹೊರವಲಯದ ಕಣಬರ್ಗಿಯಲ್ಲಿರುವ ಕೆರೆಯನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ಮಾದರಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಪಕ್ಷಿಗಳ ಪರಿವೀಕ್ಷಣಾ ಗ್ಯಾಲರಿ, ಬಯಲು ರಂಗಮಂದಿರ, ವ್ಯಾಯಾಮ ಶಾಲೆ, ತಿನಿಸುಗಳ ಅಂಗಡಿ ಮತ್ತಿತರ ಸೌಕರ್ಯ ಇಲ್ಲಿವೆ. ಆದರೆ, ಮಹಾನಗರ ಪಾಲಿಕೆ ನಿರ್ಲಕ್ಷ್ಯದಿಂದ ಹಲವು ಸೌಕರ್ಯ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ.

ಒಂದು ಕಾಲಕ್ಕೆ ಕನಿಷ್ಠ ಮೂಲಸೌಕರ್ಯವೂ ಇಲ್ಲದೆ ಕಳೆಗುಂದಿದ್ದ ಕಣಬರ್ಗಿ ಕೆರೆಯಂಗಳ ಇಂದು ಕಣ್ಮನ ಸೆಳೆಯುತ್ತಿದೆ. ಆದರೆ, ಬೆಳಗಾವಿ–ಗೋಕಾಕ ಮಾರ್ಗದಲ್ಲಿ ಸಂಚರಿಸುವ ಹಲವರು ಇಲ್ಲಿಯೇ ತ್ಯಾಜ್ಯ ಪದಾರ್ಥ ಎಸೆದು ಹೋಗುತ್ತಿರುವುದರಿಂದ ಕೆರೆಯ ಪರಿಸರ ಮತ್ತೆ ಅಂದಗೆಡುತ್ತಿದೆ. ಕೆಲವೆಡೆ ದುರ್ನಾತ ಬೀರುತ್ತಿದೆ.

ಎರಡು ವರ್ಷಗಳ ಹಿಂದೆ ಹಸ್ತಾಂತರ: 7.4 ಎಕರೆ ಪ್ರದೇಶದಲ್ಲಿರುವ ಕೆರೆಯನ್ನು ₹4.37 ಕೋಟಿ ವೆಚ್ಚದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯವರು ಅಭಿವೃದ್ಧಿಪಡಿಸಿದ್ದರು. ನಿರ್ವಹಣೆಗಾಗಿ 2022ರ ಮೇ 17ರಂದು ಮಹಾನಗರ ಪಾಲಿಕೆಗೆ ಇದನ್ನು ಹಸ್ತಾಂತರಿಸಿದ್ದರು. ಆದರೆ, ಇಲ್ಲಿರುವ ತಿನಿಸುಗಳ ನಾಲ್ಕು ಅಂಗಡಿ ಇನ್ನೂ ಆರಂಭವಾಗಿಲ್ಲ. ಗುತ್ತಿಗೆಗೆ ನೀಡಲು ಬೆಳಗಾವಿ ಸ್ಮಾರ್ಟ್‌ ಸಿಟಿ ಅಭಿವೃದ್ಧಿ ಸಮಿತಿಯಿಂದ ಒಂದು ಬಾರಿ ಟೆಂಡರ್‌ ಕರೆದಿದ್ದರೂ, ಯಾರೂ ಪಾಲ್ಗೊಂಡಿಲ್ಲ.

ADVERTISEMENT

ವಾಯುವಿಹಾರಿಗಳ ತಾಣ: ವಾಯುವಿಹಾರಿಗಳ ಪಾಲಿಗೆ ಈ ಕೆರೆಯಂಗಳ ನೆಚ್ಚಿನ ತಾಣವಾಗಿದೆ. ಕಣಬರ್ಗಿ, ರಾಮತೀರ್ಥ ನಗರ, ಆಟೋ ನಗರದ ನೂರಾರು ನಿವಾಸಿಗಳು ವಾಯುವಿಹಾರಕ್ಕಾಗಿ ಪ್ರತಿದಿನ ಮುಂಜಾವಿನಲ್ಲಿ ಮತ್ತು ಇಳಿಹೊತ್ತಿನಲ್ಲಿ ಇಲ್ಲಿಗೆ ಆಗಮಿಸುತ್ತಾರೆ. ಮಕ್ಕಳು ಆಟವಾಡುತ್ತಾರೆ. ಮಕ್ಕಳೊಂದಿಗೆ ಯುವಕ–ಯುವತಿಯರು, ಮಹಿಳೆಯರು ವ್ಯಾಯಾಮ ಮಾಡುತ್ತಾರೆ. ಕೆರೆಯ ಒಂದು ಬದಿಗೆ ಜಾನುವಾರುಗಳಿಗೆ ನೀರು ಕುಡಿಸಲು ವ್ಯವಸ್ಥೆ ಮಾಡಲಾಗಿದೆ.

ಆದರೆ, ತಿನಿಸುಗಳ ಅಂಗಡಿ ಆರಂಭವಾಗದಿರುವುದು ಮತ್ತು ತ್ಯಾಜ್ಯ ಪದಾರ್ಥಗಳು ಬೀಳುತ್ತಿರುವ ಕಡೆ ದುರ್ನಾತ ಬೀರುವುದನ್ನು ತಡೆಯುವಲ್ಲಿ ಅಧಿಕಾರಿಗಳು ವಿಫಲವಾಗಿರುವುದು ಅವರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಳಗಾವಿಯ ಕಣಬರ್ಗಿಯ ಕೆರೆ ಆವರಣದಲ್ಲಿರುವ ತಿನಿಸುಗಳ ಅಂಗಡಿಗಳು ಮುಚ್ಚಿರುವುದು– ಪ್ರಜಾವಾಣಿ ಚಿತ್ರ:ಏಕನಾಥ ಅಗಸಿಮನಿ

ಈ ಹಿಂದೆ ಕಣಬರ್ಗಿ ಕೆರೆ ಸ್ಥಿತಿ ಹೇಳಿಕೊಳ್ಳುವಂತಿರಲಿಲ್ಲ. ಈಗ ಸಾಕಷ್ಟು ಸುಧಾರಣೆಯಾಗಿದೆ. ಆದರೆ ಜನರು ತ್ಯಾಜ್ಯ ಪದಾರ್ಥ ಕೆರೆಗೆ ಎಸೆಯದಂತೆ ತಡೆಯಬೇಕು. ರಾತ್ರಿ ಯಾರೂ ಅಕ್ರಮವಾಗಿ ಇಲ್ಲಿ ಪ್ರವೇಶಿಸದಂತೆ ತಡೆಯಬೇಕು

-ವಿನೋದ ಭಜಂತ್ರಿ ಸ್ಥಳೀಯ

ಈಗಿರುವ ಅಲಂಕಾರಿಕ ವಿದ್ಯುತ್‌ ದೀಪಗಳು ಕಡಿಮೆ ಎತ್ತರದಲ್ಲಿರುವ ಕಾರಣ ಕಿಡಿಗೇಡಿಗಳು ಕಲ್ಲು ಎಸೆದು ಒಡೆಯುತ್ತಿದ್ದಾರೆ. ಹಾಗಾಗಿ 9 ಮೀಟರ್‌ ಎತ್ತರದ ವಿದ್ಯುತ್‌ ಕಂಬ ಅಳವಡಿಸುವ ಕಾಮಗಾರಿಗೆ ಮಂಜೂರಾತಿ ಸಿಕ್ಕಿದೆ. ಶೀಘ್ರ ಕಾಮಗಾರಿ ಆರಂಭವಾಗಲಿದೆ

-ಹನುಮಂತ ಕೊಂಗಾಲಿ ಪಾಲಿಕೆ ಸದಸ್ಯ

ಲೋಕಸಭೆ ಚುನಾವಣೆ ನೀತಿಸಂಹಿತೆ ತೆರವಾಗುತ್ತಿದ್ದಂತೆ ಕಣಬರ್ಗಿ ಕೆರೆಯಲ್ಲಿನ ತಿನಿಸುಗಳ ಅಂಗಡಿಗಳನ್ನು ಗುತ್ತಿಗೆಗೆ ನೀಡಲು ಟೆಂಡರ್‌ ಕರೆಯುತ್ತೇವೆ. ಕೆರೆಯ ಸೌಂದರ್ಯೀಕರಣ ಕಾಪಾಡಲು ಕ್ರಮ ಕೈಗೊಳ್ಳುತ್ತೇವೆ

-ಪಿ.ಎನ್‌.ಲೋಕೇಶ ಆಯುಕ್ತ ಮಹಾನಗರ ಪಾಲಿಕೆ

ಮೋಜು–ಮಸ್ತಿ ಮಾಡುತ್ತಿದ್ದಾರೆ: ಆರೋಪ

‘ರಾತ್ರಿಯಾಗುತ್ತಿದ್ದಂತೆ ಕಿಡಿಗೇಡಿಗಳು ಕೆರೆ ಆವರಣ ಪ್ರವೇಶಿಸುತ್ತಿದ್ದಾರೆ. ಇಲ್ಲಿಯೇ ಮೋಜು–ಮಸ್ತಿ ಮಾಡುತ್ತಿದ್ದಾರೆ. ಅಲಂಕಾರಿಕ ವಿದ್ಯುತ್‌ ದೀಪಗಳನ್ನು ಒಡೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಸರ್ಕಾರಿ ಆಸ್ತಿ ಹಾನಿ ಮಾಡುವವರ ವಿರುದ್ಧ ಕ್ರಮವಾಗಬೇಕು’ ಎಂಬ ಒತ್ತಾಯ ಜನರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.