ಬೈಲಹೊಂಗಲ: ಸಮೀಪದ ಯಕ್ಕುಂಡಿಯಲ್ಲಿ ಮೂರು ದಿನಗಳ ಕಾಲ ಜರುಗಿದ ಪೀರ ದಿಲಾವರ ಘೋರಿ ಶಾಹವಾಲಿ ಬಾಬಾ ಉರುಸ್ ಶನಿವಾರ ರಾತ್ರಿ ಸಂಪನ್ನಗೊಂಡಿತು. ಮುಸ್ಲಿಮರಷ್ಟೇ ಅಲ್ಲದೆ, ಹಿಂದೂಗಳು ಭಾಗವಹಿಸಿ ಭಾವೈಕ್ಯತೆ ಮೆರೆದರು.
ಮಲಪ್ರಭಾ ನದಿ ದಡದಲ್ಲಿರುವ ಯಕ್ಕುಂಡಿ ತನ್ನದೇಯಾದ ಐತಿಹಾಸಿಕ ಮತ್ತು ಧಾರ್ಮಿಕ ಪರಂಪರೆ ಹೊಂದಿದೆ. ‘ಯಜ್ಞಕುಂಡ’ ಎಂದೇ ಖ್ಯಾತಿ ಗಳಿಸಿದ ಈ ಊರಿಗೆ ಬಂದ ಪೀರ ದಿಲಾವರ ಘೋರಿ ಶಾಹವಲಿ ಬಾಬಾ ಅವರು ‘ಅಲ್ಲಾಹು’ವಿನ ಸಂದೇಶ ಸಾರುತ್ತ ಬಂದು ನೆಲೆಸಿದರು. ಅವರು ನಿಧನರಾದ ನಂತರ ಗ್ರಾಮಸ್ಥರು ದರ್ಗಾ ನಿರ್ಮಿಸಿದರು ಎಂದು ಇತಿಹಾಸ ಹೇಳುತ್ತದೆ.
ಈ ದರ್ಗಾದಲ್ಲಿ ಪ್ರತಿವರ್ಷ ಗ್ರಾಮಸ್ಥರು ಜಾತಿ ಭೇದ ಮರೆತು, ಉರುಸ್ ಆಚರಿಸುತ್ತ ಬಂದಿದ್ದಾರೆ. ಅಂತೆಯೇ ಈ ವರ್ಷವೂ ಉರುಸ್ ಸಡಗರದಿಂದ ಜರುಗಿತು. ಹಿಂದೂ–ಮುಸ್ಲಿಮರೆಲ್ಲ ಶ್ರದ್ಧೆ–ಭಕ್ತಿಯಿಂದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೆಲವರು ಉರುಳುಸೇವೆ ಮಾಡಿ ಭಕ್ತಿ ಸಮರ್ಪಿಸಿದರು. ಅದರಲ್ಲೂ ಮೊದಲ ದಿನದಂದು ನಡೆದ ‘ಸಂದಲ್ ಮೆರವಣಿಗೆ’ ಕಣ್ಮನ ಸೆಳೆಯಿತು.
ಕುಮಾರೇಶ್ವರ ವಿರಕ್ತಮಠದ ಪಂಚಾಕ್ಷರ ಸ್ವಾಮೀಜಿ, ಇಸ್ಲಾಂ ಧರ್ಮಗುರು ಮುರ್ಷಿದ್ ಪೀರಾ ಪೀರಜಾದೆ ಹಾಗೂ ಹಿರಿಯರಾದ ಮೋಹನರಾವ ದೇಸಾಯಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿದವು. ಕರ್ನಾಟಕ ಮಾತ್ರವಲ್ಲದೆ, ಗೋವಾ, ಮಹಾರಾಷ್ಟ್ರದಿಂದಲೂ ಭಕ್ತರ ದಂಡು ಹರಿದುಬಂದಿತ್ತು.
ಶಂಕರಗೌಡ ಪಾಟೀಲ, ಬಸವರಾಜ ಹೊಂಗಲ, ವಿನೋದರಾವ ದೇಸಾಯಿ, ಅಬ್ದುಲ್‌ಖಾದರ್ ಬಾರಿಗಿಡದ, ಮೋಹನ ಮೇಟಿ, ನಾಗಪ್ಪ ಹಿಟ್ಟಣಗಿ, ಬಂದೇನವಾಜ್ ಮುಲ್ಲಾ, ಮಕ್ತುಮಸಾ ಬಡೇಖಾನ್, ಇಸ್ಮಾಯಿಲ್ ಮುಜಾವರ ಮತ್ತಿತರರು ಉತ್ಸವದ ಯಶಸ್ಸಿಗೆ ಶ್ರಮಿಸಿದರು. ಕವ್ವಾಲಿ ಕಾರ್ಯಕ್ರಮ ಉರುಸ್‌ನ ಕಳೆ ಹೆಚ್ಚಿಸಿತು. ವಿವಿಧ ಸ್ಪರ್ಧೆಗಳು ಕುತೂಹಲ ಮೂಡಿಸಿದವು.
ನಮ್ಮೂರಿನಲ್ಲಿ ಜಾತಿ ಭೇದವಿಲ್ಲ. ಇಲ್ಲಿ ಯಾವುದೇ ಜಾತ್ರೆ ಉರುಸ್ ನಡೆದರೂ ಸರ್ವಧರ್ಮೀಯರು ಸೇರಿಕೊಂಡು ಆಚರಿಸುತ್ತೇವೆ. ಈ ಸಲವೂ ಸಂಭ್ರಮದಿಂದ ಉರುಸ್ ಆಚರಿಸಿದ್ದೇವೆ–ಶಂಕರಗೌಡ ಪಾಟೀಲ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.