ADVERTISEMENT

ಪಂಪ್‌ಸೆಟ್‌ಗಳಿಗೆ ಆಧಾರ್‌ ಜೋಡಣೆ ಕೈಬಿಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2024, 12:25 IST
Last Updated 4 ಸೆಪ್ಟೆಂಬರ್ 2024, 12:25 IST
<div class="paragraphs"><p>ಬೆಳಗಾವಿಯ ಹೆಸ್ಕಾಂ ಅಧೀಕ್ಷಕರ ಕಚೇರಿ ಆವರಣದಲ್ಲಿ ರೈತರು ಬುಧವಾರ ಪ್ರತಿಭಟನೆ ನಡೆಸಿದರು    ಪ್ರಜಾವಾಣಿ ಚಿತ್ರ</p></div>

ಬೆಳಗಾವಿಯ ಹೆಸ್ಕಾಂ ಅಧೀಕ್ಷಕರ ಕಚೇರಿ ಆವರಣದಲ್ಲಿ ರೈತರು ಬುಧವಾರ ಪ್ರತಿಭಟನೆ ನಡೆಸಿದರು ಪ್ರಜಾವಾಣಿ ಚಿತ್ರ

   

ಬೆಳಗಾವಿ: ನೀರಾವರಿ ಪಂಪ್‌ಸೆಟ್‌ಗಳ ವಿದ್ಯುತ್‌ ಮೀಟರ್‌ ಸಂಖ್ಯೆಗೆ ಆಧಾರ್‌ ಸಂಖ್ಯೆ ಜೋಡಣೆ ಆದೇಶ ಕೈಬಿಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಇಲ್ಲಿನ ಹೆಸ್ಕಾಂ ಅಧೀಕ್ಷಕರ ಕಚೇರಿ ಆವರಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ಅಪಾರ ಸಂಖ್ಯೆಯಲ್ಲಿ ಸೇರಿದ್ದ ರೈತರು ಕಚೇರಿಗೆ ನುಗ್ಗದಂತೆ ಪೊಲೀಸರು ತಡೆದರು. ಆಗ ಕಚೇರಿ ಆವರಣದಲ್ಲೇ ಕುಳಿತ ಪ್ರತಿಭಟನಕಾರರು, ವಿದ್ಯುತ್‌ ವಲಯದ ಖಾಸಗೀಕರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಹಾಗೂ ಪಂಪ್‌ಸೆಟ್‌ಗಳ ವಿದ್ಯುತ್‌ ಮೀಟರ್‌ಗೆ ಆಧಾರ್‌ ಸಂಖ್ಯೆ ಜೋಡಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ADVERTISEMENT

ಇಲ್ಲಿಯೇ ಅಡುಗೆ ಮಾಡಿ ಊಟ ಮಾಡಿದರು. ನಂತರ ಹೆಸ್ಕಾಂ ಅಧೀಕ್ಷಕ ಎಂಜಿನಿಯರ್‌ ಮುಖಾಂತರ ಮುಖ್ಯಮಂತ್ರಿಗೆ ಮನವಿ ರವಾನಿಸಿದರು.

‘ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ರೈತರಿಂದ ಹೆಚ್ಚಿನ ಶುಲ್ಕ ಭರಿಸಿಕೊಳ್ಳುತ್ತಿರುವ ಆದೇಶವನ್ನು ರಾಜ್ಯ ಸರ್ಕಾರ ರದ್ದುಪಡಿಸಬೇಕು. ವಿದ್ಯುತ್‌ ಅವಘಡದಲ್ಲಿ ಮೃತಪಟ್ಟವರಿಗೆ ₹10 ಲಕ್ಷ ಪರಿಹಾರ ನೀಡಬೇಕು. ಸೋಲಾರ್‌ ಸಂಪರ್ಕ ಹೊಂದುವ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವ ಆದೇಶ ಕೈಬಿಡಬೇಕು. ನಗರ ಹಾಗೂ ಗ್ರಾಮೀಣ ಭಾಗದ ಜನರಿಗೆ ತಾರತಮ್ಯ ಮಾಡದೆ, ಸಮಾನವಾಗಿ ವಿದ್ಯುತ್‌ ಪೂರೈಸಬೇಕು. ಹೆಚ್ಚಿಸಿರುವ ವಿದ್ಯುತ್‌ ಶುಲ್ಕ ಇಳಿಸಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಉಪಾಧ್ಯಕ್ಷ ಭೀಮಶಿ ಗಡಾಡಿ, ‘ನೀರಾವರಿ ಪಂಪ್‌ಸೆಟ್‌ಗಳ ವಿದ್ಯುತ್ ಮೀಟರ್ ಸಂಖ್ಯೆಗೆ ಆಧಾರ್ ಸಂಖ್ಯೆ ಜೋಡಿಸುವುದರಿಂದ ರೈತರಿಗೆ ಮುಂದಿನ ವರ್ಷಗಳಲ್ಲಿ ಅನ್ಯಾಯವಾಗಲಿದೆ. ಈ ನಿಯಮ ಕೈಬಿಟ್ಟು, ಹಳೆಯ ಪದ್ಧತಿಯನ್ನೇ ಮುಂದುವರಿಸಬೇಕು’ ಎಂದು ಆಗ್ರಹಿಸಿದರು.

ಸಂಘಟನೆಯ ಬೆಳಗಾವಿ ತಾಲ್ಲೂಕು ಘಟಕದ ಅಧ್ಯಕ್ಷ ರಾಜು ಮಾರ್ವೆ, ‘ಈ ವ್ಯವಸ್ಥೆ ರೈತರ ಹಿತಾಸಕ್ತಿಗೆ ವಿರುದ್ಧವಾಗಿದೆ. ತಾವು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲೇ ರೈತರಿಗೆ ಮಾರಕವಾದ ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಕಾಂಗ್ರೆಸ್‌ ಪಕ್ಷವು ವಿಧಾನಸಭಾ ಚುನಾವಣೆಯಲ್ಲಿ ಘೋಷಿಸಿತ್ತು. ಆದರೆ, ಕೊಟ್ಟು ಮಾತು ಉಳಿಸಿಕೊಳ್ಳಲಿಲ್ಲ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.