ADVERTISEMENT

ವಾಲ್ಮೀಕಿ ನಿಗಮ ಹಗರಣ| ತಪ್ಪು ಮಾಡಿದ್ದರೆ ಒಪ್ಪಿಕೊಂಡು ಬಿಡಬೇಕು: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 7:19 IST
Last Updated 12 ಜುಲೈ 2024, 7:19 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಬೆಳಗಾವಿ: 'ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ತಪ್ಪು ಮಾಡಿದ್ದರೆ ಒಪ್ಪಿಕೊಂಡು ಬಿಡಬೇಕು. ಅದು ಅಲ್ಲಿಗೇ ಮುಗಿದುಹೋಗುತ್ತದೆ. ಒಂದು ಸುಳ್ಳು ಮುಚ್ಚಿಡುವುದಕ್ಕೆ‌ ಮತ್ತಷ್ಟು ಸುಳ್ಳು ಹೇಳಬಾರದು' ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ‌ ನೀಡಿದ ಅವರು, 'ಈ ಪ್ರಕರಣ ರಾಜಕೀಯ ಸ್ವರೂಪ ಪಡೆದಿದೆ ಎಂದು ಈಗಲೇ ಹೇಳಲು ಆಗುವುದಿಲ್ಲ.‌ ಹಾಗಂತ ರಾಜಕೀಯವೇ ಇಲ್ಲ ಎಂದೂ ನಿರ್ಧರಿಸಲು‌ ಆಗುತ್ತಿಲ್ಲ. ತನಿಖೆ ನಡೆಯುತ್ತಿದೆ. ದಾಖಲೆಗಳೇ ಇದರ ಸತ್ಯಾಸತ್ಯತೆ ಹೇಳಬೇಕು' ಎಂದರು‌.

'ನಾಗೇಂದ್ರ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಮುಜುಗರ ಆಗಿಲ್ಲವೇ' ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಅವರು ತಪ್ಪು ಮಾಡಿದ್ದರೆ ಖಂಡಿತ ನಮಗೂ ಮುಜುಗರ ಆಗುತ್ತದೆ‌. ಇದು ಇನ್ನೂ ತನಿಖಾ ಹಂತದಲ್ಲಿದೆ‌. ಸಚಿವರು, ಶಾಸಕರು ಇದರಲ್ಲಿ ಭಾಗಿಯಾಗಿದ್ದರೆ ಸರ್ಕಾರಕ್ಕೆ ಅದರಿಂದ ಕಳಂಕ' ಎಂದರು.

ADVERTISEMENT

'ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಬಿಜೆಪಿ ಒತ್ತಾಯಿಸುತ್ತಿದ್ದಾರೆ; ರಾಜೀನಾಮೆ ಸಾಧ್ಯವೇ' ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ, 'ಈ ಪ್ರಕರಣದಿಂದ ಮುಖ್ಯಮಂತ್ರಿ ಅವರ ಸ್ಥಾನಕ್ಕೆ‌ ಯಾವುದೇ ಆತಂಕವಿಲ್ಲ. ನಮ್ಮ ಇಲಾಖೆ ನಾವು ನೋಡಿಕೊಳ್ಳಬೇಕಾಗುತ್ತದೆ. ಅದಕ್ಕೆ ನಾವೇ ಜವಾಬ್ದಾರರು. ಹಾಗಾಗಿ, ಸಿ.ಎಂ ಕುರ್ಚಿಗೂ ಇದಕ್ಕೂ ಸಂಬಂಧವೇ ಇಲ್ಲ' ಎಂದು ಹೇಳಿದರು.

'ಮೈಸೂರಿನಲ್ಲಿ‌ ನಡೆದ 'ಮುಡಾ' ಹಗರಣ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಮೈಸೂರು ಚಲೋ ಹೋರಾಟ ಮಾಡಲು ಮುಂದಾಗಿದ್ದಾರೆ. ಅದರಿಂದ ಏನೂ ಆಗುವುದಿಲ್ಲ. ಅಂಥ ಬಹಳಷ್ಟು ಪ್ರಕರಣಗಳು ಆಗಿವೆ. ನಮಗೂ ಗೊತ್ತಿವೆ. ಬೆಳಗಾವಿಯಲ್ಲೂ ಅಂಥದ್ದೇ ಕೇಸ್ ನಾವು ನೋಡಿದ್ದೇವೆ. ಹಾಗಾಗಿ, ಮುಡಾ ಹಾಗೂ ವಾಲ್ಮೀಕಿ ನಿಗಮ ಎರಡನ್ನೂ ಹೋಲಿಸಲು ಆಗುವುದಿಲ್ಲ. ಮುಡಾ ಪ್ರಕರಣವನ್ನು ರಾಜಕೀಯ ಎಂದು ಖಂಡಿತವಾಗಿ ಹೇಳಬಹುದು' ಎಂದು ಸಚಿವ ಹೇಳಿದರು.

'ಕಾಂಗ್ರೆಸ್ ಒಳಜಗಳದ ಕಾರಣ ಮುಡಾದಂಥ ಪ್ರಕರಣ ಹೊರಬರುತ್ತಿವೆ ಎಂದು ಬಿಜೆಪಿ‌ ಮುಖಂಡರು ಹೇಳುತ್ತಿದ್ದಾರೆ. ಅದು ನಿಜವಲ್ಲ. ಯಾವುದೇ ಪಕ್ಷದಲ್ಲಿ ಒಳಜಗಳ‌ ಇದೆಯೋ ಇಲ್ಲವೋ; ಹಗರಣ ಒಂದಲ್ಲ ಒಂದು‌ ದಿ‌ನ‌ ಹೊರಗೆ ಬಂದೇ ಬರುತ್ರವೆ' ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.