ADVERTISEMENT

ಅಮೆರಿಕ ಸಂಸತ್ತಿಗೆ ಬೆಳಗಾವಿಯ ಶ್ರೀನಿವಾಸ ಆಯ್ಕೆ:ಡೆಮಾಕ್ರೆಟಿಕ್ ಪಕ್ಷದಿಂದ ಗೆಲುವು

ಕಮಲಾ ಹ್ಯಾರಿಸ್‌ ನೇತೃತ್ವದ ಡೆಮಾಕ್ರೆಟಿಕ್‌ ಪಕ್ಷದಿಂದ 2ನೇ ಬಾರಿ ಸಂಸತ್‌ ಪ್ರವೇಶ

ಸಂತೋಷ ಈ.ಚಿನಗುಡಿ
Published 8 ನವೆಂಬರ್ 2024, 6:03 IST
Last Updated 8 ನವೆಂಬರ್ 2024, 6:03 IST
ಕಮಲಾ ಹ್ಯಾರಿಸ್‌ ಜೊತೆ ಶ್ರೀನಿವಾಸ ಥಾಣೇದಾರ
ಕಮಲಾ ಹ್ಯಾರಿಸ್‌ ಜೊತೆ ಶ್ರೀನಿವಾಸ ಥಾಣೇದಾರ   

ಬೆಳಗಾವಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮೂಲದ ಶ್ರೀನಿವಾಸ ಥಾಣೇದಾರ (69) ಎಂಬುವರು ಅಮೆರಿಕ ಸಂಸತ್ತಿನ ಪ್ರತಿನಿಧಿಯಾಗಿ ಚುನಾಯಿತರಾಗಿದ್ದಾರೆ. ಕಮಲಾ ಹ್ಯಾರಿಸ್‌ ನೇತೃತ್ವದ ಡೆಮಾಕ್ರೆಟಿಕ್‌ ಪಕ್ಷದ ಅಭ್ಯರ್ಥಿಯಾಗಿ ಮಿಷಿಗನ್ ರಾಜ್ಯದಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದಾರೆ.

ಹಲವು ವರ್ಷಗಳಿಂದ ಅಮೆರಿಕದಲ್ಲಿ ಇರುವ ಶ್ರೀನಿವಾಸ ಥಾಣೇದಾರ ಅವರು ಬೆಳಗಾವಿಯ ಚಿಂತಾಮಣರಾವ್ ಸರ್ಕಾರಿ ಶಾಲೆ ಮತ್ತು ಪಿಯು ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದಾರೆ. ಅಲ್ಲಿ ವಿಜ್ಞಾನಿ, ಉದ್ಯಮಿ ಮತ್ತು ಇಂಗ್ಲಿಷ್‌ ಸಾಹಿತಿ ಆಗಿದ್ದಾರೆ.

ಶ್ರೀನಿವಾಸ ಅವರು ಮಿಷಿಗನ್ ರಾಜ್ಯದಿಂದ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಈ ಹಿಂದೆ ಟ್ರಂಪ್‌ ಸರ್ಕಾರ ಇದ್ದಾಗ ಅವರು ಮೊದಲ ಬಾರಿಗೆ 2020ರಲ್ಲಿ ಆಯ್ಕೆಯಾಗಿದ್ದರು. ಈ ಎಲ್ಲ ವಿವರಗಳನ್ನು ಶ್ರೀನಿವಾಸ ಅವರು ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ತಮಗೆ ಮತ ನೀಡಿ, ಎರಡನೇ ಬಾರಿಗೆ ಅಮೆರಿಕದ ಸಂಸತ್ತಿಗೆ ಕಳಿಸಿದ ಮಿಷಿಗನ್‌ ಜನತೆಗೆ ಕೃತಜ್ಞತಾ ಪತ್ರವನ್ನೂ ಅವರು ಬರೆದಿದ್ದಾರೆ.

ADVERTISEMENT

ಹಿನ್ನೆಲೆ: 1955ರ ಫೆಬ್ರುವರಿ 22ರಂದು ಚಿಕ್ಕೋಡಿಯಲ್ಲಿ ಶ್ರೀನಿವಾಸ ಜನಿಸಿದರು. ಅವರ ತಂದೆ ಬೆಳಗಾವಿಯ ನ್ಯಾಯಾಲಯದಲ್ಲಿ ನೌಕರರಾಗಿದ್ದರು. ಇಲ್ಲಿನ ಮೀರಾಪುರ ಗಲ್ಲಿಯಲ್ಲಿ ವಾಸವಿದ್ದ ಅವರು ಶಾಲಾ ಮತ್ತು ಪದವಿಪೂರ್ವ ಶಿಕ್ಷಣ ಪಡೆದ ಬಳಿಕ ಧಾರವಾಡದಲ್ಲಿ ಬಿ.ಎಸ್ಸಿ ಪದವಿ ಪಡೆದರು. 1977ರಲ್ಲಿ ಬಾಂಬೆ ವಿಶ್ವವಿದ್ಯಾಲಯದಿಂದ ರಸಾಯನ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬಳಿಕ ಅವರು ಮುಂಬೈನಲ್ಲೇ ನೆಲೆಸಿದರು.

‘1979ರಲ್ಲಿ ಅಮೆರಿಕಗೆ ತೆರಳಿದ ಶ್ರೀನಿವಾಸ ಅವರು 1982ರಲ್ಲಿ ‘ಪಾಲಿಮರ್ ಕೆಮಿಸ್ಟ್ರಿ’ ವಿಷಯದಲ್ಲಿ ಪಿಎಚ್‌.ಡಿ ಪದವಿ ಪಡೆದರು. 1982ರಿಂದ 1984ರವರೆಗೆ ಮಿಷಿಗನ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. ಪೆಟ್ರೊಲೈಟ್ ಕಾರ್ಪೊರೇಷನ್‌ನಲ್ಲಿ 1984ರಿಂದ 1990ರವರೆಗೆ ಪಾಲಿಮರ್ ಸಿಂಥೆಸಿಸ್ ಕೆಮಿಸ್ಟ್ ಹಾಗೂ ಪ್ರಾಜೆಕ್ಟ್ ಲೀಡರ್‌ ಆಗಿದ್ದರು’ ಎಂದು ಶ್ರೀನಿವಾಸ ಅವರ ಹಿರಿಯ ಸಹಪಾಠಿ ಉಲ್ಲಾಸ ಮೆಹಂದಾ ತಿಳಿಸಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಓದಿದ ಒಬ್ಬ ವಿದ್ಯಾರ್ಥಿ ಅಮೆರಿಕ ಸಂಸತ್ತಿನಲ್ಲಿ ಸ್ಥಾನ ಪಡೆದಿದ್ದು ಹೆಮ್ಮೆಯ ಸಂಗತಿ. ನಮ್ಮ ಶಾಲೆ ವಿದ್ಯಾರ್ಥಿಯ ಸಾಧನೆ ಹೆಮ್ಮೆ ಮೂಡಿಸಿದೆ.
-ಕೆ.ಎಸ್‌.ಅಷ್ಟಗಿ, ಇಂಗ್ಲಿಷ್‌ ಶಿಕ್ಷಕಿ ಸರ್ಕಾರಿ ಚಿಂತಾಮಣರಾವ್‌ ಪಿಯು ಕಾಲೇಜು ಬೆಳಗಾವಿ
ಶ್ರೀನಿವಾಸ ಬಾಲ್ಯದಿಂದಲೂ ಪ್ರತಿಭಾವಂತರು. ಅಮೆರಿಕದಲ್ಲಿ ಉದ್ಯಮಿ ಆಗುವುದು ಅವರ ಕನಸಾಗಿತ್ತು. ಅದನ್ನು ಮೀರಿ ಸಾಧನೆ ಮಾಡಿದ್ದಾರೆ.
-ಉಲ್ಲಾಸ ಮೆಹಂದಾ, ಶ್ರೀನಿವಾಸ ಥಾಣೇದಾರ ಅವರ ಸಹಪಾಠಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.