ಕೌಜಲಗಿ: ಬ್ರಿಟಿಷರ ವಿರುದ್ಧ ಸಿಡಿದೆದ್ದ ಅಪ್ಪಟ ದೇಶಪ್ರೇಮಿ ಸಂಗೊಳ್ಳಿ ರಾಯಣ್ಣನಿಗೆ ಗೌರವ ಸಮರ್ಪಿಸುವ ನಿಟ್ಟಿನಲ್ಲಿ ಪಟ್ಟಣದಲ್ಲಿ ರಾಯಣ್ಣನ ಭವ್ಯ ಕಂಚಿನ ಮೂರ್ತಿ, ಕಲ್ಲಿನ ಕೋಟೆ ನಿರ್ಮಾಣವಾಗಿದ್ದು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾಪನ ಸಮಿತಿಯ ಕನಸು ನನಸಾಗಿದೆ.
ಗೋಡಚಿನ ಮಲ್ಕಿ– ಬಾದಾಮಿ ಮತ್ತು ಜಾಂಬೋಟಿ –ರಬಕವಿ ಸಂಗಮ ಸ್ಥಳವಾದ ರಾಜ್ಯ ಹೆದ್ದಾರಿಯ ಪಕ್ಕ ಇರುವ ಪಿಕೆಪಿಎಸ್ ಕಟ್ಟಡದ ಬಳಿ ₹70 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ರಾಯಣ್ಣ ಮೂರ್ತಿ ಹಾಗೂ ಕೋಟೆ ಆ.26ರಂದು ಮುಖ್ಯಮಂತ್ರಿ ಅವರಿಂದ ಅನಾವರಣಗೊಳ್ಳಲಿದೆ.
ರಾಯಣ್ಣನ ಕಂಚಿನ ಮೂರ್ತಿ ಬಿಡದಿ- ರಾಮನಗರದ ಬಿ.ವಿಜಯಾಜಿ ಅವರ ಹಸ್ತದಿಂದ ನಿರ್ಮಾಣಗೊಂಡಿದೆ. ಸುತ್ತಲಿನ ಕಲ್ಲಿನ ಕೋಟೆಯನ್ನು ಉಪ್ಪಾರಟ್ಟಿಯ ಹನುಮಂತ ಆಡಿನ ನಿರ್ಮಿಸಿದ್ದಾರೆ. ಸುತ್ತಲೂ ಕಲ್ಲಿನ ಆವರಣವನ್ನು ಕೊಣ್ಣೂರಿನ ಯಲ್ಲಪ್ಪ ಗಾಡಿವಡ್ಡರ ಕಟ್ಟಿದ್ದಾರೆ. ಕಲ್ಲಿನ ಕೋಟೆಯ ಬುರ್ಜುಗಳಲ್ಲಿ ರಾಜಸ್ಥಾನದಿಂದ ಎರಡು ತೋಪುಗಳನ್ನು ಧರಿಸಿ ಸ್ಥಾಪಿಸಲಾಗಿದೆ. ಒಡಿಶಾದ ಶಿಲ್ಪಿ ಸಂತೋಷ ಅವರು 2 ಆನೆ, 2 ಟಗರು, ಮತ್ತು ಜಯ ವಿಜಯರೆಂಬ ಇಬ್ಬರ ದ್ವಾರಪಾಲಕರನ್ನು ನಿರ್ಮಿಸಿದ್ದಾರೆ. ಕಲ್ಲಿನ ಕೋಟೆಯ ಈಶಾನ್ಯ ಭಾಗದಲ್ಲಿ ನೀರಿನ ಕಾರಂಜಿಯನ್ನು ರೂಪಿಸಲಾಗಿದೆ. ಮೂರ್ತಿ ಹಿಂದೆ ರಾಯಣ್ಣ ವನ ನಿರ್ಮಿಸಲಾಗಿದ್ದು, ರಾಯಣ್ಣನ ಚರಿತೆ ಸಾರುವ ಬರವಣಿಗೆ ಅಲ್ಲಿವೆ.
‘ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸೂಕ್ತ ಮಾರ್ಗದರ್ಶನದಲ್ಲಿ, ಕೌಜಲಗಿ ವಿಠ್ಠಲ ದೇವರ ದೇವಸ್ಥಾನದ ದೇವರ್ಷಿ ವಿಠ್ಠಲ ಅಜ್ಜನವರು ಹಾಗೂ ಬಾಗೋಜಿಕೊಪ್ಪದ ಮುರುಘ ರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾದದೊಂದಿಗೆ ನಿರ್ಮಾಣಗೊಂಡಿದೆ’ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾಪನ ಸಮಿತಿಯ ಅಧ್ಯಕ್ಷ ರಾಜೇಂದ್ರ ಸಣ್ಣಕ್ಕಿ ತಿಳಿಸಿದರು.
ಸಮಿತಿಯ ಸರ್ವ ಸದಸ್ಯರು ಗ್ರಾಮಸ್ಥರು ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ರಾಯಣ್ಣನ ಮೂರ್ತಿ ಕಲ್ಲಿನ ಕೋಟೆಯನ್ನು ನಿರ್ಮಿಸಲಾಗಿದೆ–ರಾಜೇಂದ್ರ ಸಣ್ಣಕ್ಕಿ ಅಧ್ಯಕ್ಷ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾಪನ ಸಮಿತಿ ಕೌಜಲಗಿ
ಮೂರ್ತಿ ಅನಾವರಣ ನಾಳೆ
ಕೌಜಲಗಿ: ಪಟ್ಟಣದ ಪಿಕೆಪಿಎಸ್ ಕಟ್ಟಡದ ಹತ್ತಿರ ನಿರ್ಮಾಣಗೊಂಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಂಚಿನ ಮೂರ್ತಿ ಹಾಗೂ ಕಲ್ಲಿನ ಕೋಟೆ ಆ.26ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಲಿದ್ದಾರೆ. ಗೋಕಾಕ ತಾಲ್ಲೂಕಿನ ಕಳ್ಳಿಗುದ್ದಿ ಗ್ರಾಮದಲ್ಲಿ ಮೂಡಲಗಿ ತಾಲ್ಲೂಕಿನ ಯಾದವಾಡ ಗ್ರಾಮದಲ್ಲಿ ನಿರ್ಮಾಣವಾದ ಕಂಚಿನ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನೂ ಮುಖ್ಯಮಂತ್ರಿಗಳು ಅನಾವರಣಗೊಳಿಸಲಿದ್ದಾರೆ. ಮೂಡಲಗಿ ತಾಲ್ಲೂಕಿನ ಕಲ್ಲೋಳಿಯಲ್ಲಿ ನಿರ್ಮಾಣವಾದ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಮಾಲಾರ್ಪಣೆ ಮಾಡಲಿದ್ದಾರೆ. ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ವಹಿಸಲಿದ್ದು ಜಿಲ್ಲೆಯ ಶಾಸಕರು ಸಂಸದರು ಚುನಾಯಿತ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಂದು ಕೌಜಲಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾಪನ ಸಮಿತಿಯ ಅಧ್ಯಕ್ಷ ರಾಜೇಂದ್ರ ಸಣ್ಣಕ್ಕಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.