ADVERTISEMENT

ಅನುದಾನ ಬಳಸದಿದ್ದರೆ ಕಠಿಣ ಕ್ರಮ

ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹಿರೇಮಠ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 10:24 IST
Last Updated 21 ಜುಲೈ 2020, 10:24 IST

ಬೆಳಗಾವಿ: ‘ವಿಶೇಷ ಘಟಕ ಯೋಜನೆ (ಎಸ್‌ಸಿಪಿ) ಮತ್ತು ಗಿರಿಜನ ಉಪ ಯೋಜನೆ (ಟಿಎಸ್‌ಪಿ)ಯಲ್ಲಿ ಹಂಚಿಕೆಯಾದ ಅನುದಾನ ಖರ್ಚು ಮಾಡುವುದು ಕಡ್ಡಾಯವಾಗಿದೆ. ಈ ಕಾರ್ಯಕ್ರಮಗಳಲ್ಲಿ ನಿಗದಿತ ಗುರಿ ಸಾಧಿಸದ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಎಚ್ಚರಿಕೆ ನೀಡಿದರು.

ಇಲ್ಲಿ ಮಂಗಳವಾರ ನಡೆದ ‘ಎಸ್.ಸಿ.ಪಿ., ಟಿ.ಎಸ್.ಪಿ. ಅನುದಾನದಲ್ಲಿ ಕೈಗೊಂಡ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಿಲ್ಲೆಗೆ ಎಸ್.ಸಿ.ಪಿ. ಯೋಜನೆಯಡಿ ₹ 325.68 ಕೋಟಿ ಹಂಚಿಕೆಯಾಗಿದೆ. ಈ ಪೈಕಿ ಬಿಡುಗಡೆಯಾದ ₹ 333.54 ಕೋಟಿಯಲ್ಲಿ ₹ 246.57 ಕೋಟಿ ಖರ್ಚಾಗಿದೆ. ಹಂಚಿಕೆಯಾದ ಅನುದಾನಕ್ಕೆ ಶೇ.76 ಮತ್ತು ಬಿಡುಗಡೆಯಾದ ಅನುದಾನದಲ್ಲಿ ಶೇ.74ರಷ್ಟು ಸಾಧನೆಯಾಗಿದೆ. ಅದೇ ರೀತಿ ಟಿ‌ಎಸ್‌ಪಿ ಯೋಜನೆಯಲ್ಲಿ ₹ 91.67 ಕೋಟಿ ಹಂಚಿಕೆಯಾಗಿದ್ದು, ₹ 89.60 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ ₹ 63 ಕೋಟಿ ಖರ್ಚಾಗಿದ್ದು, ಶೇ 71ರಷ್ಟು ಪ್ರಗತಿ ಕಂಡುಬಂದಿದೆ’ ಎಂದು ತಿಳಿಸಿದರು.

ADVERTISEMENT

ನೋಟಿಸ್ ನೀಡಲು ಸೂಚನೆ:

‘ಮಾರ್ಚ್ ಅಂತ್ಯಕ್ಕೆ ಗುರಿ ಸಾಧಿಸದಿರುವ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಸಭಾ ಸೂಚನಾಪತ್ರ ನೀಡಿದಾಗ್ಯೂ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡಬೇಕು’ ಎಂದು ಸೂಚಿಸಿದರು.

‘ಕೊರೊನಾ ನೆಪದಲ್ಲಿ ಗುರಿ ಸಾಧನೆಯಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಉಳಿಯುವಂತಿಲ್ಲ. ಮುಂದೆಯೂ ನಿರ್ಲಕ್ಷ್ಯ ವಹಿಸುವವರ ವಿರುದ್ಧ ಕಾನೂನು ಪ್ರಕ್ರಿಯೆ ಆರಂಭಿಸಲಾಗುವುದು’ ಎಂದೂ ಎಚ್ಚರಿಕೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಉಮಾ ಸಾಲಿಗೌಡರ, ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.